ಡಾ ಶೇಖರ್ ಅಜೆಕಾರು ನನಗೆ ಮುಂಬೈಯಲ್ಲಿ ಪರಿಚಯವಾದವರು. ಅವರು ಇನ್ನಿಲ್ಲ ಎನ್ನುವ ಸುದ್ದಿ ಸಿಕ್ಕಿದ ಕೂಡಲೇ ಮನಸ್ಸು ಮ್ಲಾನವಾಯಿತು. ಹಾಗಿತ್ತು ನಮ್ಮ ಒಳಗಿನ ಬಾಂಧವ್ಯ.
ಒಂದು ವಿಶೇಷಣದಲ್ಲಿ ಅವರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಅವರು ಮುಂಬೈ ವಿಶ್ವವಿದ್ಯಾನಿಲಯದ ಕನ್ನಡದಲ್ಲಿ ಎಂಎ ಪೂರೈಸಿದ್ದಾರೆ- ವರದರಾಜ ಆದ್ಯ ಚಿನ್ನದ ಪದಕದೊಂದಿಗೆ. 2019ರಲ್ಲಿ ಭಾರತೀಯ ವಿದ್ಯಾ ಭವನ ಮುಂಬೈ ಇವರಿಂದ ಗೌರವ ಡಾಕ್ಟರೇಟ್ ಪಡೆದರು.
ಪತ್ರಕರ್ತರಾಗಿ ಅವರ ವೃತ್ತಿ ಜೀವನ 1990 ರಿಂದ ಪ್ರಾರಂಭ ಆಯ್ತು. ಮುಂಬೈ ಪತ್ರಿಕೆ ಕರ್ನಾಟಕ ಮಲ್ಲದಲ್ಲಿ ಸುಮಾರು ಏಳು ವರ್ಷ, ಉಪಸಂಪಾದಕರಾಗಿ ಪ್ರಧಾನ ವರದಿಗಾರರಾಗಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. 1999- 2003ರಲ್ಲಿ ಜನ ವಾಹಿನಿ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಹೆಬ್ರಿ ಮೂಡುಬಿದರೆ ವಲಯದಲ್ಲಿ ಕನ್ನಡಪ್ರಭ ಸುದ್ದಿಗಾರರಾಗಿ ಕೆಲಸ ಮಾಡಿದ್ದಾರೆ. ಡಿಜಿ ವರ್ಲ್ಡ್, ಅಜೆಕಾರು ನ್ಯೂಸ್.ಕಾಂ, ಅವರು ಕೈ ಆಡಿಸಿದ ಇತರ ಮುಖ್ಯ ಸಂಸ್ಥೆಗಳು. ತಾವು ಬೆಳೆಯುವುದರ ಜೊತೆಗೆ ಅವರು ಇತರರನ್ನು ಬೆಳೆಸಿದ್ದಾರೆ.
ಶೇಖರ ಅಜೆಕಾರು ಅವರು ಉತ್ತಮ ಛಾಯಾಗ್ರಹಕರು. ಶಿಕ್ಷಕ, ಶಿಕ್ಷಣ ತಜ್ಞ ಮತ್ತು ಸಂಪನ್ಮೂಲ ವ್ಯಕ್ತಿ. ಮೂಡುಬಿದ್ರೆಯ ತನ್ನ ಕಚೇರಿಯಲ್ಲಿ ಶ್ರೀ ಕಾಲೇಜ್ ಹೆಸರಿನ ದೂರ ಶಿಕ್ಷಣ ಕೇಂದ್ರ, ಪತ್ರಿಕೋದ್ಯಮ ಆಸಕ್ತರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಕರ್ನಾಟಕ ಮಿನಿ ಚಲನಚಿತ್ರೋತ್ಸವವನ್ನು 2000 ಇಸವಿಯಲ್ಲಿ ಪ್ರಾರಂಭಿಸಿ ಕೆಲವು ವರ್ಷ ಮುನ್ನಡೆಸಿದ್ದಾರೆ.
ಶೇಖರ ಅಜೆಕಾರ ಅವರು ಸಾಮಾಜಿಕ ಕ್ಷೇತ್ರದಲ್ಲೂ ಕೂಡ ಹೊಸ ಚಿಂತನೆಯನ್ನು ಬೆಳೆಸಿದವರು. ಅವರಿಗೆ ಜಾತಿ ಮತ ಪಕ್ಷಭೇದ ಮರೆತು ನಾವೆಲ್ಲರೂ ಒಂದೇ ಎಂಬ ಆದರ್ಶವನ್ನು ಪಾಲಿಸಿದವರು. ತಾನು ಸ್ಥಾಪಿಸಿದ ಆದಿ ಗ್ರಾಮೋತ್ಸವದಲ್ಲಿ ಸರಳ ವಿವಾಹವಾಗಿ ಆದರ್ಶವನ್ನು ಮೆರೆದಿರುವುದು ಅವರ ಹೆಗ್ಗಳಿಕೆ. ಮುಂಬೈಯ ಹೋಟೆಲ್ ನಲ್ಲಿ ಕೆಲಸ ಮಾಡುವವರಿಗಾಗಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ಅವರ ಬದುಕಿನಲ್ಲಿ ಚೇತನವನ್ನು ತುಂಬಿದ್ದಾರೆ. ಹೊರನಾಡಿನ ಕನ್ನಡ ಸಂಘಗಳ ಸ್ಥಾಪನೆಯಲ್ಲಿ ಕೂಡ ಅವರ ಸಹಯೋಗವಿದೆ.
ಇತ್ತೀಚಿನ ವರ್ಷಗಳಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಅವರು ಹುಟ್ಟು ಹಾಕಿದ ಹೊಸ ಸಾಹಿತ್ಯಕ ಚಟುವಟಿಕೆ.
ಶೇಖರ ಅಜೆಕಾರು ಪ್ರಕಾಶಕರಾಗಿ ಸುಮಾರು 20 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಾಜಿ ರಾಜ್ಯಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಇವರು ಶೇಖರ ಅಧಿಕಾರವನ್ನು ಹೊಸ ಹಾದಿಯ ರಥಿಕ ಎಂದು ಕರೆದಿದ್ದಾರೆ.
ಡಾ ಶೇಖರ್ ಅಜೆಕಾರು ಅವರನ್ನು ಆರಿಸಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ. ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಮೈಸೂರು 2019 ಕಾಸರಗೋಡು ದಸರಾ ಗೌರವ ಪ್ರಶಸ್ತಿ 2019 ಶ್ರೀ ರಾಘವೇಂದ್ರರವರ ಸದ್ಭಾವ ಪ್ರಶಸ್ತಿ ಮಂತ್ರಾಲಯ 2017 ಭಾರತ ಜ್ಯೋತಿ ರಾಷ್ಟ್ರ ಪ್ರಶಸ್ತಿ ಬೆಂಗಳೂರು 2016 ಅವರು ಪಡೆದ ಇತ್ತೀಚಿನ ಮುಖ್ಯ ಪ್ರಶಸ್ತಿಗಳು. ಅವರು ಉತ್ತಮ ಸಂಘಟಕರು, ಮತ್ತು ಲೇಖಕರು. ಸುಮಾರು 25ಕ್ಕಿಂತ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.
ಡಾ ಶೇಖರ ಅಧಿಕಾರು ಅವರ ನಿಧನದ ಈ ಸಂದರ್ಭದಲ್ಲಿ ಅವರನ್ನು ನನ್ನ ಮನಸ್ಸು ಚಿತ್ರಿಸಿಕೊಂಡದ್ದು ಹೀಗೆ.
ಗೆಳೆಯ ಶೇಖರ ಅವರ ಕುಟುಂಬ ಈ ದುಃಖವನ್ನು ತಡೆದುಕೊಳ್ಳಲು ಸಮರ್ಥವಾಗಲಿ ಎಂಬ ಹಾರೈಕೆಗಳು.
Comments (0)
Post Comment
Report Abuse
Be the first to comment using the form below.