(JavaScript required to view this email address)
Mangalore

News & Articles


ಶ್ರೀಮತಿ ನಂದಿನಿ ಸನಬಾಳ್ ಮೂರು ವರ್ಷದಿಂದ ಪರಿಚಿತರು. ಸಾಹಿತ್ಯ ಬಳಗದಲ್ಲಿ ಪರಿಚಯವಾಗಿ ಪ್ರತಿಭೆಯನ್ನು ಗುರುತಿಸಿ ಅವರ ಬಗ್ಗೆ ಒಂದು ಪತ್ರಿಕೆಯಲ್ಲಿ ವ್ಯಕ್ತಿ ಚಿತ್ರ ಬರೆದು ಪ್ರಕಟಿಸಿದ್ದೆ. ಒಂದು ಬಾರಿ ಸಾಹಿತ್ಯ ಕಾರ್ಯಕ್ರಮ ಒಂದಕ್ಕೆ  ಕಲಬುರುಗಿಗೆ ಹೋಗಿದ್ದಾಗ ಭೇಟಿಯಾಗಿ ಪರಸ್ಪರ ಮುಖ ಪರಿಚಯ ಪಟ್ಟೆವು. ಅವರ ಪೂರ್ಣ ಕೌಶಲ್ಯಗಳ ಪರಿಚಯವಾದದ್ದು ಆಗಲೇ. 

ಶ್ರೀಮತಿ ನಂದಿನಿ ಸನಬಾಳ್ ವೃತ್ತಿಯಲ್ಲಿ ಶಿಕ್ಷಕಿ.ಪ್ರವೃತ್ತಿಯಲ್ಲಿ ಕಿರುತೆರೆಯ ಕಲಾವಿದೆ, ಬರಹಗಾರ್ತಿ, ಸಮಾಜ ಸೇವಕಿ, ಸಂಘಟಕಿ ಮತ್ತು ವಿದ್ಯಾರ್ಥಿ ಸ್ನೇಹಿ ಮಾತೆ ಎಂದು ಮುಷ್ಟೀಕರಿಸಬಹುದು. ಶ್ರೀಯುತ ಸುರೇಂದ್ರ ಸನಬಾಳ್ ಅವರ ಪತಿ. ಎರಡು ಹೆಣ್ಣು ಮತ್ತು ಒಂದು ಗಂಡು ಅವರ ಮಕ್ಕಳು. 

ಶಾಲೆಯಲ್ಲಿ ಮಕ್ಕಳಿಗೆ ನಿರಂತರ ಪಾಠದ ಜೊತೆಗೆ ಸಹಪಾಠಗಳು, ಆಟೋಟಗಳು ಇವರ ಆಸಕ್ತಿಯ ಹವ್ಯಾಸಗಳು. ಅವರು ಅಕ್ಷರ ಕ್ರಾಂತಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿರುವುದು ಅವರ ಹೆಗ್ಗಳಿಕೆ. ಬಿಸಿಲು ನಾಡೆಂದು ಪ್ರಸಿದ್ಧವಾದ ಕಲಬುರ್ಗಿಯಲ್ಲಿ 20 ವರ್ಷಗಳಿಂದ ಭರವಸೆಯ ಶಿಕ್ಷಕಿಯಾಗಿ ಬೆಳೆದವರು ಇವರು. ಹುಟ್ಟು ಬೀದರ್ ಜಿಲ್ಲೆಯ ಹುಮನಾಬಾದ್. ಅವರ ಓದು ಪದವಿ ಮತ್ತು ಶಿಕ್ಷಣ ತರಬೇತಿ ಕಲಿಕೆ. ತಮ್ಮ ನಿಜ ಜೀವನದಲ್ಲಿ ರಾಷ್ಟ್ರ ನಾಯಕರನ್ನು ಮಾದರಿಯಾಗಿ ಅನುಸರಿಸುತ್ತಾರೆ. ಅವರ ಸಮಾಜ ಸೇವೆಯ ಒಂದು ಪುಟವನ್ನು ಇಲ್ಲಿ ನಮೂದಿಸುವುದು ಸೂಕ್ತ. ತಮ್ಮ ಬಡ ವಿದ್ಯಾರ್ಥಿ ಒಬ್ಬರ ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ತಿಳಿದಾಗ ಹಿತೈಷಿಗಳಿಂದ ಮತ್ತು ಸ್ವಂತದಿಂದ ಹಣ ಸಂಗ್ರಹಿಸಿ ಮಗುವಿಗೆ ಸಹಾಯ ಮಾಡಿ ಗುಣಮುಖರಾಗಿಸಿದ್ದಾರೆ. ಅವರ ಸಮಾಜಮುಖಿ ಸ್ಪಂದನೆಗೆ ಇದೊಂದು ಉದಾಹರಣೆಯೇ ಸಾಕು.

