"ಕಾಣದ ಭಾವನೆ ಬಣ್ಣ"
ಕವನ ಸಂಕಲನದ ಮುನ್ನುಡಿ
"ವಿದ್ಯಾಧಿದೇವತಾ ದೇವಿ ವಾಣೀ ಸರಸ್ವತೀ
ಯತ್ ಪ್ರಸಾದೇನ ಕಾವ್ಯಾನಿ ಕುರ್ವಂತಿ ಕವಯಃ ಸದಾ"
ಪ್ರತಿಯೊಬ್ಬ ಮನುಷ್ಯನಿಗೂ ಭಾವನೆಗಳು ಇದ್ದೇ ಇರುತ್ತವೆ. ಆದರೆ ಎಲ್ಲರಿಗೂ ಸಮರ್ಥವಾಗಿ ಪ್ರಕಟಪಡಿಸಲು ಆಗುವುದಿಲ್ಲ. ಸರಸ್ವತಿಯ ಕೃಪೆ ಪಡೆದವರು ಭಾವನೆಗಳನ್ನು ಅಕ್ಷರರೂಪದಲ್ಲಿ ಹೊರಹಾಕುತ್ತಾರೆ. ಈ ರೀತಿ ಸರಸ್ವತಿಯ ಕೃಪೆ ಪಡೆದ ಶ್ರೀಮತಿ ಅಂಜಲಿ ತೊರವಿಯವರು ತಮ್ಮ ಮನದ ಭಾವಗಳಿಗೆ ಸುಂದರ ರೂಪಕೊಟ್ಟು ಕವಿತೆಗಳಾಗಿಸಿ ಅವುಗಳನ್ನು "ಕಾಣದ ಭಾವನೆಯ ಬಣ್ಣ" ಎಂಬ ಶೀರ್ಷಿಕೆಯಲ್ಲಿ ಪುಸ್ತಕರೂಪದಲ್ಲಿ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಈ ಕೃತಿಯ ಮೊದಲ ಓದುಗನಾಗಿ ಈ ಸಂಕಲನದ ಕೆಲವು ವಿಶೇಷತೆಗಳನ್ನು ಹಂಚಿಕೊಳ್ಳುತ್ತೇನೆ. ಮೂಲತಃ ಕೊಪ್ಪಳದವರಾದ ಅಂಜಲಿ ತೊರವಿ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದರೂ ತಮ್ಮ ಕನ್ನಡ ಪ್ರೇಮ ಹಾಗೂ ಸಾಹಿತ್ಯಾಸಕ್ತಿಯನ್ನು ಬಿಡದೇ ಕಾಪಾಡಿಕೊಂಡಿರುವುದು ಅಭಿನಂದನೀಯ. ಜಾಲತಾಣಗಳಿಂದ ಓದಿಗಾಗಲೀ ಸಾಹಿತ್ಯ ಕೃಷಿಗಾಗಲೀ ಹಾನಿಯಿಲ್ಲ, ಬದಲಿಗೆ ಅನುಕೂಲವೇ ಆಗುತ್ತದೆ ಎನ್ನಲುಜಾಲತಾಣಗಳಲ್ಲಿ ಅನೇಕ ಬಳಗಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿರುವ ಲೇಖಕಿ ಹಾಗೂ ಸಾಹಿತ್ಯ ಪ್ರೋತ್ಸಾಹಕರೂ ಪ್ರಕಾಶಕರೂ ಆದ ಶ್ರೀ ಪ್ರದೀಪ ಕುಮಾರ್ ರವರೇ ಸಾಕ್ಷಿ. ಇವರಿಬ್ಬರ ಪ್ರಯತ್ನದಿಂದ ಈ ಪುಸ್ತಕ ಹೊರಬಂದಿದೆ. ಒಟ್ಟು 30 ಕವನಗಳಿರುವ ಈ ಸಂಕಲನದಲ್ಲಿ ಹಲವು ವೈವಿಧ್ಯಮಯ ಕವನಗಳಿವೆ. ಬಹುತೇಕ ಎಲ್ಲ ಕವನಗಳೂ ಲಯಬದ್ಧತೆ, ಪ್ರಾಸಬದ್ಧತೆ. ಗೇಯತೆಗಳನ್ನೊಳಗೊಂಡ ಕವನಗಳಾಗಿವೆ.ಉದಾಹರಣೆಗೆ ಬದುಕು ಮಾಯೆಯ ಆಟ ಕವನದ ಸಾಲುಗಳನ್ನು ನೋಡಿ
"ಮನುಜನ ಬದುಕು ಮಾಯೆಯ ಆಟ
ಜೊತೆಗೇ ನೋವು ನಲಿವುಗಳ ಕೂಟ" ವಾಸ್ತವಕ್ಕೆ ಹತ್ತಿರವಾದ ಸಾಲುಗಳು.
