(JavaScript required to view this email address)
Mangalore

News & Articles

ತಮ್ಮ ಬಳಿ ಕಲಿತ ವಿದ್ಯಾರ್ಥಿಗಳು ಸಾಧನೆ ಕಡೆ ಮುಖ ಮಾಡಿದಾಗ, ತಮಗಿಂತ ಉನ್ನತ ಸಾಧನೆ ಮಾಡುವ ಲಕ್ಷಣಗಳು ವಿದ್ಯಾರ್ಥಿಗಳಲ್ಲಿ ಕಂಡುಬAದರೆ ಗುರುಗಳಿಗೆ ಎಲ್ಲಿಲ್ಲದ ಅಭಿಮಾನ ಅಪಾರ ಪ್ರೀತಿ, ಗೌರವ ಆ ವಿದ್ಯಾರ್ಥಿಗಳ ಬಗ್ಗೆ ಹುಟ್ಟುವುದು ಸಹಜವಲ್ಲವೇ? ಈ ಸಹಜತೆಯನ್ನು ನಿಜವಾಗಿಸಿದವಳೇ ಪೂರ್ಣ ಸುಧೆಯ ಯುವ ಕವಯಿತ್ರಿ ಪೂನಂ ಧಾರವಾಡಕರ. ಹೌದು ಇವಳು ನನ್ನ ಶಿಷ್ಯೆ ಎಂಬುದೇ ಹೆಮ್ಮೆಯ ಖುಷಿಯ ವಿಚಾರ. ವಿದ್ಯಾರ್ಥಿ ದೆಸೆಯಿಂದಲೇ  ಓದು, ಬರವಣಿಗೆ ಬಗ್ಗೆ ಅಪಾರ ಆಸಕ್ತಿ ಇವಳಿಗಿತ್ತು ಯಾವುದೇ ವಿಷಯದ ಕುರಿತು ಬರೆ ಎಂದರೆ ತುಂಬಾ ಚೆನ್ನಾಗಿ ಬರೆಯುತ್ತಿದ್ದಳು ಜೊತೆಗೆ ಮಾತು ಕೂಡಾ ಆಡುತ್ತಿದ್ದಳು. ಅಂದಿನ ಅವಳ ಸಾಹಿತ್ಯ ಅಸಕ್ತಿ ಇಂದು ಫಲ ನೀಡುತ್ತಿದೆ. ಇದರ ಪರಿಣಾಮವೇ ಅವಳ ಲೇಖನಿಯಿಂದ ಒಡಮೂಡಿದ ಉತ್ಕೃಷ್ಠ ಕವನಗಳ ಗುಚ್ಚವೇ ಈ ಪೂರ್ಣ ಸುಧೆ. ನನ್ನ ವಿದ್ಯಾರ್ಥಿ ಬರೆದ ಕವನ ಸಂಕಲನಕ್ಕೆ ನಾನೇ ಮುನ್ನುಡಿ ಬರೆಯುತ್ತಿರುವುದು ಅತೀವ ಸಂತಸ ತಂದಿದೆ. ಶಿಷ್ಯೆಯ ಮೇಲಿನ ಅಭಿಮಾನದಿಂದ ಈ ಮುನ್ನುಡಿ ಬರೆಯುತ್ತಿರುವೆ . ಇದು ಅವಳಿಗೆ ಶುಭಾರ್ಶೀವಾದವು ಕೂಡಾ ಆಗಲಿ. ಇದು ಇವಳ ಮೊದಲ ಕವನ ಸಂಕಲನ. ಇಲ್ಲಿನ ಕವನಗಳ ವಿಷಯ ವಸ್ತು ಆಯ್ಕೆ, ಕವನ ಬರೆದ ರೀತಿ ಅವುಗಳ ಸೊಗಡು ಕಂಡರೆ ಇದು ಅವಳ ಮೊದಲ ಸಂಕಲನ ಎನಿಸದು. ಅಷ್ಟು ಚೆನ್ನಾಗಿ ಭಾಷೆಯ ಮೇಲೆ ಹಿಡಿತ ಎದ್ದು ಕಾಣುತ್ತಿದೆ. ಹಳಿಯಾಳ ಭಾಗದಲ್ಲಿ ಯಾವುದೇ ಕವಿಗೋಷ್ಠಿ ನಡೆದರು ಪೂನಂ ಧಾರವಾಡಕರ ಇವಳ ಕವನ ವಾಚನ ಇರಲೇಬೇಕು. ತಾಲೂಕಿನ ಹಿರಿಯ ಸಾಹಿತಿಗಳ ಮೆಚ್ಚುಗೆ ಪಡೆದ ಕಿರಿಯ ಕವಯಿತ್ರಿ ಇವಳಾಗಿದ್ದಾಳೆ .