ಓದುಗ ಸನ್ಮಿತ್ರರಿಗೆ ನಲುಮೆಯ ಸಪ್ರಣಾಮಗಳು
ಲತಾ ನನ್ನ ಮಾನಸ ಪುತ್ರಿ . ವಿನಯಭೂಷಿತಳಾದ ನಿಗರ್ವಿಯಾದ ಸರಳ ಮನದ ಹುಡುಗಿ . ಅಮ್ಮಾ ಅನ್ನುವ ಪದದಲ್ಲಿನ ಮಾಧುರ್ಯ ನನ್ನನ್ನು ಸೆಳೆಯಿತು ಪ್ರತಿಭಾವಂತೆ ವಿದ್ಯಾವಂತೆ ಸ್ನೇಹಜೀವಿ. ಅಮ್ಮಾ ಮುನ್ನುಡಿಯನ್ನು ಬರೆದು ಕೊಡಿ ನನ್ನ ಬಿಡುಗಡೆಯಾಗುತ್ತಿರುವ ಕೃತಿಗೆ ಅಂದಾಗ ಅವಳ ಪ್ರೀತಿ ಸ್ನೇಹಕ್ಕೆ ಕಟ್ಟು ಬಿದ್ದಿದ್ದ ನಾನು ಕೂಡಲೇ ಒಪ್ಪಿಕೊಂಡೆ . ತನ್ನ ಅತುಳ ಕಾರ್ಯ ಬಾಹುಳ್ಯದಲ್ಲೂ ತಾಯೀ ಸರಸ್ವತಿಯ ಸೇವಾ ಕೈಂಕರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಲವು ಕಥೆ ಕವನ ಲೇಖನಗಳನ್ನು ಬರೆಯುತ್ತಾ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಈಗಾಗಲೇ ಕಾವ್ಯಲತೆ ಕವನ ಸಂಕಲವೊOದನ್ನು ಲೋಕಾರ್ಪಣೆ ಮಾಡಿ ಕನ್ನಡಿಗರ ಹೃದಯದಲ್ಲಿ ಮೆಚ್ಚುಗೆಯ ಛಾಪನ್ನು ಮೂಡಿಸಿರುವ ಲತಾ ಈಗ ತನ್ನ ಮತ್ತೊಂದು ಕೃತಿಯನ್ನು ಬೆಳಕಿಗೆ ತರುವವಳಿದ್ದಾಳೆ. ಅವಳಿಗೆ ನನ್ನ ತುಂಬು ಮನದ ಅಭಿನಂದನೆಗಳು . ಅವಳ ಚುಟುಕುಗಳ ಸಂಕಲನ ‘ಪ್ರೇಮ ಶ್ಯಾಮನ ಮಧುಲತೆ‘ ಎಲ್ಲರಿಗೂ ಮೆಚ್ಚುಗೆಯಾಗುವುದೆಂಬ ನಂಬಿಕೆ ನನಗಿದೆ . ಖಂಡಿತಾ ಓದಿ ಆಸ್ವಾದಿಸಿ. ಇಲ್ಲಿ ನಾಲ್ಕು ಸಾಲಿನ ಚುಟುಕುಗಳ ಮುಖೇನ ಇಡೀ ಬ್ರಹ್ಮಾಂಡವನ್ನೇ ತೆರೆದಿಟ್ಟಿರುವ ಕವಯಿತ್ರಿ ಬಹಳ ಚುಟುಕಾಗಿ ಆದರೆ ಚುರುಕಾಗಿ ಚೂಪು ಮುಟ್ಟಿಸುತ್ತಾ ನಮ್ಮನ್ನು ಬದುಕಿನ ಅವಲೋಕನದ ಕಡೆಗೆ ಕರೆದೊಯ್ಯುತ್ತಾರೆ. ಕುಡಿ ಒಡೆವ ಪ್ರೇಮದಿಂದ ಹೆಜ್ಜೆಯಿಡುತ್ತಾ ಸಾಗಿ ಕನ್ನಡ ಡಿಂಡಿಮವನ್ನು ಬಾರಿಸುತ್ತಾ ನಾಡು ನುಡಿಯ ಗರಿಮೆಯನ್ನು ಸಾರುತಾ ಕನ್ನಡ ವಿಶ್ವಮಾನ್ಯವಾಗಲೆಂದು