*ಚುಕ್ಕಿ ಚಂದ್ರಮ*
ಅಮ್ಮ ಅಮ್ಮ ಬಂದ ನೋಡು ಚುಕ್ಕಿ ಚಂದ್ರಮ/
ಪೂರ್ಣ ಚಂದ್ರನ ನೋಡಲಿಂದು ಬಹಳ ಸಂಭ್ರಮ//
ತಾರೆಗಳ ಮಧ್ಯದಲಿ ಹೊಳೆಯುತ್ತಿರುವನು/
ಆಟ ಆಡಲು ಕರೆದರವನು ದೂರ ಸರಿಯುವನು/
ಏಣಿ ಇಟ್ಟು ಗಗನ ಏರಿ ನೀನು ಹೋಗುವೆಯಾ?/
ಅಮ್ಮ ನೀ ಚಂದಮಾಮನ ತಂದು ಕೊಡುವೆಯಾ/
ಚೆಂದಮಾಮನ ಕೊಟ್ಟರೆ ನಿನಗೆ ಮುದ್ದು ಮಾಡುವೆ/
ನೀನು ಕೊಟ್ಟ ತುತ್ತು ತಿಂದು ನಿದ್ದೆ ಹೋಗುವೆ/
ಅಕ್ಕ,ಅಣ್ಣ ಎಲ್ಲರೂ ಬನ್ನಿ ಹೊರಗೆ ಹೋಗುವ/
ಅಂಗಳದಿ ಚಂದಮಾಮನ ನಾವು ನೋಡುವ/
ಹುಣ್ಣಿಮೆಯ ರಾತ್ರಿಯದು ಎಷ್ಟು ಚೆಂದವೋ/
ದುಂಡಗಾದ ಚಂದಮಾಮ ಕಾಣುವಂದವೋ/
ನಮ್ಮ ನೋಡಿ ನಕ್ಕು ಬಿಡುವ ಚಂದಮಾಮನು/
ಮೆಲ್ಲನೆ ಕಾಣದಂತೆ ಮಾಯವಾಗುವನು/
ಮೋಡಗಳ ಮರೆಯಲ್ಲಿ ಅಡಗಿ ಕೂರುವನು/
ಕಾಣಲಿಲ್ಲವೆಂದು ಸುಮ್ಮನಿರೆ ಮತ್ತೆ ಬರುವನು/
ಕಣ್ಣುಮುಚ್ಚಾಲೆಯಾಟವನು ಅವನು ಆಡುವನು/
ನಮ್ಮನ್ನೆಲ್ಲ ಆಡಿಸುವ ಅವನು ಜಾಣನು/
ಚೆಂದಮಾಮ ಬಾರೋ ಎಂದು ನಾವು ಕರೆಯೋಣ/
ಅವನ ಕೂಡಿ ಆಟವನು ಆಡಿ ಸಂತಸ ಪಡೋಣ./
ಡಾ. ಸುಮತಿ ಪಿ
Comments (0)
Post Comment
Report Abuse
Be the first to comment using the form below.