ಇವಳು ಬರೆದ ಪೂರ್ಣ ಸುಧೆಯ ಒಳಹೊಕ್ಕಾಗ ಅನೇಕ ವಿಚಾರಗಳು ತಿಳಿಯುತ್ತವೆ. ಇದು ವಿವಿಧ ವಿಷಯಗಳ ಅರವತ್ತು ಉಜ್ವಲವಾದ, ಹಲವು ಸಂದೇಶ ನೀಡುವ ಭಾವನೆಗಳ ಬರವಣಿಗೆಗಳುಳ್ಳ ಕವನಗಳ ಗುಚ್ಛ ಇದಾಗಿದೆ. ಗೌರಿತನಯ, ಜ್ಞಾನದ ಮಾತೆ, ಹರಸು ಗುರುವೇ ಮೂಲಕ ಪ್ರಾರಂಭವಾಗುವ ಕವನಗಳು ಹೊನ್ನಭಾವದ ಮೂಲಕ ಈ ಕವನ ಸಂಕಲನ ಮುಕ್ತಾಯವಾಗುವುದು. ಭಾವಗಳಿಗೆ ಅಂತ್ಯ ಇಲ್ಲ ಎಂಬುದು ಇಲ್ಲಿ ಸ್ಮರಿಸಬಹುದು. ಸಾಹಿತ್ಯವನ್ನು ಆಧರಿಸಿ ಇಲ್ಲಿನ ಕವನಗಳನ್ನು ಗಮನಿಸಿದಾಗ ಕಂದದ ಒಲವು, ದ್ವಿಪದಿಯ ಚೆಲುವು, ತ್ರಿಪದಿಯ ಹರಿವು ಷಟ್ಟದಿಯ ದರುಶನ ಇಲ್ಲಿ ಕಂಡುಬoದಿದೆ. ಯುವ ಲೇಖಕಿ ತನ್ನ ಸುತ್ತಮುತ್ತ ಕಾಣುವ, ಅನುಭವಿಸುವ, ನೋಡುವ ವಿಷಯಗಳನ್ನೆ ತನ್ನ ಕವನಗಳ ವಿಷಯಗಳನ್ನಾಗಿ ಮಾಡಿಕೊಂಡಿದ್ದು ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಗೌರಿ ತನಯ, ಗುರುಸ್ಮರಣೆ, ಸುಂದರ ಭಾವ ಅಮ್ಮ, ಅನುಭವದ ರತ್ನ, ಶಾಲೆ, ಕನ್ನಡದ ಕಂಪು, ಹರಸು ಶಿವನೇ. ಬೆಳಕಿನ ಬತ್ತಿ, ಜೀವನ, ಗೃಹಿಣಿ, ಕನಕದಾಸರು, ಹರಿಚಿಂತನೆ ಮುಂತಾದ ಕವನಗಳೇ ಇದಕ್ಕೆ ಉದಾಹರಣೆಯಾಗಿವೆ. ಕೆಲವು ಕವನಗಳಲ್ಲಿ ಸ್ತೀಪರವಾದ ಸಂವೇದನೆ ಎದ್ದು ಕಂಡಿದ್ದು ಸ್ರೀಯರಿಗೆ ಸೂಕ್ತ ಗೌರವ ಸ್ಥಾನಮಾನ ಸಮಾಜದಲ್ಲಿ ಸಿಗಲಿ ಎಂಬುದು ಕವಯಿತ್ರಿಯ ಆಶಯವಾಗಿದೆ. ಗೃಹಿಣಿ ಕವನದ ಮೂಲದ ಮನೆಯಲ್ಲಿ ನೂರೆಂಟು ಕೆಲಸ ಮಾಡುವ ಗೃಹಿಣಿಯರ ತ್ಯಾಗವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾಳೆ. ಯಾರೇ ಆಗಲಿ ಸುಂದರ ಬದುಕು ನಿರ್ಮಿಸಿಕೊಳ್ಳಲು ಜ್ಞಾನ ಅಗತ್ಯ ಎಂಬುದು ಜ್ಞಾನದ ಮಾತೆ ಕವನ ತಿಳಿಸುವುದು. ಸಹಜವಾಗಿ ಗುರುಗಳ ಮೇಲೆ ಅಪಾರ ಭಯ ಭಕ್ತಿ ಪೂನಂ ಇವಳಿಗೆ ಇದೆ. ಈ ಭಾವ ಇವಳನ್ನು ಹರಸು ಗುರುವೇ, ಗುರು ನಮನ ಎಂಬಿತ್ಯಾದಿ ಕವನಗಳನ್ನು ಬರೆಯಲು ಪ್ರೇರಣೆ ನೀಡಿದೆ ಎನ್ನಬಹುದು. ನನಗೆ ಆಶ್ವರ್ಯ ಎನಿಸಿದ್ದು ಇವಳು ಹರಿಚಿಂತನೆ ಕವನವನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದು . ಪ್ರಾಸಗಳ ಮೇಲೆ ಸಹಜ ಮೋಹ ಇದೆ ಎಂದು ಇಲ್ಲಿನ ಹಲವು ಪ್ರಾಸ ಪದಗಳನ್ನು ಹೊಂದಿರುವ ಕವನಗಳು ಬಂದಿರುವುದು ಸಾಕ್ಷಿ. ಮುಂದುವರೆದು ಕನಕದಾಸರ, ಶಿವಾಜಿ ಮಹಾರಾಜರ ಬಗ್ಗೆ ಬರೆದದ್ದು ಉತ್ತಮ ವ್ಯಕ್ತಿ ಆಧಾರಿತ ಕವನಗಳಾಗಿವೆ. ಇಲ್ಲಿ ಮೂಡಿ ಬಂದ ಜೀವನದ ವ್ಯಾಖ್ಯಾನ ಸರಳ ಸುಂದರ. ಹಸುರಿನ ಯುಗಕಾಲದ ವರ್ಣನೆ ನಿಸರ್ಗ ಪ್ರೀತಿಯ ದ್ಯೋತಕ.ಬೆಳಕಿನ ಬತ್ತಿ ಹೆಣ್ಣಿನ ಮನದಾಳದ ಭಾವನೆಗಳ ಅಭಿವ್ಯಕ್ತಿ ಬರಹ. ಅನುಭಾವದ ರತ್ನ ಮಕ್ಕಳನ್ನು ಸಾಕಿ ಸಲಹುವ ತಂದೆಯ ಸ್ಮರಣೆ ಪದಗಳ ಸಮೂಹಗಳ ಗುಚ್ಛವಾಗಿದೆ. ಕನ್ನಡ ಕಂಪು ನಾಡಿನ ಶಿಲ್ಪಕಲೆಯ ಮೇಲೆ ಬೆಳಕು ಚೆಲ್ಲುವುದು. ಹೀಗೆ ಈ ಕವನ ಸಂಕಲದ ಪ್ರತಿ ಕವನ ರಚನಾ ಶೈಲಿಯಿಂದ ವಿಶೇಷ ಎನಿಸುತ್ತವೆ. ಹಲವೆಡ ನೇರ ಅರ್ಥ ಇನ್ನು ಕೆಲವೆಡೆ ವಾಚ್ಯಾರ್ಥ ಕವನಗಳಲ್ಲಿ ಇವೆ. ಇಲ್ಲಿನ ಕವನಗಳು ಓದುತ್ತಾ ಹೋದರೆ ಇಲ್ಲಿ ಅಭಿವ್ಯಕ್ತಿಗೊಂಡ ಭಾವನೆಗಳು ಹಲವು ಬಾರಿ ನಮ್ಮ ಭಾವಗಳೇ ಆಗಿವೆ ಎಂದರೆ ಆಶ್ಚರ್ಯವಾಗದು. ಕವನಗಳು ಓದಿಸಿಕೊಂಡು ಹೋಗುವ ಆಯಸ್ಕಾಂತೀಯ ಗುಣಗಳನ್ನು ಹೊಂದಿವೆ. ಪದ ಬಳಕೆ ಸರಳ ಸುಂದರವಾಗಿ ಮೂಡಿಬಂದಿವೆ.ಪೂರ್ಣ ಸುಧೆ ಸದಾ ಸುರಿಯಲಿ. ಇವಳ ಲೇಖನಿಯಿಂದ ಭವಿಷ್ಯದಲ್ಲಿ ಮತ್ತಷ್ಟು ಕೃತಿಗಳು ಸಾಹಿತ್ಯಕ್ಕೆ ಲೋಕಕ್ಕೆ ಸಿಗಲಿ. 
ಒಳಿತಾಗಲಿ ಕಂದಾ
ಶ್ರೀ ರಂಗನಾಥ ಎನ್ ವಾಲ್ಮೀಕಿ
ಲೇಖನಕಾರರು ಮತ್ತು ಶಿಕ್ಷಕರು

