ಪರವೀನ ಬಾನು ಅವರು ದೈಹಿಕವಾಗಿ ಅಂಗವಿಕಲೆಯಾಗಿದ್ದರೂ ಇದ್ಯಾವುದು ಅವರ ಸಾಧನೆಗೆ ಅಡ್ಡಿಯಾಗಿಲ್ಲ. ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಅತ್ಯಂತ ಪ್ರಬುದ್ಧರು, ಪ್ರವೀಣರು, ಸಕಲಕಲಾ ಪಾರಂಗತರು ಹಾಗೂ ಸಹೃದಯಿಗಳು ಎಂದು ಅವರ ಕವನವನ್ನು ವಾಚಿಸಿದಾಗ ಅನ್ನಿಸದೇ ಇರಲಾರದು.ಶ್ರೀಮತಿ ಪರವೀನ ಬಾನುಅವರು ೨೦೦೨ ರಿಂದ ಅಂದರೆ ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ಕವನ, ಲೇಖನಗಳನ್ನು ಬರೆಯುತ್ತಾ ಸಾಹಿತ್ಯದಲ್ಲಿ ತಮ್ಮ ಅಭಿರುಚಿಯನ್ನು ಬೆಳೆಸಿಕೊಂಡಿದ್ದರು. ಇವರು ಕೇವಲ ಕವನಗಳನ್ನು ಅಷ್ಟೇ ಅಲ್ಲ ಟಂಕ, ರುಬಾಯಿ, ಹಾಯ್ಕು, ಹನಿಗವನ, ಚುಟುಕು, ಶಿಶು ಗೀತೆಗಳು, ಭಾವಗೀತೆಗಳು ಈ ರೀತಿಯ ಹಲವಾರು ಸಾಹಿತ್ಯದ ಪ್ರಕಾರಗಳಲ್ಲಿ ಕೈ ಆಡಿಸಿ ಸೈ ಎನಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬoತೆ ಇವರ ಅನೇಕ ಸಾಹಿತ್ಯದ ಪ್ರಕಾರಗಳು ಕರ್ನಾಟಕದ ಪ್ರತಿಷ್ಠಿತ ಕನ್ನಡ ಪತ್ರಿಕೆಗಳಾದ ಪ್ರಿಯಾಂಕ ಮಾಸಪತ್ರಿಕೆ, ಸುಧಾ ವಾರಪತ್ರಿಕೆ ,ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಅನುಪಮಾ ಮಹಿಳಾ ಮಾಸಿಕ, ಗುಬ್ಬಚ್ಚಿ ಗೂಡು ಮಾಸಪತ್ರಿಕೆ ಹಾಗೂ ಸ್ಥಳೀಯ ಪತ್ರಿಕೆಯಾದ ಬನಶ್ರೀ ವಾಣಿ ಯಲ್ಲಿ ಪ್ರಕಟಗೊಂಡು ಓದುಗರ ಅತೀವ ಮೆಚ್ಚುಗೆಗೆ ಪಾತ್ರವಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಬಾಲ ಮಂದಾರ( ಕವಿತೆಗಳ ಶೃಂಗಾರ)ಕವನ ಸಂಕಲನವು ಅನೇಕ ಶಿಶು ಗೀತೆ, ಸಮಾಜ ಸುಧಾರಕರ ಬಗ್ಗೆ, ಪರಿಸರ ಗೀತೆಗಳು, ಅಮ್ಮನ ಕುರಿತು, ದೇಶಭಕ್ತಿ ಗೀತೆಗಳು, ನಾಡು ನುಡಿಯ ಬಗ್ಗೆ ಬರೆದ ಕಾವ್ಯಗಳ ಸುಂದರ ಗುಚ್ಛವಾಗಿದೆ. ಇವರ ಕವನಗಳು ಲಯಬದ್ಧವಾಗಿ , ಪ್ರಾಸ ಬದ್ದವಾಗಿ ಮೂಡಿಬಂದಿವೆ. ಒಟ್ಟು ೫೧ ಕವನಗಳನ್ನು ಹೊತ್ತ ಬಾಲ ಮಂದಾರ ಕವನ ಸಂಕಲನವು ಓದುಗರ ಮೆಚ್ಚುಗೆ ಗಳಿಸಬಲ್ಲದು ಎನ್ನುವುದು ನನ್ನ ಅಭಿಮತ. ಇವರ ಕವನಗಳು ಸರಳವಾಗಿ ಓದಿಸಿಕೊಂಡು ಹೋಗುವಂತಹ ವಿಷಯ ವಸ್ತುವನ್ನು ಹೊಂದಿದ್ದು, ಆಸಕ್ತಿಯನ್ನು ಕೆರಳಿಸುತ್ತಾ ಆಕರ್ಷಿಸುತ್ತವೆ. ವಿಭಿನ್ನ ಪ್ರಕಾರದಲ್ಲಿ ತಮ್ಮ ಕವನಗಳನ್ನು ಬರೆಯುವುದರ ಮೂಲಕ ವಿಶಿಷ್ಟ ಶೈಲಿ ಹೊಂದಿದ್ದಾರೆ. ಸರಳ, ರಸಭರಿತ ಪದಜೋಡನೆಗಳ ಮೂಲಕ ತಮ್ಮ ಕಾವ್ಯ ರಚನೆ ಮಾಡಿದ್ದಾರೆ. ಇವರು ಬರೆದ ಮುದ್ದಿನ ಮಾವ, ಹೊಳೆಯುವ ತಾರೆಗಳು, ಕೂಡಿಸುವ ಆಟ,ಬಾನಂಗಳ, ಗೋಪಿಯ ಪೀಪಿ, ಮುದ್ದು ಕಂದ, ಮೊಬೈಲ್ ಕೊಡಿಸಮ್ಮ, ಗುಂಡನ ಚಂಡ ,ಪುಟ್ಟಕ್ಕಳ ಸಿಂಗಾರ, ಹಾಲುಗಲ್ಲದ ಕಂದ ,ನಾನು ಸರ್ಕಾರಿ ಶಾಲೆಗೆ ಹೋಗುವೆ, ಆಗಸದ ಹಂದರ ಇತ್ಯಾದಿ ಶಿಶು ಗೀತೆಗಳು ಮಕ್ಕಳಿಗೆ ತುಂಬಾ ಇಷ್ಟವಾಗುವ ಗೀತೆಗಳು. ಇಲ್ಲಿ ಪ್ರಾಸ ಪದದ ಜೊತೆಗೆ ರಸಮಯವಾದ ವರ್ಣನೆಯನ್ನು ಮಾಡಿದ್ದಾರೆ.
ಅಮ್ಮನ ಕೈತುತ್ತಿನ ರುಚಿ, ಮಮತಾಮಯಿ, ಅಮ್ಮನ ಮಮತೆ, ಜನ್ಮದಾತೆ ಇನ್ನು ಹಲವಾರು ಕವಿತೆಗಳು ಅಮ್ಮನ ನಿಷ್ಕಲ್ಮಶ ಪ್ರೀತಿಯನ್ನು ಅದ್ಭುತವಾಗಿ ತಮ್ಮ ಕಾವ್ಯದಲ್ಲಿ ವರ್ಣಿಸಿದ್ದಾರೆ. ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಬಿಂಬಿಸುವ ಹಚ್ಚ ಹಸಿರು, ಜಾಗೃತನಾಗು, ಸುಂದರ ಪರಿಸರ, ಅಳಿದುಳಿದ ಅವಶೇಷ, ನಾನು ಹಸಿರಿನ ರಾಣಿ,ಅರಿವು ಕವಿತೆಗಳು ರಸವತ್ತಾದ ಪದಪುಂಜಗಳಿoದ ಪೋಣಿಸಲ್ಪಟ್ಟಿವೆ. ಸ್ಪೂರ್ತಿ ಸೆಲೆಗಳು, ಜಗವನ್ನೇ ಗೆದ್ದವರು, ದೈವ ಸ್ವರೂಪಿ ಬಾಬಾ ಸಾಹೇಬ, ನಿಸ್ವಾರ್ಥ ಕಾಯಕಯೋಗಿ, ಕ್ರಾಂತಿದೀಪ್ತಿ ಶರಣೆ ಸಮಾಜಕ್ಕೆ ದಾರಿದೀಪವಾಗಿ ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿ, ಅಮರರಾದ ಅನೇಕ ಮಹಾನ್ ಚೇತನರ ಗುಣಗಾನವನ್ನು ಅವರ ವಿಚಾರವನ್ನು ಅಭಿವ್ಯಕ್ತಿಗೊಳಿಸಿ ಹೊಗಳಿದ್ದಾರೆ. ಮಳೆಯ ಹನಿಯ ಸಿಂಚನ ,ಸೂರ್ಯರಶ್ಮಿ, ರೈತ ಜೀವದ ತಳಮಳ ಪ್ರಕೃತಿಯಲ್ಲಿ ವರ್ಷಧಾರೆಯ ಮಹತ್ವವನ್ನು ತುಂಬಾ ಚೆನ್ನಾಗಿ ಕಾವ್ಯ ರೂಪದಲ್ಲಿ ಹೊರ ತಂದಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಪರವೀನ ಬಾನು ಅವರು ಮಕ್ಕಳೊಂದಿಗೆ ಅವಿನಾಭಾವ ಒಡನಾಟ, ನಾವಿನ್ಯತಾ ಬೋಧನಾ ಶೈಲಿಯೊಂದಿಗೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಾ ಅವರ ಶ್ರೇಯೋದ್ಧಾರಕ್ಕಾಗಿ ಅವಿರತ ಶ್ರಮ ಪಡುತ್ತಿರುವುದು ಕಂಡು ಬರುತ್ತದೆ. ಕವನ ಸಂಕಲನ ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಂದ ಹಿಡಿದು ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ಅವರ ಆಶಯಕ್ಕೆ,ಅಭಿರುಚಿಗೆ ತಕ್ಕಂತೆ ವಿಭಿನ್ನ ಪ್ರಕಾರದ ಕಾವ್ಯಗಾನ ಲಹರಿ ಎಲ್ಲ ವಯೋಮಾನದವರಿಗೂ ಇವರ ಕಾವ್ಯ ರುಚಿಸುವುದರಲ್ಲಿ ಎರಡು ಮಾತಿಲ್ಲ. ವಿವಿಧ ರುಚಿಯ ಸ್ವಾದವನ್ನು ಓದುವವರಿಗೆ ನೀಡಬಲ್ಲದು ಎಂಬುದರಲ್ಲಿಎಳ್ಳಷ್ಟು ಸಂಶಯವಿಲ್ಲ.
ನಾಳಿನ ಭವ್ಯ ಭಾರತ ನಿರ್ಮಿಸುವ ಮುದ್ದು ಮಕ್ಕಳಿಗೆ ಇವರ ಸಾಹಿತ್ಯವು ದಾರಿ ದೀಪವಾಗಲಿದೆ. ೨೦೨೩ ರಲ್ಲಿ ಬಾಲ ಮಂದಾರ ( ಕವಿತೆಗಳ ಶೃಂಗಾರ) ಪ್ರಕಟಣೆಯಾಗಿ ಹೊರ ಬರುತ್ತಿದೆ . ಶ್ರೀಮತಿ ಪರವೀನ ಬಾನು ಅವರಿಗೆ ಒಳ್ಳೆಯದಾಗಲಿ ಎಂಬ ಶುಭ ಹಾರೈಕೆಗಳು. ಹೀಗೆ ಹೊಸ ಬಗೆಯ ಕಾವ್ಯಗಳು ವಿಭಿನ್ನ ರೀತಿಯಲ್ಲಿ ಹೀಗೆ ರಚನೆ ಆಗುತ್ತಿರಲಿ, ಅವರ ಸಾಹಿತ್ಯಿಕ ಅಭಿರುಚಿ ಹೆಮ್ಮರವಾಗಿ ಬೆಳೆಯಲಿ ಎಂದು ಮನ ಪೂರ್ವಕವಾಗಿ ಹಾರೈಸುತ್ತೇನೆ.
ಡಾ. ಸಾರಿಕಾ ಎಸ್. ಗಂಗಾ (ಸಾಹಿತಿಗಳು)
ರಾಷ್ಟ್ರೀಯ ಕಾರ್ಯದರ್ಶಿಗಳು (ಸಾವಿತ್ರಿ ಬಾಯಿಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ
ರಾಜ್ಯಕಾರ್ಯದರ್ಶಿ (ಸಾವಿತ್ರಿ ಬಾಯಿಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ರಾಜ್ಯಘಟಕ, ಧಾರವಾಡ ಹಾಗೂ ಬೀದರ್ ಜಿಲ್ಲಾಧ್ಯಕ್ಷರು
ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ (ರಿ) ಬೆಂಗಳೂರು
ತಾಲೂಕು ಘಟಕ ಹುಮನಾಬಾದ್
Comments (0)
Post Comment
Report Abuse
Be the first to comment using the form below.