ಭಾವನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವುದರ ಮೂಲಕ ಹೃದಯ- ಹೃದಯಗಳಿಗೆ ಬೆಸುಗೆಯಾಗುವುದೇ ಕವಿತೆ. ಲೋಕಾನುಭವ ನಿಜವಾದ ಭಾವಾನುಭವ ಆಗಬೇಕು. ಆಗ ಬರಹಗಳ ಪ್ರೌಢಿಮೆ ಹೆಚ್ಚಿಸುತ್ತದೆ. ಕಾವ್ಯದಲ್ಲಿ ಬದುಕಿನ ವೈವಿಧ್ಯತೆಯನ್ನು ಕಟ್ಟಿಕೊಡಬೇಕು. ಅದುವೇ ಕವಿಯ ಮೂಲ ಉದ್ದೇಶವಾದರೆ ಕಾವ್ಯದ ರಸಾನುಭವವಾಗುತ್ತದೆ. ಸಾಹಿತ್ಯ ಜನ ಸಾಮಾನ್ಯರಿಗೂ ವಿವಿಧ ರೂಪಗಳಲ್ಲಿ ಪ್ರಿಯವಾಗಿದೆ. ಸಾಹಿತ್ಯಕ್ಕೆ ಎಲ್ಲವನ್ನು ತಬ್ಬಿಕೊಳ್ಳುವ ಶಕ್ತಿ ಇದೆ. ಕವಿಯಾದವನು ಪ್ರತಿಕ್ಷಣದ ಅನುಭವಗಳನ್ನು ಸೆರೆ ಹಿಡಿಯಬೇಕು. ಅನುಭವಕ್ಕೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸುವ ಜೊತೆಗೆ ಭಾಷೆಗೂ ಆದ್ಯತೆ ನೀಡಬೇಕು. ಕವಿತೆಯಲ್ಲಿ ಕವಿಗೂ ಮೀರಿದ ಅರ್ಥಗಳಿರಬೇಕು. ಇವುಗಳು ಮೇಳೈಸಿದಾಗ ಉತ್ತಮ ಕವಿತೆಗಳು ಜೀವ ತಾಳುತ್ತವೆ. ನಾವು ನೋಡುವ ಪ್ರತಿಯೊಂದು ಘಟನೆ ಮತ್ತು ಸಂದರ್ಭದಲ್ಲಿ ಒಂದೊಂದು ಕವನವಿರುತ್ತದೆ;ಭಾವನಾತ್ಮಕ ಸಂವೇದನೆ ಇರುತ್ತದೆ. ಈ ಎಳೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಅದಕ್ಕೆ ಕಾವ್ಯ ಅಲಂಕಾರದ ಸರಳ ವಿಧಿ ವಿಧಾನಗಳನ್ನು ತೊಡಿಸಿದರೆ ಕವನ ಸುಂದರವಾಗಿ ಒಡಮೂಡುತ್ತದೆ. ಆರಂಭಿಕ ಕವಿಗಳು ಇಷ್ಟಕ್ಕೆ ಸಮಾಧಾನ ಪಟ್ಟುಕೊಂಡರೆ,ಬರೆಯುತ್ತಾ ಇನ್ನೂ ಪ್ರಬುದ್ಧಸ್ತರದ ರೂಪಕಗಳನ್ನು ಬಳಸಿಕೊಂಡು ಕಾವ್ಯ ಸೌಂದರ್ಯವನ್ನು ಹೆಚ್ಚಿಸಬಹುದು. ಇದು ಕವಿ ಬೆಳೆಯಬೇಕಾದ ಕ್ರಮವೆನ್ನಬಹುದು.
