ಮುನ್ನುಡಿಯೊಡನೆ ಮುಂದಡಿಯಿಡುವುದು ಬಹುಪಾಲು ಬರಹಗಾರರ ಬಯಕೆ. ಯಾವುದೇ ಗ್ರಂಥವನ್ನು ಓದುವ ಮುನ್ನ "ಮುನ್ನುಡಿ", ಓದಿಯೇ ಮುಂದುವರೆಯಬೇಕು. ಮುನ್ನುಡಿಯಲ್ಲಿ ಗ್ರಂಥದ ಬಗೆಗಿನ ಸ್ಕೂಲ ಪರಿಚಯ ದೊರೆಯುತ್ತದೆ. ಇದನ್ನು ಏಕೆ ಓದಬೇಕು ಎಂಬ ಪ್ರಶ್ನೆಗೆ ಉತ್ತರವೂ ತಕ್ಕಮಟ್ಟಿಗೆ ಮುನ್ನುಡಿಯಲ್ಲಿ ದೊರೆಯುತ್ತದೆ. ಸಾಮಾನ್ಯವಾಗಿ ಪುಸ್ತಕದ ಹಿರಿಮೆಯನ್ನು ಹೆಚ್ಚಿಸಲು ಮುನ್ನುಡಿ ಸಹಾಯಕವೆಂದೇ ಮುನ್ನುಡಿ ಬರೆಸುತ್ತಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅಗಣಿತ ಸಾಹಿತ್ಯ ಕೃತಿಗಳು ರಚನೆಯಾಗಿದ್ದರೂ, ಒಂದೊಂದನ್ನೂ ಓದುತ್ತಾ ಸಾಗುತ್ತಿದ್ದಂತೆ ಏನೋ ಒಂದು ಹೊಸತನ ಗೋಚರಿಸುವುದು. ಅದು ಬರಹಗಾರರ ಜಾಣೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಹಾಗೆಯೇ ಎಲ್ಲೋ ಒಂದು ಕಡೆ, ಒಂದು ಸೂಕ್ಷ್ಮತೆಯನ್ನು ತನ್ನೊಳಗೆ ಹುದುಗಿಸಿಕೊಂಡ ಒಂದು ಸಣ್ಣ ಎಳೆಯು ಓದುಗನಿಗೆ ಕಗ್ಗಂಟಾಗಿ ಬಿಡುತ್ತದೆ. ಆ ಎಳೆಯ ಜಾಡನ್ನು ಹಿಡಿದು ಸಾಗುವಂಥ ಧೈರ್ಯ ತೆಗೆದುಕೊಳ್ಳುವವರು ಹಾಗೂ ಶ್ರಮವನ್ನು ಕೆಲವರು ಮಾತ್ರ. ಸೂಕ್ಷ್ಮಮತಿಗಳಿಗೆ ಹೊಳೆಯುವ ಈ ಸಂಗತಿಯನ್ನು ಬಿಡಿಸಹೊರಟಾಗ ಒಂದು ಹೊಸ ರೋಚಕ ಕಥೆಯು ಹುಟ್ಟಿಕೊಳ್ಳುತ್ತದೆ. ಅಂಥಾ ಒಂದು ಕಾರ್ಯವನ್ನು ಆತ್ಮೀಯರಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರಸ್ವತಿ ಕೋಟೇಶ್ವರರವರು 'ಒಲವ ಶ್ರುತಿ 'ಎಂಬ ಕವನ ಸಂಕಲನವನ್ನು ಹೊರ ತರುವ ಮೂಲಕ ಕನ್ನಡ ಸಾಹಿತ್ಯಕ್ಕೆ ಒಲವು ತುಂಬಿದ್ದಾರೆ ಎಂದರೆ ಅದು ನಿಜಕ್ಕೂ ಶ್ಲಾಘನೀಯ. ಕಥೆ, ಕಾದಂಬರಿ ಓದುವ ಹವ್ಯಾಸದ ಜೊತೆಗೆ ಕವನಗಳನ್ನು ರಚಿಸಿರುವುದು ಮೆಚ್ಚುವಂತದ್ದು. ಪ್ರೀತಿ ಎಂಬುದು ಮುಗುಳ್ನಗೆಯ ಸಂದೇಶ ಹಾಗೂ ವಿನಿಮಯ. ಕಣ್ಣ ಸನ್ನೆಯ ಮೂಲಕ ಹೃದಯ ಹೊಕ್ಕು ಮನಸೆಲ್ಲಾ ಸುಳಿದಾಡಿ ಬಿಡುತ್ತದೆ. ಯೌವನಕ್ಕೆ ಶರಣಾಗಿ, ಸಂಚಾರಿಯಾಗುತ್ತ ಮನದ ಭಾವಕ್ಕೆ ಹೊಸದೊಂದು ರೂಪವನ್ನು ಕೊಟ್ಟು ಕವಿಯ ಮನಸ್ಸಿನಲ್ಲಿ ಉಳಿಯುವ ನೆನಪುಗಳು ಕವಿ ಅಥವಾ ಕವಯಿತ್ರಿಗೆ ಮರುಹುಟ್ಟು ಎನ್ನಬಹುದು. ಆಕಸ್ಮಿಕವಾಗಿ ಒಂದು ಸಾಹಿತ್ಯ ಕಾರ್ಯಕ್ರಮದಲ್ಲಿ ಭೇಟಿಯಾದ ನಮ್ಮಿಬ್ಬರನ್ನು ಸಾಹಿತ್ಯ ಮತ್ತಷ್ಟು ಪರಿಚಿತರನ್ನಾಗಿ ಮಾಡಿತು. ಅವರ 'ಒಲವ ಶ್ರುತಿ' ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡುವಷ್ಟು ಹತ್ತಿರವಾಗಿಸಿದೆ. ಸಾಮಾನ್ಯವಾಗಿ ಯುವ ಕವಯಿತ್ರಿ ಸರಸ್ವತಿಯವರ ಕವನಗಳು ವಯಸ್ಸಿಗೆ ಸಹಜವೆಂಬತೆ ಸ್ನೇಹ, ಪ್ರೀತಿಸುವ ಹೃದಯಗಳು, ಪ್ರಣಯ, ವಿರಹಗಳ, ಪರಿಸರ, ಬಾಲ್ಯ, ಇತ್ಯಾದಿಗಳ ಸುತ್ತ ಗಿರಕಿ ಹೊಡೆಯುತ್ತವೆ.
Comments (0)
Post Comment
Report Abuse
Be the first to comment using the form below.