ಖ್ಯಾತ ಪತ್ತೇದಾರಿ ಕಾದಂಬರಿಕಾರ ಕಥಾ ಬಿಂದು ಪ್ರಕಾಶನದ ರೂವಾರಿ ಶ್ರೀ.ಪಿ. ವಿ.ಪ್ರದೀಪ್ ಕುಮಾರ್ ಅವರ ಪತ್ತೇದಾರಿ ಕಾದಂಬರಿ ಕಾಣದ ನೆರಳು. ಓದಲು ಕುಳಿತರೆ ಏಳದಂತೆ ನಿರಂತರ ಓದಿಸಿಕೊಂಡು ಹೋಗುವ ಕುತೂಹಲಭರಿತ ಕಾದಂಬರಿ ಇದು. ಅತ್ಯಾಚಾರಿ ಮತ್ತು ಕೊಲೆಗಾರ ಯಾರೆಂದು ಕುತೂಹಲ ಮೂಡಿಸುತ್ತ ಹೋಗುತ್ತದೆ. ಹಾಗೆಯೇ ನಿರಪರಾಧಿ ಹರಿಕಾರಂತನ ಮೇಲೆಯೂ ಆಗಾಗ ಕೊಲೆಗಾರ ಎಂಬ ಅನುಮಾನ ಬಂದು ಹೋಗುತ್ತದೆ.
ಮುಗ್ಧೆ, ನಿರಪರಾಧಿ ಅನುಷಳ ಜೀವನದಲ್ಲಿ ಆಟವಾಡಿದ ಆಗಂತುಕನ ಮೇಲೆ ಓದುವಾಗ ರೋಷ ಮೂಡುತ್ತದೆ. ಕೈಗೆ ಸಿಕ್ಕರೆ ತಕ್ಕ ಶಾಸ್ತಿ ಮಾಡುವ ಮನಸ್ಸು ಓದುಗನಲ್ಲಿಯೂ ಮೂಡುತ್ತದೆ.
ತನ್ನದಲ್ಲದ ತಪ್ಪಿಗೆ ಅಪರಾಧಿ ಭಾವನೆಯಿಂದ ನರಳುವ ಅನುಷಳ ಬಗ್ಗೆ ಅನುಕಂಪ ಮೂಡುತ್ತದೆ. ಗಂಡ ಡಾ. ಸ್ವರೂಪ್ ನ ಪ್ರೀತಿ, ಕಾಳಜಿ ಓದುಗನಿಗೆ ತಂಗಾಳಿಯಂತೆ ಭಾಸವಾಗುತ್ತದೆ. ಈ ನಡುವೆ ಅವಳ ಪಿ ಯು ಸಿ ಕ್ಲಾಸ್ ಮೇಟ್ ಹರಿ ಕಾರಂತನ ಆಗಮನವಾಗುತ್ತದೆ. ಅವರ ಮನೆಯ ದೇವರ ಪೂಜೆ ಮಾಡುವ ನೆಪದಲ್ಲಿ ಹರಿ ಕಾರಂತ ಅವರ ಮನೆಯ ಸದಸ್ಯರಲ್ಲೊಬ್ಬನಾಗುತ್ತಾನೆ. ಕಾಲೇಜಿನಲ್ಲಿ ಅನುಷಾಳನ್ನು ನುಂಗುವಂತೆ ನೋಡುತ್ತಿದ್ದ. ಈ ಕಾರಣಕ್ಕೆ ಅನುಷಾಳ ಅನುಮಾನ ಅವನ ಮೇಲೆ ತಿರುಗುತ್ತದೆ.
ಈ ನಡುವೆ ಅನುಷಾ ಮತ್ತು ಸ್ವರೂಪರ ಕಾರಿನ ಬ್ರೇಕ್ ಫೇಲ್ ಮಾಡುವ ಮೂಲಕ ಕೊಲೆಯ ಪ್ರಯತ್ನ ನಡೆಯುತ್ತದೆ. ಅನುಷಾ ಇದರಿಂದ ಆಸ್ಪತ್ರೆ ಸೇರುತ್ತಾಳೆ.
ಹರಿ ಕಾರಂತನ ಮಾವ ವಿಷ್ಣು ಕಾರಂತ ಅವನನ್ನು ಹುಡುಕಿಕೊಂಡು ಬರುತ್ತಾನೆ. ಇದರಿಂದ ತನಗಾಗಿಯೇ ಅವನು ಬಂದಿದ್ದಾನೆ ಎಂದು ಅನೂಷಾಳಿಗೆ ಖಾತ್ರಿಯಾಗುತ್ತದೆ.
ಅಷ್ಟರಲ್ಲಿ ಕಥೆಗೊಂದು ತಿರುವು ಎನ್ನುವಂತೆ ಡಾ. ಉಷಾ ರಾವ್ ಆಗಮನವಾಗುತ್ತದೆ. ಅವಳು ಮತ್ತು ಸ್ವರೂಪ್ ಒಂದೇ ಕಾಲೇಜಿನಲ್ಲಿ ಮೆಡಿಕಲ್ ಓದಿರುತ್ತಾರೆ. ಅನುಷಾ ಮತ್ತು ಉಷಾ ಇಬ್ಬರೂ ಸ್ನೇಹಿತೆಯರಾಗುತ್ತಾರೆ.
ಈ ನಡುವೆ ಆ ಅತ್ಯಾಚಾರಿಯಿಂದ ಮೇಲಿಂದ ಮೇಲೆ ಅನುಷಾಳಿಗೆ ಬೆದರಿಕೆಯ ಕರೆ ಬರುತ್ತದೆ. ಅಲ್ಲದೇ ಅಂದು ಅತ್ಯಾಚಾರಿಯ ಬಳಿ ಇರುವ ಬ್ಲೂ ಶರ್ಟ್ ಹರಿ ಕಾರಂತ ಧರಿಸಿ ಬರುತ್ತಾನೆ. ಇದರಿಂದ ಅನುಷಾ ಅವನೇ ಅತ್ಯಾಚಾರಿ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಅವನು ಬಂದಾಗ ಮಾನಸಿಕ ಸ್ಥಿಮಿತ ಕಳೆದುಕೊಂಡವಳಂತೆ ವರ್ತಿಸುತ್ತಾಳೆ. ಅವಳ ಮಾನಸಿಕ ಗೊಂದಲ, ತೊಳಲಾಟಗಳಿಗೆ ಉಷಾ ಕಿವಿಯಾಗುತ್ತಾಳೆ.
ಅನುಷಾ ಮಾನಸಿಕ ತೊಳಲಾಟದಿಂದ ಆತ್ಮಹತ್ಯೆ ಮಾಡಿಕೊಳ್ಳಲಿ ಎಂಬುದು ಅವನ ಉದ್ದೇಶ
ಅವನ ಉದ್ದೇಶ ಸಫಲವಾಯಿತೆ ಕುತೂಹಲ ಅಂತ್ಯದವರೆಗೂ ಓದುಗರನ್ನು ಹಿಡಿದು ನಿಲ್ಲಿಸುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
Comments (0)
Post Comment
Report Abuse
Be the first to comment using the form below.