(JavaScript required to view this email address)
Mangalore

News & Articles



ಹೆಸರೇ ಹೇಳುವಂತೆ ಸಾಹಿತ್ಯವು ಹಿತವನ್ನು ಜೊತೆಯಲ್ಲಿ ಹೊತ್ತುತರುತ್ತದೆ. ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂದು ಹೇಳುವ ಕಾಲವೊಂದಿತ್ತು. ಈಗ ಪದ್ಯಗದ್ಯಗಳೆರಡೂ ಹೃದ್ಯವೇ ಆಗಿವೆ. ಹೃದ್ಯವಾಗಿಹ ಪದ್ಯಗಳನ್ನು ಅನೇಕ ಕವಿಮಾನ್ಯರು ಕನ್ನಡ ಸಾಹಿತ್ಯಕ್ಕೆ, ನಾಡಿಗೆ ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ. ಈ ಸಾಲಿಗೆ ಶ್ರೀಮತಿ ಸುಲೋಚನಾ ಸಾಗರರವರು ಸೇರುತ್ತಾರೆ. ಮನಸ್ಸಿಗೆ ಮುದ ನೀಡುವ ಹೃದ್ಯವಾದ ಕವನಗಳನ್ನು ಸೋದರಿ ಸುಲೋಚನಾ ಬರೆಯುವುದರಲ್ಲಿ ಪಳಗಿದ್ದಾರೆ. ಸ್ನಾತಕೋತ್ತರ ಪದವಿ ಪಡೆದು, ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುಲೋಚನಾರವರು ಗೃಹಿಣಿಯಾಗಿ, ತಾಯಿಯಾಗಿ ಗೃಹ ಕೃತ್ಯವನ್ನು ನಿಭಾಯಿಸುತ್ತಾ, ಶಾಲೆಯಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾ, ಸಾಹಿತ್ಯಾಭಿಮಾನಿಯಾಗಿ ಕವನಗಳನ್ನು ಚೆನ್ನಾಗಿ ಬರೆಯುವ ಕವಯಿತ್ರಿಯಾಗಿ ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ. ಸುಲೋಚನಾ ಮನೆಗೆ ಮಲ್ಲಿಗೆಯಾಗಿ, ಕಷ್ಟಗಳಿಗೆ ಕಲ್ಲಾಗಿ ಎಲ್ಲರಲ್ಲೂ ಸಹೃದಯತೆಯನ್ನು ಹೊಂದಿ ಜೀವನಾನುಭವಗಳನ್ನು ತಮ್ಮ ಕವನಗಳಲ್ಲಿ ಅಚ್ಚೊತ್ತಿದ್ದಾರೆ. ಛಂದೋಬದ್ಧವಾಗಿ, ಲಯಭರಿತ ಪದಲಾಲಿತ್ಯದಿಂದ ಅವರ ಕವನ ಆಕರ್ಷಿಸುತ್ತದೆ. ಶಿಶಿರದ ಚಿಗುರು ಎಂಬ ಅವರ ಚೊಚ್ಚಲ ಕವನ ಸಂಕಲನವನ್ನು ಬಹಳ ಜತನದಿಂದ ಹೊರತರುತ್ತಿದ್ದಾರೆ. ಭಾವಗೀತೆ,ಭಕ್ತಿಗೀತೆ, ಶಿಶುಗೀತೆಗಳನ್ನು ಲೀಲಾಜಾಲವಾಗಿ ಬರೆಯುವ ಕಲೆ ಅವರಿಗೆ ಸಿದ್ಧಿಸಿದೆ. ಸರಸ್ವತಿ ಪುತ್ರಿ ಸುಲೋಚನಾರ ಕವನಗಳನ್ನು ಓದುವುದೆಂದರೆ ಮನಸ್ಸಿಗೆ ಆನಂದ ತುಂಬಿಬರುತ್ತದೆ. ಕವನಗಳಲ್ಲಿ ಉಪಮೆ,ರೂಪಕಗಳು ಬಳಕೆಯಾಗಿ ಕವನಕ್ಕೆ ಅತ್ಯಂತ ಆಲಂಕಾರಿಕ ಮೆರುಗನ್ನು ನೀಡುತ್ತದೆ. ಅಣುರೇಣು ತೃಣಕಾಷ್ಠದಲ್ಲಿ ಭಗವಂತನು ನೆಲೆಸಿದ್ದಾನೆಂಬ ಗ್ರಹಿಕೆಯಂತೆ ಶಿವನು ಎಲ್ಲೆಡೆ ನೆಲೆಸಿದ್ದಾನೆ ನನ್ನ ಭಾವ ನನ್ನ ಜೀವ ನೀನೆ ನನ್ನಾತ್ಮ ಸಖ ನೀನೇ ಎನ್ನುತ್ತಾ ಕಣಕಣದಿ ಅಣು ಅಣುವಲಿ ಕರಮುಗಿದು ಶಿವನನ್ನು ಭಜಿಸುವ ಪರಿ, ಭಕ್ತಿಯ ಪರಾಕಾಷ್ಠೆ ಕವನದಲ್ಲಿ ವ್ಯಕ್ತವಾಗಿರುವುದು ಚೆಂದವಿದೆ. 
ತಾಯ್ಮುಡಿಯ ಹೂ ಕವನವು ಷಟ್ಪದಿಯಲ್ಲಿ ರಚಿತವಾಗಿದ್ದು, ಕನ್ನಡನಾಡಿನ ವಿಶೇಷತೆಗಳನ್ನು, ಕನ್ನಡದ ಕಳಕಳಿಯನ್ನು ಕಾಣಬಹುದು. ಸ್ಫೂರ್ತಿಯಾಗು ಕವನದಲ್ಲಿ ಸತ್ಯ ದೃಷ್ಟಿ ತೆರೆದು ತೋರು, ಮೌಢ್ಯ ಮಂದಿರ ತೊಡೆದು ಹಾಕು, ಜ್ಞಾನದ ಹಂದರವಾಗಿ ಬಾಳು, ಅಲ್ಪಮಾನವನಾಗದೆ ವಿಶ್ವಮಾನವನಾಗು, ಮನುಜಮತದ ಪಥದಲ್ಲಿ ವಿಶ್ವಪಥದ ದೃಷ್ಟಿಯಾಗು ಎಂಬ ಮಾತುಗಳು ಮನನೀಯವಾಗಿದೆ. ನಿಸ್ವಾರ್ಥ ಗುರುವಿನ ಬಗ್ಗೆ ಕವ£
ಜಗದ ಚೇತನ ಶಕ್ತಿ ಮನಸೆಳೆಯುತ್ತದೆ. ಭಕ್ತಿಯ ನಮನ ಕವನವೂ ಗುರುವಿನ ಮಹಿಮೆಯನ್ನು ಸಾರುತ್ತಿದೆ. ಸೋದರ ಪ್ರೀತಿಯನ್ನು ಸಾರಿಹೇಳುವ 'ಒಲಮೆಬಳ್ಳಿ', ಆರೋಗ್ಯವನ್ನು ವೃದ್ಧಿಸುವ ಯೋಗದ ಬಗೆಗಿನ ಕವನ ರಾಮಬಾಣ, ಚಂದ್ರನನ್ನು ತಲುಪಿದ ವಿಕ್ರಮ ಕ್ಷಿಪಣಿಯ ಭ್ರಾತೃ ಬಂಧ ಕವನ, ಹೀಗೆ ಹತ್ತು ಹಲವು ವಿಚಾರಗಳನ್ನು ಕವನದಲ್ಲಿ ಅಳವಡಿಸಿ ಛಂದೋಬದ್ಧವಾಗಿ ಬರೆದು ಮನತಣಿಸುತ್ತಾರೆ ಕವಯಿತ್ರಿ. ತಾಯಿಯನ್ನು ಕುರಿತು ಬರೆದ ಕವನ ಮಿಡಿವ ಎರಡಕ್ಷರ ತುಡಿತ ಅಮ್ಮ ಕವನವು ಚಿತ್ತಾಕರ್ಷಕವಾಗಿದೆ. ಅಮ್ಮ ನಿನಗೆ ಸಾಟಿಯಿಲ್ಲ ಯಾವ ಮುಕ್ಕೋಟಿ ದೇವರು, ಪ್ರೀತಿ ಎಂಬ ಪದವೆ ನೀನು, ಪ್ರೀತಿ ದೈವಶಕ್ತಿ ಕಡಲು ನೀನು ಎಂದು ತಾಯಿಮಹಿಮೆಯನ್ನು ಕೊಂಡಾಡುವ ಪರಿ ಅನನ್ಯ. ಮುರಳಿ ಲೋಲ, ಸರ್ವ ಚೇತನೆ ಜಗದ ಮಾತೆ, ಭಕ್ತಿಗೀತೆಗಳು, ಬಣ್ಣದಚಿಟ್ಟೆ, ನನ್ನುಸಿರ ಕೃಷ್ಣಯ್ಯ, ನನ್ನ ಮುದ್ದು ಕಟ್ಟಾಣಿ ಮುಂತಾದ ಶಿಶುಗೀತೆಗಳು, 