ಆಶಿಸುತ್ತಾಳೆ. ಕವಯಿತ್ರಿ ಮುನ್ನಡೆದು ಬಾಂದಳದ ಚಂದ್ರಮನ ಚೆಲುವನ್ನು ಕೊಂಡಾಡಿದ್ದಾರೆ. ಆದರೆ ಎಲ್ಲೂ ಮೈ ಮರೆತಿಲ್ಲ. ಸತ್ಯ ಸಂಸ್ಕೃತಿಯ ಸಾರವನ್ನು ಅರ್ಥ ಮಾಡಿಸುವಲ್ಲಿ ಹಾಗೂ ಪ್ರಕೃತಿಯನ್ನುಳಿಸುವ ಸಂದೇಶವನ್ನು ಸಾರುವಲ್ಲಿ. ಪರಮೇಶನ ಪಂಚಾಕ್ಷರಿ ಮೂಲ ಮಂತ್ರದ ಮಹಿಮೆಯನ್ನು ಹೇಳುತ್ತಾ, ಜೀವನದ ಸತ್ಯತೆ ಶಾಂತಿ ತ್ಯಾಗ ಸಂಸ್ಕಾರದ ಶಾಸನವನ್ನೂ ಕಿವಿಯಲೂದುವರು. ಬಾಳೊಂದು ನಾಟಕ ರಂಗ ಅವನೆ ಇದರ ಸೂತ್ರಧಾರನು. ಎಲ್ಲರಿಗೂ ಅವರವರ ಪಾತ್ರವನು ನೀಡಿರುವನು ಎಂಬ ಅಲೌಕಿಕ ಸಂದೇಶವನು ಸಾರುವ ಕವಯಿತ್ರಿ ಪ್ರೇಮ, ಪ್ರೀತಿ ಸೊಬಗು, ಮನರಂಜನೆಯನು ಅರ್ಥೈಸುವುದರಲ್ಲೂ ಹಿಂದೆ ಬಿದ್ದಿಲ್ಲ. ಪ್ರೇಮ ಗೀತೆಯನು ಹಾಡುತ್ತಾ ಅಪ್ಸರೆಯ ನಾಚಿಸುವ ಲಲನೆಯ ಲಿಪ್ ಸ್ಟಿಕ್ ಕೂಡ ಇವರ ಅಂಕಿತಕ್ಕೊಳಗಾಗಿದೆ. ಹಾಗೆಯೇ ಗಂಭೀರವಾಗಿ ಕನಕದಾಸರನ್ನೂ ಗುರುನಾನಕರನ್ನೂ ನೆನೆಯುತ್ತಾ ಗುರು ಚರಣಗಳಿಗೆ ಶರಣಾಗುವ ಕರೆ ನೀಡುತ್ತಾ ವಿಶ್ವದೆಲ್ಲೆಡೆ ಶಾಂತಿ ನೆಲೆಸಲಿ ಎಂದಾಶಿಸುತ್ತಾರೆ
ಹಲವು ಭಾವಗಳ, ಹಲವು ವಿಷಯಗಳ ಹೂರಣವಾಗಿರುವ ಇವರ ಚುಟುಕುಗಳು ತಪ್ಪೆಸಗಿದರೆ ಕುಟುಕುತ್ತವೆ. ಹಾಗೇ ಮನೋಲ್ಲಾಸಗೊಳಿಸುವಲ್ಲೂ ಸಫಲವಾಗಿ ಜೀವನದ ಚಪ್ಪರದ ಸಾರವಾಗಿವೆ . ಬಂಧುಗಳೇ ಅರ್ಥಪೂರ್ಣ ಭಾವಪೂರ್ಣ ಸಂದರ್ಭಕ್ಕೆ ಕಟ್ಟಿದ ನುಡಿ ಮುತ್ತುಗಳಾಗಿವೆ . ತಾವು ಓದಲೇ ಬೇಕಾದ ಕೃತಿಯಿದು ಎಂದು ಹೆಮ್ಮೆಯಿಂದ ಹೇಳಬಲ್ಲೆ . ಶುಭವಾಗಲೀ ಶುಭವೇ ಆಗಲೀ ಎಂದಾಶಿಸುವೆ .
ರಾಜೇಶ್ವರಿ ಮೂರ್ತಿ
ಸಾಹಿತಿ, ನಿವೃತ್ತ ಪ್ರಾಂಶುಪಾಲೆ ಬೆಂಗಳೂರು.
Comments (0)
Post Comment
Report Abuse
Be the first to comment using the form below.