ಬದುಕಿಗೆ ದಾರಿ ತೋರಿದ ಗುರುವಿಗೆ ಶಬ್ದಗಳ ಕಾವ್ಯಧಾರೆಯ ಮೂಲಕ ಸಮರ್ಪಿಸಿದ ಕವನಗಳ ಭಾವ ನೈವೇದ್ಯವೇ ಸಮರ್ಪಣ ಕವನ ಸಂಕಲನ. ವೃತ್ತಿಯಿಂದ ಶಿಕ್ಷಕಿಯಾದ ಶ್ರೀಮತಿ ಪ್ರಜ್ವಲಾ ಶೆಣೈ ಅವರು ಪ್ರವೃತ್ತಿಯಿಂದ ಲೇಖಕಿ, ಕವಯಿತ್ರಿ. ಅನೇಕ ಲೇಖನಗಳು ಹಾಗೂ ಕವನಗಳನ್ನು ಓದುಗರ ಮನಮುಟ್ಟುವಂತೆ ಬರೆದು ಮೆಚ್ಚುಗೆ ಪಡೆದಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ಸಮರ್ಪಣ. ಕನ್ನಡ ಭಾಷೆಯ ಮೇಲಿನ ಅಪಾರ ಅಭಿಮಾನ ಬಾಲ್ಯದಲ್ಲಿಯೇ ತಮ್ಮ ಗುರುಗಳಿಂದ ಪ್ರೇರಿತಗೊಂಡದ್ದು. ಭಾಷೆಯ ಭಾವಾಭಿವ್ಯಕ್ತಿ ಕವನಗಳ ರೂಪದಲ್ಲಿ ರಚಿತವಾಗಿ ಸಮರ್ಪಣೆಗೊಂಡಿದೆ. ಓದುಗನ ವಿವಿಧ ಭಾವಾಂತರಂಗದ ಅಲೆಗಳನ್ನು ಕಾವ್ಯ ರೂಪದಲ್ಲಿ ಹಿಡಿದಿಟ್ಟಿದ್ದು ಈ ಕವನ ಸಂಕಲನದ ವಿಶೇಷ. 'ಮದುವಿ ಆದ ಮ್ಯಾಲ' ಕವನವು ಮದುವೆಯಾಗುವ ಹೆಣ್ಣಿಗೆ ಮಾರ್ಗದರ್ಶಕ ಕವನವಾಗಿ ಸೊಗಸಾಗಿ ಮೂಡಿಬಂದಿದೆ. 'ಭಾವದೊಡಲು' ಕವನವು ಭಾವಗಳ ಮಾಗುವಿಕೆಯ ಸಂಕೇತವಾಗಿ ನಿಲ್ಲುತ್ತದೆ. 'ಕುವರಿ' ಕವನವು ಮನಸ್ಸಿಗೆ ಬಹಳ ಆಪ್ತ ಎನಿಸುತ್ತದೆ. 'ಸವಾಲು' ಕವನವು ಬದುಕಿನ ಸವಾಲುಗಳನ್ನು ಎದುರಿಸುವ ಬಗೆಗೆ ಕನ್ನಡಿ ಹಿಡಿಯುತ್ತದೆ. 'ವರಕವಿ' ಕವನವು ಬೇಂದ್ರೆಯವರ ಸಾಹಿತ್ಯ ರಾಶಿಯ ಸೊಗಸಾದ ಪರಿಚಯ ಮಾಡಿಕೊಡುತ್ತದೆ. 'ತಡೆಗೋಡೆ','ಮುಖವಾಡದ ಬದುಕು', 'ನಿರೀಕ್ಷೆ', 'ತಿರಸ್ಕಾರ', 'ಕಾರಣ', 'ನಿರ್ಲಿಪ್ತ' ಕವನಗಳ ಭಾವಗಳನ್ನು ಓದಿಯೇ ಸವಿಯಬೇಕು. ಇವುಗಳು ಹತಾಶೆಯಾದ ಜೀವ ಭಾವಗಳಿಗೆ ಚೇತರಿಕೆ ನೀಡುವವು. 'ಹಾರೈಕೆ', 'ಕರುಳಿನ ಕೂಗು', 'ತಾಯ ಮಡಿಲು', 'ಕುವರಿ' ಇತ್ಯಾದಿ ಕವನಗಳು ತಾಯಿಯು ಕಂದನ ಮೇಲೆ ತೋರುವ ಮಮತೆಯ ಭಾವಗಳ ಕಟ್ಟು ಎಂದೆನ್ನಬಹುದು.
ಒಟ್ಟಾರೆ ಸಮರ್ಪಣ' ಸಂಕಲನದ 30 ಕವನಗಳೂ ಸಹ ಓದುಗರ ಮನಸ್ಸಿಗೆ ಸಂತಸದ ಮೃಷ್ಟಾನ್ನ ಭೋಜನವನ್ನು ಉಣಬಡಿಸುವುದು ನಿಶ್ಚಿತ. ಮನಃಪಟಲದಲ್ಲಿ ಅಚ್ಚಳಿಯದೆ ಉಳಿಯುವುದು ಖಂಡಿತ. ಯಾಂತ್ರಿಕತೆಯಲ್ಲಿ ಕಳೆದು ಹೋದ ಮನುಷ್ಯನ ಭಾವಗಳು ಮತ್ತೆ ಜಾಗೃತವಾಗುವುದು ಖಚಿತ. ಇನ್ನಷ್ಟು ಮನೋಜ್ಞ ಕವನಗಳು ಇವರ ಲೇಖನಿಯಿಂದ ಹೊರಹೊಮ್ಮಲಿ, ಆ ಮೂಲಕ ಓದುಗರ ಮನ ತಣಿಸಲಿ ಎಂದು ಆಶಿಸುತ್ತ.. ಶುಭ ಹಾರೈಕೆಗಳೊಂದಿಗೆ..
Comments (0)
Post Comment
Report Abuse
Be the first to comment using the form below.