ಇದೇ ರೀತಿಯ ಇನ್ನೊಂದು ಕವನ "ಮುಖ ಮನಸಿನ ಕನ್ನಡಿ"
"ಜೀವನವು ನೋವು ನಲಿವುಗಳ ಹಂದರ
ಭಾವನೆಗಳ ಬದುಕಿನ ಸುಂದರ ಮಂದಿರ" ಎನ್ನುವ ಕವಯತ್ರಿ "ನವನವೀನ ಬದುಕಿನ ಕ್ಷಣವನು ಆಸ್ವಾದಿಸು" ಎಂಬ ಸುಂದರ ಸಂದೇಶ ನೀಡಿದ್ದಾರೆ.
ಮನಸೋತ ರಾಧೆ, ,ಕದ್ದುನೋಡುವೆ ಏಕೆ, ಕವನಗಳು ರಮ್ಯತೆಯ ಜಾಡು ಹಿಡಿದಿವೆ. ಬೆಳದಿಂಗಳು, ಪ್ರಕೃತಿ ಐಸಿರಿ ಕವನಗಳು ನಿಸರ್ಗದ ಚೆಲುವನ್ನು ಬಣ್ಣಿಸಿವೆ. ದೇಶಭಕ್ತಿ ಹಾಗೂ ಕನ್ನಡಾಭಿಮಾನದ ಗೀತೆಗಳೂ ಸೊಗಸಾಗಿ ಮೂಡಿಬಂದಿದ್ದು ಸುಲಭವಾಗಿ ಹಾಡಬಹುದಾಗಿವೆ ಛಂದೋಬದ್ಧ ಕವನಗಳೂ ಸೇರ್ಪಡೆಯಾಗಿರುವುದು ಗಮನಾರ್ಹ ಸಂಗತಿ. ಉದಾಹರಣೆಗೆ ಕುಸುಮ ಷಟ್ಪದಿಯಲ್ಲಿ ಮೂಡಿಬಂದ "ಕುಂಬಾರನ ಕಲೆ, ಮಂದಾನಿಲ ರಗಳೆಯಲ್ಲಿ ರಚಿಸಿರುವ ಗಾಯನದ ಮೋಡಿ', ತಲ ಷಟ್ಪದಿಯಲ್ಲಿ ಬರೆದಿರುವ. "ಒಲವ ಪಯಣ" ಶರ ಷಟ್ಪದಿಯಲ್ಲಿ ಬರೆದ ",ಚೆಲುವ ಬಾಲೆ" ಇವೆಲ್ಲವೂ ಮನೋಜ್ಞವಾಗಿ ಮೂಡಿಬಂದಿದ್ದು ಹಾಡುವಂತಿವೆ. ಒಟ್ಟಿನಲ್ಲಿ ಹೇಳುವುದಾದರೆ ಮೊದಲ ಕವನಸಂಕಲನ ಎಂದು ಯಾವ ರಿಯಾಯಿತಿಯನ್ನೂ ಬೇಡದ ಕೃತಿ ಇದು ಎಂದು ಹೇಳಬಹುದು. ಶ್ರೀಮತಿ ಅಂಜಲಿಯವರ ಈ ಕೃತಿ ಎಲ್ಲೆಡೆ ಜನಮನ್ನಣೆ ಗಳಿಸಲಿ ಎಂದು ಹಾರೈಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.
.ಪದ್ಮನಾಭ. ಡಿ.
Comments (0)
Post Comment
Report Abuse
Be the first to comment using the form below.