ಸೂಜಿಗಲ್ಲಿನ ಸೆಳೆತ, ಭಾವತರಂಗ, ಬಣ್ಣದ ಬಯಲು, ಮನದ ಮಧುರ ಗೀತೆ, ಸಹೃದಯಿ, ಒಲವಿನ ಬಳ್ಳಿ, ವಿಸ್ಮಯದಾಗರ, ಮುಂತಾದ ಭಾವಗೀತೆಗಳು ಲಾಲಿತ್ಯದಿಂದ ಕೂಡಿದ್ದು ಓದುಗರ ಮನತಣಿಸುವಲ್ಲಿ ಯಶಸ್ವಿಯಾಗುತ್ತದೆ. ಪುನೀತ್ ರಾಜ್ ಅಗಲಿಕೆ ಸಂದರ್ಭ ಮನದ ಭಾವವನ್ನು ನಿನಗಿದೋ ನಮನ ಕವನದಲ್ಲಿ ಹೃದಯಸ್ಪರ್ಶಿಯಾಗಿ ಚಿತ್ರಣ ಮೂಡಿಸಿದ್ದಾರೆ. ಇವರ ಅನೇಕ ಕವನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿರುವುದು ಇವರ ಪ್ರತಿಭೆಗೆ ಹಿಡಿದ ಕೈಗನ್ನಡಿ. ಅಕ್ಷರಗಣ , ಮಾತ್ರಾಗಣ, ಅಂಶಗಣ ಯಾವುದೇ ವಿಧದ ಛಂದಸ್ಸಿನಲ್ಲಿ ಲೀಲಾಜಾಲವಾಗಿ ಕವನಗಳನ್ನು ಮನಮುಟ್ಟುವಂತೆ ಬರೆಯುತ್ತಾರೆ ಕವಯಿತ್ರಿ. ಅಕ್ಷರ ಗಣದ ಖಗರಾಜವೃತ್ತದಲ್ಲಿ ಕನ್ನಡನಾಡ ಭವ್ಯತೆ ಕನ್ನಡವೆಂದರೆ ಮೈನವಿರೇಳುವ ವೀಣೆಯ ನಾದದ ಶಾರದೆಯೂ ಕವನ ಬಹಳ ಸೊಗಸಾಗಿ ರಚಿತವಾಗಿದೆ. ಶಿಕ್ಷಣ, ಹಬ್ಬಹರಿದಿನಗಳು, ನೀತಿಬೋಧಕ, ಶಿವಶರಣರು, ಭಕ್ತಿ ಪಂಥದ ದಾಸರು, ದೇಶಭಕ್ತಿ, ಪ್ರಕೃತಿವರ್ಣನೆ, ಗುರುಭಕ್ತಿ ಹೀಗೆ ಹಲವು ವಿಷಯಗಳ ಬಗ್ಗೆ ಛಂದೋಬದ್ಧವಾಗಿ ಮನಸ್ಸಿಗೆ ನಾಟುವಂತೆ ಕವನಗಳನ್ನು ಕವಯಿತ್ರಿ ರಚಿಸಿದ್ದಾರೆ. ಪ್ರಥಮ ಪ್ರಯತ್ನದಲ್ಲೇ ಪ್ರಬುದ್ಧವಾಗಿ, ಮನಸ್ಸಿಗೆ ಹಿತವನ್ನು ತಂದುಕೊಡುವAತೆ ಲಾಲಿತ್ಯಪೂರ್ಣವಾಗಿ ಕವನಗಳನ್ನು ಹೆಣೆದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕವನ ಸಂಕಲನಗಳನ್ನು ಹೊರತಂದು ಸಹೃದಯ ಬಳಗಕ್ಕೆ, ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿ, ನಾಡಿನಲ್ಲಿ ಕೀರ್ತಿಯನ್ನು ಪಡೆಯಲೆಂದು ಆಶಿಸುತ್ತಾ, ಹೃದಯಪೂರ್ವಕ ಶುಭವನ್ನು ಹಾರೈಸುತ್ತೇನೆ.
ಪಂಡಿತ್. ಅಶ್ವತ್ಥನಾರಾಯಣ.
ಸಾಹಿತಿಗಳು. ಮೈಸೂರು.

ಸುಲೋಚನಾ ಸಾಗರ  ಅವರ ಶಿಶಿರದ ಚಿಗುರು
ಮಿಡಿವ ಎರಡಕ್ಷರ ತುಡಿತ ಅಮ್ಮ

ಅಮ್ಮ ನಿನಗೆ ಸಾಟಿಯಿಲ್ಲ
ಮುಕ್ಕೋಟಿ ದೇವರು
ಅಮ್ಮನೆನುವ ಒಲವ ದನಿಯ
ಯಾವತಂತಿ ಮೀಟದು
 
ನಿನ್ನ ಮಡಿಲಿ ಗಿಂತ ಇಲ್ಲ
ಬೇರೆಯಾವ ಒಲವ ಕಡಲು
ನಿನ್ನ ಒಲವಿ ಗಿಂತ ಇಲ್ಲ
ಬೇರೆಯಾವ ನಲಿವ ಹೊನಲು

ನಿನಗೆ ನೀನೆ ಸಾಟಿ ಅಮ್ಮ
ಈ ಜೀವದ ಮೇಟಿ ಅಮ್ಮ
ನೀ ನಿಲ್ಲದ ಗುಡಿಯೆ ಅಲ್ಲ
ನೀ ನಿಲ್ಲದೆ ಬೆಳಕೆ ಇಲ್ಲ

ನೀನೇ ಉಸಿರು ನೀನೇ ಹಸಿರು
ನಿನ್ನಿಂದಲೇ ಈ ಜೀವ ಸೊಗಸು
ನಿನ್ನ ಎಲ್ಲ ತ್ಯಾಗ ಕ್ಕಿಂತ
ಬಾಳಿಗಿಲ್ಲ ನೊಗದ ಹೆಗಲು

ಅಮ್ಮ ನೀನೇ ಕರುಣಾ ಧರಣಿ
ನಿನಗೆ ಈ ಜಗವೆ ಋಣಿ
ನಿನ್ನ ಒಲವ ಶಕ್ತಿಯ ಮುಂದೆ
ತಲೆ ಬಾಗಿತೆಲ್ಲ ಜಗದ  ಶಕ್ತಿ

ನಿನ್ನ ಬಸಿರ ದೇಗುಲದಲ್ಲಿ
ಮೂಡಿಬಂದಿವೆ ಶಿಲ್ಪಗಳೆಲ್ಲ
ನಿನ್ನ ಕೆತ್ತನೆಯಿಂದಲೆ ಶಿಲ್ಪ
ಜಗದಿ ಪೂಜಿತವಾದುದು

ಗಾಳಿ ಮಳೆಗೆ ಉರಿವ ಧಗೆಗೆ
ನಿನ್ನ ಸೆರಗ ಅಡ್ಡ ಹಿಡಿದೆ
ನಿನ್ನ ಎದೆಯ ಮಾಡನೊಡ್ಡಿ
ನೆರಳ ತಂಪ ನೀಡಿದೆ

ನೋವ ನೊಗಕೆ ಹೆಗಲ ಕೊಟ್ಟು
ಬಸಿದೆ ನಿನ್ನ ನೆತ್ತರನ್ನು
ಕರುಳ ಪ್ರೀತಿ ದನಿಯ ಕರೆಗೆ
ನಿನ್ನ ಪ್ರಾಣವ ಮುಡಿಪ ನಿಟ್ಟೆ