"ಕುಸುಮಬಾಲೆ" ಶ್ರೀಮತಿ ಪರಿಮಳ ಐವರ್ನಾಡು ಅವರ ಮೊದಲ ಕವನ ಸಂಕಲನ. ಇವರು ವೃತ್ತಿಯಲ್ಲಿ ಶಾಲಾ ಶಿಕ್ಷಕಿ. ಅಂತರ್ಜಾಲ ಸ್ಪರ್ಧೆಗಳಲ್ಲಿ ಸಾಕಷ್ಟು ಕವನಗಳನ್ನು ಬರೆಯುತ್ತಾ ಬಂದವರು. ಅವುಗಳನ್ನು ಜೋಡಿಸಿ ಪುಸ್ತಕ ರೂಪ ಕೊಡುವ ಯೋಜನೆ ಅವರಿಗೆ ಮೂಡಿದ್ದು ಇತ್ತೀಚೆಗೆ. "ಕುಸುಮ ಬಾಲೆ" ಒಂದು ವಿಶಿಷ್ಟವಾದ ಶೀರ್ಷಿಕೆ. ಕುಸುಮ ಎಂದರೆ ಹೂವು, ಬಾಲೆ ಎಂದರೆ ಹುಡುಗಿ ಎಂದು ಸರಳವಾದ ಅರ್ಥ. ಆದರೆ ಈ ಎರಡು ಶಬ್ದಗಳು ಜೊತೆಯಾದಾಗ ಅದರ ಅರ್ಥ ವ್ಯಾಪ್ತಿ ವಿಸ್ತಾರವಾಗುತ್ತದೆ ಮತ್ತು ಪ್ರೌಢವಾಗುತ್ತದೆ. ಹೂವು ಕೋಮಲತೆ, ಚೆಲುವು ಮತ್ತು ಸುಗಂಧವನ್ನು ಮೇಳೈಸಿಕೊಂಡು ಬಂದಿರುವ ನಿಸರ್ಗ ವಿಶೇಷ. ಈ ಗುಣಗಳನ್ನು ಒಂದು ಹುಡುಗಿಗೆ ಅಥವಾ ಹೆಣ್ಣಿಗೆ ಆರೋಪಿಸಿದರೆ ಮೂಡುವ ಭಾವಗಳು ವರ್ಣಮಯ; ಭಾವಕೋಶಗಳಿಗೆ ಕಚಕುಳಿ ಇಡುವಂತವುಗಳು.
"ಕುಸುಮ ಬಾಲೆ" ಸಂಕಲನದ ಕವನಗಳು ವಸ್ತು ವೈವಿಧ್ಯದಿಂದ ಕೂಡಿವೆ, ಇದರಲ್ಲಿ ನಿಸರ್ಗದ ಚೆಲುವು,ದೇಶಪ್ರೇಮದ ಒಲವು, ಸಚ್ಚಾರಿತ್ರ್ಯದ ಒತ್ತಾಯ, ಪ್ರೀತಿ - ಪ್ರೇಮಗಳ ನವಿರಾದ ಸ್ಪಂದನೆಗಳು, ಚೈತನ್ಯ ಮೂಡಿಸುವ ಭಾವಗಳು ಸ್ವಾಭಾವಿಕವಾಗಿ ಬಂದಿರುವುದು ಗಮನಿಸ ಬಹುದಾದ ಅಂಶ. ಶ್ರೀಮತಿ ಪರಿಮಳ ಅವರ ಮಾತೃಭಾಷೆ ತಮಿಳಾದರೂ ಅವರೊಡನೆ ಒಡನಾಡುವಾಗ ಅದರ ಸುಳಿವೇ ಸಿಗದಷ್ಟು ಚೆನ್ನಾಗಿ ಕನ್ನಡ ಕವಿತೆಗಳನ್ನು ಬರೆದಿದ್ದಾರೆ. ಶಿಕ್ಷಕ ವೃತ್ತಿಯ ಒತ್ತಡದ ಮಧ್ಯೆಯೂ ಕವನಗಳನ್ನು ಒಟ್ಟು ಹಾಕಿ ಈ ಸಂಕಲನವನ್ನು ಹೊರತಂದಿರುವುದು ಅಭಿನಂದನೆಯ ವಿಚಾರ. ಮುಂದಿನ ದಿನಗಳಲ್ಲಿ ಇನ್ನೂ ಪ್ರಭುದ್ಧ ಕವಯತ್ರಿಯಾಗಿ ಹೊರಹೊಮ್ಮಲಿ ಎಂಬ ಶುಭಾಶಯಗಳು.
ಶುಭವಾಗಲಿ.