ಪೂನಂ ಧಾರವಾಡಕರ  ಅವರ ಪೂರ್ಣ ಸುಧೆ

ಉದಯೋನ್ಮುಖ ಕವಯಿತ್ರಿ, ಶ್ರೀಮತಿ ಪೂನಂ ಧಾರವಾಡಕರ ಅವರ ಚೊಚ್ಚಲ ಕವನ ಸಂಕಲನ 'ಪೂರ್ಣ ಸುಧೆ' ಓದಿದಾಗ ಅವರ ಸಾಹಿತ್ಯ ಪ್ರತಿಭೆಯ ಪೂರ್ಣ ಚಿತ್ರಣ ಗೋಚರಿಸುತ್ತದೆ. ತನ್ನದೇ ಛಾಪಿನಲ್ಲಿ ಹರಿಸುವ ಅವರ ಕವನಗಳೆಲ್ಲವೂ ಭಾವಪೂರ್ಣ ಮತ್ತು ಅರ್ಥಪೂರ್ಣ. ಮೊದಮೊದಲಿಗೆ ಛಂದೋಮುಕ್ತ ರಚನೆಗಳನ್ನೇ ಹೆಚ್ಚಾಗಿ ಬರೆಯುತ್ತಿದ್ದ ಪೂನಂ ಅವರು ಇತ್ತೀಚೆಗೆ ಛಂದೋಬದ್ಧ ಕಾವ್ಯಗಳಲ್ಲಿ ಕೂಡ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಪೂರ್ಣ ಸುಧೆಗೆ ಆಯ್ಕೆ ಮಾಡಿರುವ ಕವನಗಳನ್ನು ಅನುಕ್ರಮವಾಗಿ ಪರಿಶೀಲಿಸಿದಾಗ, ಅವರ ಜೀವನಾದರ್ಶದ ಪರಿಕಲ್ಪನೆ ಮತ್ತು ಜೀವನದ ಆದ್ಯತೆಯ ಪರಿಚಯವಾಗುತ್ತದೆ. ದೇವರನ್ನು ಮುಂದಿಟ್ಟುಕೊAಡು ಕವಯಿತ್ರಿ ಪೂನಂ ಅವರು ತನ್ನ ಕವನ ಮಾಲಿಕೆಯನ್ನು ಪೋಣಿಸಿದ್ದಾರೆ. ಗಣಪತಿಗೆ ವಂದಿಸಿ, ವಿದ್ಯಾ ದೇವಿ ಶಾರದೆಯನ್ನು ಸ್ತುತಿಸಿ, ನಂತರ ಗುರುಗಳಿಗೆ ಗೌರವಿಸಿ, ಬಳಿಕ ಕಣ್ಣಿಗೆ ಕಾಣಿಸುವ ದೇವರಾದ ತಾಯಿಯ ಸುಂದರ ಭಾವವನ್ನು, ಮತ್ತು ತಂದೆಯ ಅನುಬಂಧದ ಸೊಬಗನ್ನು ವರ್ಣಿಸಿದ್ದಾರೆ. ಅವರು ಆಯ್ಕೆ ಮಾಡಿರುವ ಉಳಿದೆಲ್ಲ ವಿಷಯಗಳು ನಮ್ಮ ನೆಲ, ನಮ್ಮ ಭಾಷೆ, ನಮ್ಮ ನಾಡು, ನಮ್ಮ ನಾಡಿನ ಸಾಧಕರು, ದಾಸಶ್ರೇಷ್ಟರು, ಮಕ್ಕಳು, ಪ್ರಕೃತಿ ಸೌಂದರ್ಯ, ಇತ್ಯಾದಿ ವೈವಿಧ್ಯಮಯ ಸಂಗತಿಗಳು ಒಟ್ಟಿನಲ್ಲಿ ಹಬ್ಬದ ಸಂಭ್ರಮದಲ್ಲಿ ಮೃಷ್ಟಾನ್ನ ಭೋಜನದಂತಿದೆ. ಸಾಹಿತ್ಯ ಲೋಕದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯಾದ ನಾನು ವಾಸ್ತವಿಕವಾಗಿ ಬೆನ್ನುಡಿ ಬರೆಯುವಷ್ಟು ಹಿರಿಯ ಸಾಹಿತಿಯಲ್ಲ. ಕವಯಿತ್ರಿ ಪೂನಂರವರ ಕವನ ಪ್ರತಿಭೆಯ ಪರಿಚಯವಾಗಿದ್ದು ಕಳೆದೆರಡು ವರ್ಷಗಳಿಂದ, ಬಹುತೇಕವಾಗಿ ಕವಿ ಬಳಗದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ. ಪೂರ್ಣ ಸುಧೆ ಕವನ ಸಂಕಲನವು ಪೂನಂರವರ ವ್ಯಕ್ತಿತ್ವದ ಮತ್ತು ಅವರ ಮನದ ಭಾವದ ಪೂರ್ಣ ಪ್ರತಿಬಿಂಬ. ಇದೊಂದು ಅಪೂರ್ವ ಸುಧೆ. ಶುಭವಾಗಲಿ.