ಫಲವ ಬಯಸದೆ ಹಾಲ ಕುಡಿಸಿದ
ಕಾಮಧೇನು ನೀನಮ್ಮ
ನೆರಳ ಬಯಸದೆ ಜೀವತೇದ
ಕಲ್ಪತರು ನೀನಮ್ಮ

ಅಮ್ಮ ನಿನ್ನ ಮೊಗದ ಮುಂದೆ
ಇಲ್ಲ ಬೇರೆ ನಗುವ ಹೂವು
ನಿನ್ನ ಕಣ್ಣಕಾಂತಿಯ ಮುಂದೆ
ಇಲ್ಲ ಬೇರೆ ಬಾನ ತಾರೆ

ತಿದ್ದಿ ತೀಡಿ ಬುದ್ಧಿ ಕಲಿಸಿ
ಎದ್ದು ಬಿದ್ದು ಮುದ್ದು ಮಾಡಿದೆ
ಎತ್ತಿ ಆಡಿಸಿ ಜೋಗುಳ ಹಾಡಿ
ಬೀಳದಂತೆ ಕೈಯ ಹಿಡಿದೆ

ನಡೆಯ ನುಡಿಯ ಕಲಿಸಿದ
ಮೊದಲ ಗುರು ನೀನೆ ಅಮ್ಮ
ನೀನು ನೀಡಿದ ಒಲವ ಶಿಕ್ಷೆ
ನನ್ನ ಬಾಳಿಗೆ ಅದುವೆ ರಕ್ಷೆ

ನಿನ್ನ ದುಡಿಮೆ ದಣಿವ ಮರೆತು
ನನ್ನ ಒಡನೆ ಆಡಿಕುಣಿದೆ
ಮೊಗ್ಗು ಮಾತಿಗೆ ಹಿಗ್ಗಿನಲಿದು
ನನ್ನ ಮುದ್ದು ಮಾಡಿ ನಲಿದೆ
 
ಹೆಜ್ಜೆ ಹೆಜ್ಜೆಗೆ ಹೆಜ್ಜೆ ಹಾಕಿದ
ನನ್ನ ಮೊದಲ ಗೆಳತಿ ನೀನು
ನನ್ನ ಎದೆಯ ಮೊದಲ ಭಕ್ತಿ
ನಿನ್ನ ಒಲವ ಶಕ್ತಿಗೆ ಮುಡಿಪು
 
ಅರಿಯಲಾಗದ ಆಳ ನೀನು
ಹೇಳಲಾಗದ ಭಾವ ನೀನು
ಸದಾ ಮಿಡಿವ ಎದೆಯ ತುಡಿತ
ಎರಡಕ್ಷರ ನೀನೇ ಅಮ್ಮ

ಅಮ್ಮನನ್ನು ವರ್ಣಿಸುವಂಥ
ಶಬ್ದ ಸೃಷ್ಟಿ ಜಗದಲಿ ಇಲ್ಲ
ಅಮ್ಮ ನನ್ನು ಸೃಷ್ಟಿಸಿದಂಥ
ದೇವರಿAದಲು ಸಾಧ್ಯ ವಿಲ್ಲ

* * * * *

ಸುಲೋಚನಾ ಸಾಗರ  ಅವರ ಶಿಶಿರದ ಚಿಗುರು
ಸುಲೋಚನಾ ಸಾಗರ  ಅವರ ಶಿಶಿರದ ಚಿಗುರು
ಸುಲೋಚನಾ ಸಾಗರ  ಅವರ ಶಿಶಿರದ ಚಿಗುರು
ಸುಲೋಚನಾ ಸಾಗರ  ಅವರ ಶಿಶಿರದ ಚಿಗುರು
ಸುಲೋಚನಾ ಸಾಗರ  ಅವರ ಶಿಶಿರದ ಚಿಗುರು
ಸುಲೋಚನಾ ಸಾಗರ  ಅವರ ಶಿಶಿರದ ಚಿಗುರು

Comments (0)




Be the first to comment using the form below.