ಉದಯೋನ್ಮುಖ ಕವಯತ್ರಿ
ಶ್ರೀಮತಿ ಪರಿಮಳ ಐವರ್ನಾಡು
ಶ್ರೀಮತಿ ಪರಿಮಳ ಐವರ್ನಾಡು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನವರು. ಪ್ರಸ್ತುತ ಖಾಸಗಿ ಶಾಲೆಯ ಶಿಕ್ಷಕಿ. ಅವರ ಓದು ಎಂಎ,ಬಿಇಡಿ. “ಕುಸುಮಬಾಲೆ” ಶ್ರೀಮತಿ ಪರಿಮಳ ಅವರ ಚೊಚ್ಚಲು ಕವನ ಸಂಗ್ರಹ. ಸೀಮಿತ ೩೦ ಕವನಗಳಲ್ಲಿ ತಮ್ಮ ಕಾವ್ಯ ಚಾತುರ್ಯವನ್ನು ಸ್ವಚ್ಛಂದವಾಗಿ ವ್ಯಕ್ತಪಡಿಸಿದ್ದಾರೆ.ಪರಿಮಳ ಐವರ್ನಾಡು ಕಾವ್ಯದ ವಿವಿಧ ಉಪ ಪ್ರಕಾರಗಳಾದ ಚುಟುಕು,ಹನಿಗವನ,ಭಾವಗೀತೆ ಅಲ್ಲದೆ ಗಝಲ್‌ಗಳ ಮೂಲಕ ನಿರಂತರ ಸಾಹಿತ್ಯ ಬೇಸಾಯ ಮಾಡುತ್ತಿರುವವರು. ಅಂತರ್ಜಾಲ ಆಧಾರಿತ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ತಮ್ಮ ಬರವಣಿಗೆಯ ಕಸುವನ್ನು ಬೆಳೆಸಿಕೊಂಡಿದ್ದಾರೆ. ನೂರಾರು ಕವನಗಳು,ಕಿರುಲೇಖನಗಳನ್ನು ಬರೆದಿರುವ ಇವರು ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ರಂಗೋಲಿ,ಅಭಿನಯ ಗೀತೆ,ನೃತ್ಯ ನಾಟಕ ಶ್ರೀಮತಿ ಪರಿಮಳ ಅವರ ಹವ್ಯಾಸಗಳು. ಈ ಕ್ಷೇತ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಪರಿಚಿತರು. ಕೆರಿಯರ್ ಗೈಡೆನ್ಸ್ ಸಂಸ್ಥೆಯ ಸದಸ್ಯೆಯಾಗಿ ವೃತ್ತಿ ಮಾರ್ಗದರ್ಶನ ನೀಡಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಿದ್ದಾರೆ. ಸುಳ್ಯದ ತಮಿಳು ಕಲಾವಿದರ ವೇದಿಕೆಯ ಉಪಾಧ್ಯಕ್ಷೆಯಾಗಿರುವ ಇವರು ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಮುನ್ನೆಲೆಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಇವರ ಮಾತೃಭಾಷೆ ತಮಿಳು ಆಗಿದ್ದರೂ,ಕನ್ನಡ ಭಾಷೆಯ ಮೇಲಿನ ಅಪಾರ ಒಲವಿನಿಂದ ಕನ್ನಡ ಕಾವ್ಯಲೋಕದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರ ಕಾವ್ಯ-ಕಲೆಯ ಬಗೆಗಿನ ಅಭಿರುಚಿ-ಅಭಿವ್ಯಕ್ತಿಗಳನ್ನು ಪರಿಗಣಿಸಿ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ನಾಡಿನ ಸಮಾಚಾರ ಸೇವಾ ಸಂಘ (ರಿ.) ಗೋಕಾಕ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆ ವತಿಯಿಂದ ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ನೀಡಲಾಗುವ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿ ಇವರ ಮುಕುಟಕ್ಕೊಂದು ಚಿನ್ನದ ಗರಿ. ಮಂಗಳೂರಿನ ರಾಷ್ಟ್ರೀಯ ಭಾವೈಕ್ಯ ಪರಿಷತ್‌ನಿಂದ ‘ಕಾವ್ಯ ಸಿರಿ ಪ್ರಶಸ್ತಿ’,ಚಂದನ ಸಾಹಿತ್ಯ ವೇದಿಕೆಯಿಂದ ‘ಚಂದನಕುಸುಮ’ ಪ್ರಶಸ್ತಿಗಳು ಶ್ರೀಮತಿ ಪರಿಮಳ ಅವರ ಸಾಧನೆಗೆ ಸಂದ ಸಮ್ಮಾನಗಳು. ಈ “ಕುಸುಮಬಾಲೆ” ಕವನ ಸಂಕಲನ ಕಾವ್ಯಲೋಕದಲ್ಲಿ ಶ್ರೀಮತಿ ಪರಿಮಳ ಅವರ ಸೌಗಂಧವನ್ನು ಪಸರಿಸಲಿ,ಯಶಸ್ಸನ್ನು ತರಲಿ ಎಂದು ಶುಭಹಾರೈಸುತ್ತೇವೆ.
-ಆ್ಯಂಟನಿರಾಜ್ ಸುಳ್ಯ
ವಿಜಯ ಕರ್ನಾಟಕ,ಮಂಗಳೂರು
Comments (0)
Post Comment
Report Abuse
Be the first to comment using the form below.