ಶ್ರೀಮತಿ ಸನಬಾಳ್ ಮಾತೆ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಕಲಬುರ್ಗಿ ಘಟಕದ ಪ್ರಧಾನ ಕಾರ್ಯದರ್ಶಿ. ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಜಿಲ್ಲಾ ಅಧ್ಯಕ್ಷರು. ಕರ್ನಾಟಕ ರಾಜ್ಯ ಸರಕಾರಿ ಪರಿಶಿಷ್ಟ ಜಾತಿ _ಪಂಗಡ ನೌಕರರ ಸಂಘ ರಾಜ್ಯಘಟ್ಟದ ಪ್ರಧಾನ ಕಾರ್ಯದರ್ಶಿ. ಸಂಘಟನಾತ್ಮಕವಾಗಿ ಉಳಿದವರಿಗೆ ನೇತೃತ್ವ ನೀಡುತ್ತಿರುವುದು ಅವರ ಸುಪ್ತ ಪ್ರತಿಭೆ. ತಾನು ನೇತೃತ್ವ ವಹಿಸಿರುವ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರನ್ನು ಗುರುತಿಸಿ ಅವರ ಸೇವೆಗೆ ಪ್ರಶಸ್ತಿ ನೀಡುತ್ತಾ ಬಂದಿರುವುದು ಅವರ ಒಂದು ಉತ್ತಮ ಮಾದರಿ. 

ಶ್ರೀಮತಿ ಸನಬಾಳ್ ಅವರ ವ್ಯಕ್ತಿತ್ವಕ್ಕೆ  ಮುಕುಟವಿಟ್ಟ ಹಾಗೆ ಅವರು ಮೂರು ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರೋತ್ಸಾಹ ಕೊಡುವ "ಅಮ್ಮ ನಾನು ಶಾಲೆಗೆ ಹೋಗುವೆ" ಶೀರ್ಷಿಕೆಯ ಕಿರು ಚಿತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಚಿತ್ರ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದೆ.  "ಅಪ್ಪ ನನ್ನ ಹೊಡಿಬೇಡಪ್ಪೋ" ಎನ್ನುವುದು ಅವರ ಇನ್ನೊಂದು ಕಿರುಚಿತ್ರ. ಜೀವಂತ ದಂತಕತೆ ಶಿಕ್ಷಕಿ ಲೂಸಿ ಸಾಲ್ದಾನ ಅವರ ಬದುಕನ್ನು ಆಧರಿಸಿದ  ಚಿತ್ರದಲ್ಲಿ ಕೂಡ ಅಭಿನಯಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.

ಶ್ರೀಮತಿ ಸನಬಾಳ್ ಅವರ ಜನಪರ ಕಾಳಜಿ ಮೆಚ್ಚ ತಕ್ಕದ್ದು. ಅವರ ಬರಹಗಳು ಕವನಗಳು,  ಸುಭಾಷಿತಗಳು ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗುತ್ತಿವೆ. ಉತ್ತಮ ನಾಗರಿಕರನ್ನು ಬೆಳೆಸುವುದರಲ್ಲಿ ಸಕ್ರಿಯರಾದ ಅವರಿಗೆ ಅಭಿನಂದನೆಗಳು. ಅವರ ಸಾಧನೆಗಳು ಇನ್ನೂ ಬೆಳಗಲಿ ಎಂದು ಶುಭ ಹಾರೈಕೆಗಳು.


ಬಹುಮುಖ ಪ್ರತಿಭೆಯ ಶಿಕ್ಷಕಿ ನಂದಿನಿ ಸನಬಾಳ್
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು

Comments (0)




Be the first to comment using the form below.