ಆರ್ಣವದ ಪರಿ ಕನ್ನಡದರಿವ
ಜೀರ್ಣಿಸುತ ಕವಯಿತ್ರಿ ಪೂನಂ
ಪೂರ್ಣ ಸುಧೆಯನ್ನರ್ಪಿಸುತ ಸಂತಸದಿ ಗೆದ್ದಿಹರು|
ಊರ್ಣದಂತಿಹ ಮೃದು ಮನದೊಳಗೆ
ಕೀರ್ಣಗೊಂಡಿಹ ಭಾವನೆಗಳನು
ತೀರ್ಣರಾಗುತ ಹೊರಗೆಡಹುತಲಿ ಧನ್ಯರಾಗಿಹರು ||
 
ಡಾ.ಎ.ಕೇಶವರಾಜ(ಅಮೇರಿಕಾ) ವಿದ್ವಾಂಸರು ಮತ್ತು ವಿಜ್ಞಾನಿಗಳು

ಪೂನಂ ಧಾರವಾಡಕರ  ಅವರ ಪೂರ್ಣ ಸುಧೆ
ಪೂನಂ ಧಾರವಾಡಕರ  ಅವರ ಪೂರ್ಣ ಸುಧೆ
ಪೂನಂ ಧಾರವಾಡಕರ  ಅವರ ಪೂರ್ಣ ಸುಧೆ
ಪೂನಂ ಧಾರವಾಡಕರ  ಅವರ ಪೂರ್ಣ ಸುಧೆ
ಪೂನಂ ಧಾರವಾಡಕರ  ಅವರ ಪೂರ್ಣ ಸುಧೆ
ಪೂನಂ ಧಾರವಾಡಕರ  ಅವರ ಪೂರ್ಣ ಸುಧೆ

Comments (0)




Be the first to comment using the form below.