ಪುಸ್ತಕಪ್ರೀತಿ ಇಲ್ಲದಿದ್ದರೆ ಸಾಹಿತ್ಯಕ್ಕೆ ಹಿನ್ನಡೆ - ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ ತಲ್ಲೂರ್ ಅನಿಸಿಕೆ
ಉಡುಪಿ:ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಜನ ಮರೆತುಬಿಟ್ಟಿದ್ದಾರೆ. ಸಾಹಿತ್ಯಲೋಕದಲ್ಲಿ ಅತ್ಯುತ್ತಮ ಕೃತಿಗಳು ಬಿಡುಗಡೆಗೊಂಡರೂ, ಪುಸ್ತಕ ಕೊಳ್ಳುವವರಿಲ್ಲ. ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪುಸ್ತಕಪ್ರೀತಿ ಬೆಳೆಸಿಕೊಳ್ಳುವುದು ಅತೀ ಅವಶ್ಯಕ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಶಿವರಾಮ ಶೆಟ್ಟಿ ಹೇಳಿದರು.
ಬುಧವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ಕಥಾಬಿಂದು ಪ್ರಕಾಶನ ವತಿಯಿಂದ ನಡೆದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುಸ್ತಕಗಳನ್ನು ಕೊಂಡುಕೊಳ್ಳುವವರು ಇಲ್ಲದಿದ್ದರೆ ಪುಸ್ತಕ ಪ್ರಕಾಶನಕ್ಕೆ ಸಾಹಿತಿಗಳು ಹಿಂದೇಟು ಹಾಕುವ ಅಪಾಯವಿದೆ. ಸಮಾರಂಭಗಳಲ್ಲಿ ಮೊಮೆಂಟೊಗಳ ಬದಲು ಪುಸ್ತಕಗಳನ್ನು ನೀಡುವಂತಾಗಬೇಕು ಮೊಬೈಲ್ ನಲ್ಲಿ ಕಳೆದುಹೋಗಿರುವ ಪುಸ್ತಕಪ್ರಿಯರನ್ನು ಮತ್ತೆ ಓದಿನೆಡೆಗೆ ಸೆಳೆಯಲು ಸಾಹಿತಿಗಳು, ಪರಿಷತ್ತುಗಳು ಸೂಕ್ತ ಚಿಂತನೆ ನಡೆಸಬೇಕು ಎಂದರು.
ಕಥಾಬಿಂದು ಪ್ರಕಾಶನ 25ನೇ ಕೃತಿ ಟಿ. ತ್ಯಾಗರಾಜು ಮೈಸೂರು ಅವರ ಅಕ್ಷರ ಜೋಳಿಗೆ ಕೃತಿಯನ್ನು ಕವಿ ಸಾಹಿತಿ ಗೋಪಾಲಕೃಷ್ಣ ಶಾಸ್ತ್ರಿ ಅವರು ಲೋಕಾರ್ಪಣೆಗೊಳಿಸಿದರು. ಕಥಾಬಿಂದು ಪ್ರಕಾಶನ ಮುಖ್ಯಸ್ಥ ಪಿ.ವಿ. ಪ್ರದೀಪ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿಂಗಾರ ಸಾಹಿತ್ಯ ಬಳಗದ ರೇಮಂಡ್ ಡಿಕೂನಾ, ಶಬ್ಬೀರ್ ಉಳಿಯಾರು, ಗೋಪಾಲಕೃಷ್ಣ ಶಾಸ್ತ್ರಿ, ಕೃತಿಕಾರ ಟಿ. ತ್ಯಾಗರಾಜು ಮೈಸೂರು ಮತ್ತಿತರರು ಉಪಸ್ಥಿತರಿದ್ದರು.
Comments (0)
Post Comment
Report Abuse
Be the first to comment using the form below.