ಕವನ ಎನ್ನುವುದು ಮನಸ್ಸು ಸ್ರಜಿಸುವ ಸುಗಂಧ ದ್ರವ್ಯ; ಓದುಗನ ಭಾವ ಕೋಶವನ್ನು ಸೇರಿ ಮನೋಲ್ಲಾಸವನ್ನು, ಕಾಡುವ ಭಾವಗಳನ್ನು ಹುಟ್ಟು ಹಾಕುವ ಶಕ್ತಿಯುಳ್ಳದ್ದು. ಅದುವೇ ಕಾವ್ಯ ಗುಣ. ಕನ್ನಡ ಸಾಹಿತ್ಯವನ್ನು ಅವಲೋಕಿಸಿದರೆ ಕಾವ್ಯವೇ ಸಾಹಿತ್ಯದ ಮೊದಲ ಪ್ರಕಾರವೆನಿಸುತ್ತದೆ. ಜಾನಪದವಾಗಲಿ, ಲಿಖಿತ ಸಾಹಿತ್ಯವೇ ಆಗಲಿ ಈ ಮಾತು ನಿಜವೆನಿಸುತ್ತದೆ. ಮನಸ್ಸಿಗೆ ಬಂದ ಭಾವಗಳನ್ನು ಕಾವ್ಯತ್ಮಕವಾಗಿ ಹೇಳಿದರೆ ಮಾತ್ರವೇ ಸರಿ ಎನ್ನುವ ಭಾವ ಅಂದಿನ ಕವಿಗಳಲ್ಲಿ ಇದ್ದಂತೆ ಕಾಣುತ್ತದೆ. ಕಾಲ ಸಂದ ಹಾಗೆ ಕವನ ಸರಳವಾಗಿ ಸಾಮಾನ್ಯರನ್ನು ತಲಪುವ ಕಡೆಗೆ ಹೊರಳಿದ್ದು ಗೋಚರವಾಗುತ್ತದೆ. ಹಲವು ಹೊರಳುಗಳ ಬಳಿಕ ಕವನಗಳು ನವೋದಯದ ಇಂದಿನ ಗುಣ ವಿಶೇಷಗಳನ್ನು ಸ್ಥಾಯಿ ಮಾಡಿದಂತೆ ಅನಿಸುತ್ತದೆ. ಪ್ರಾಸದಿಂದ ಅಲಂಕೃತವಾದ ಕವನಗಳು ಬರಬರುತ್ತ ಪ್ರಾಸ ರಚನೆಯನ್ನು ತೊರೆದು ನಿರುಮ್ಮಳವಾದದ್ದು ,ಕಳೆದ ಒಂದು ಶತಮಾನದ ಬೆಳವಣಿಗೆ. ಶ್ರೀಮತಿ ಗುಲಾಬಿ ರಾಘವೇಂದ್ರ ಅವರು ಅನುಭವಿ ಕವಯತ್ರಿಯರಲ್ಲಿ ಒಬ್ಬರು.ಅವರ ಕವನಗಳಲ್ಲಿ ಎದ್ದು ಕಾಣುವ ಅಂಶವೆAದರೆ ವೈಚಾರಿಕತೆ,ನಾಡು ನುಡಿಯ ಪ್ರೇಮ, ದೀನ ದಲಿತರು- ಶ್ರಮಜೀವಿಗಳ ಬಗ್ಗೆ ಕನಿಕರ, ಒತ್ತಾಸೆ, ಅಪ್ಪ ಅಮ್ಮನ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯ ಇಂತಹ ನವಿರು ಮಾನವೀಯ ಭಾವಗಳು. ಕವಯತ್ರಿಗೆ ನಿಸರ್ಗ ಮತ್ತು ಪರಿಸರಗಳ ಬಗ್ಗೆ ವಿಶೇಷ ಸಹ ತಾಪ ಮತ್ತು ಸ್ತ್ರೀ ಸಂವೇದನೆ ಸುಪ್ತವಾಗಿ ಕಂಡುಬರುತ್ತದೆ. ಈ ಸಂಕಲನದಲ್ಲಿ 55 ಕವನಗಳಿವೆ. ವೈವಿಧ್ಯಮಯ ವಸ್ತುವನ್ನು ಆಯ್ದುಕೊಂಡು ಕವನಗಳನ್ನು ಹೆಣೆದಿರುವುದು ಹೆಗ್ಗಳಿಕೆ. ಮಾಮೂಲಿ ವಿಷಯಗಳನ್ನು ತೊರೆದು ಹೊಸದನ್ನು ಬರೆಯಬೇಕೆಂಬ ತುಡಿತ ಕವಯತ್ರಿಯಲ್ಲಿ ಕಾಣುತ್ತದೆ. ಆದರೂ ಪೂರ್ವವಾಸನೆಯನ್ನು ಪೂರ್ಣವಾಗಿ ಬಿಡಲು ಇನ್ನೂ ಶ್ರಮ ಬೇಕಾಗಿದೆ. ಕಾವ್ಯ ರಚನೆಯ ವಿಶೇಷತೆಗಳನ್ನು ನೋಡಿದರೆ ಪ್ರಾಸದ ಕಡೆಗೆ ಹೆಚ್ಚಿನ ಗಮನ ಕೊಡದಿರುವುದು ಕಾಣುತ್ತದೆ. ಅಂದ ಮಾತ್ರಕ್ಕೆ ಪ್ರಾಸವನ್ನು ಪೂರ್ಣವಾಗಿ ಕೈ ಬಿಡದಿರುವುದು ಗಮನಾರ್ಹ ಅಂಶ. ಕವಿಯತ್ರಿ ರಾಮಾಯಣ ಮಹಾಭಾರತದ ವಸ್ತುವನ್ನು ಆರಿಸಿಕೊಂಡು ಕೆಲವು ಕವನಗಳನ್ನು ಹೆಣೆದಿದ್ದಾರೆ. ಪೌರಾಣಿಕ ವಿಷಯಗಳ ಬಗ್ಗೆ ಪ್ರಬುದ್ಧ ತಿಳುವಳಿಕೆ ಮತ್ತು ಕಾವ್ಯವಾಗಿಸುವಕಲೆಯನ್ನು ಅವರು ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಕೆಲವು ಕವನಗಳು ಹೆಚ್ಚು ಶ್ರೀಮಂತವಾಗಿರುವುದು ಕಾಣುತ್ತದೆ. ಸಂಕಲನದ ಕವನಗಳಲ್ಲಿ ಮಕ್ಕಳ ಕವನಗಳು, ಜಾನಪದ ಕವನಗಳು, ಪ್ರಕೃತಿ ಗೀತೆಗಳು,ಈ ಕಾವ್ಯ ಗುಚ್ಛದಲ್ಲಿ ಇವೆ. ಅವರ ಪದಭಂಡಾರ ವ್ಯಾಪಕವೂ ಶಕ್ತಿಶಾಲಿಯೂ ಆಗಿದೆ. ಒಟ್ಟಂದದಲ್ಲಿ ಹೇಳಬೇಕಾದರೆ ಈ ಕವನ ಸಂಗ್ರಹವು "ಕಾವ್ಯಕ್ಕಾಗಿ ಕಾವ್ಯ" ಎಂಬ ಧೋರಣೆಯಿಂದ ದೂರ ಉಳಿದಂತೆ ತೋರುತ್ತದೆ. ಒಂದೆರಡು ಕವನಗಳನ್ನು ವಿಮರ್ಶೆಗೆ ಒಡ್ಡಿದರೆ "ಮೌನ ಮೀಟಿದ ಪದ"ಗಳ ಹೆಗ್ಗಳಿಕೆಯನ್ನು ಕಂಡುಕೊಳ್ಳಬಹುದು.
"ಆತ್ಮದಾಲಿಂಗನದ ಪ್ರೀತಿ" ಶೀರ್ಷಿಕೆಯ 20ನೇ ಕವನದಲ್ಲಿ ಬರುವ ಈ ಸಾಲುಗಳು ಗಮನಾರ್ಹ
ಬಳಲಿದ ಗೆಳೆಯನಿಗೊಲುಮೆಯ ನೀಡು
ಬಯಸಿದ ಪ್ರೇಮದ ಗೀತೆಯ ಹಾಡು
ಮೇದಿನಿಗೊಪ್ಪವ ಮೋದವ ನೋಡು
ಮಂದಹಾಸದ ಚೆಲುವೆಯೇ ನನ್ನೊಡಗೂಡು
ಎನ್ನುವ ಸಾಲುಗಳಲ್ಲಿ ಕೌಟುಂಬಿಕ ಪ್ರೇಮದ ದಟ್ಟವಾದ ಛಾಯೆ ಕಾಣಸಿಗುತ್ತದೆ. "ಆತ್ಮದಾಲಿಂಗನದ ಪ್ರೀತಿ" ಎನ್ನುವ ಶೀರ್ಷಿಕೆ ಕೂಡ ವಿಶಿಷ್ಟವಾಗಿದ್ದು ದೈಹಿಕ ಆಕರ್ಷಣೆಯ ಪ್ರೀತಿಯಿಂದ ಭಿನ್ನವಾಗಿ ಪ್ರಯೋಗಗೊಂಡಿದೆ. ವಿರಹದ ಮೊದಲ ನಾಲ್ಕು ಸಾಲುಗಳು 21ನೇ ಕವನದಲ್ಲಿ ಹೀಗೆ ಇವೆ
ಮೌನವ ಮುರಿದುಬಿಡು ಇನಿಯಾ
ಇಂದೇಕೊ ತಳಮಳಿಸುತ್ತಿದೆ ಹೃದಯ
ನಿಡಿದಾಗ ಉಸಿರಿದು ಬಯಸುತಿದೆ ಬೆಸುಗೆಯ
ಆಸೆಗಳ ಪರಿಹಾಸವಾಗಿ ನಿಂದಿಹುದು ಹರೆಯ
ಜೈವಿಕ ತುಡಿತಗಳನ್ನು ಕವಯತ್ರಿ ದಟ್ಟವಾದ ಭಾವಗಳಿಂದ ಮೊನಚು ಮಾಡಿದ್ದಾರೆ.ಮ"ಕುಸುಮ ಸಖ" ಶೀರ್ಷಿಕೆಯ ಕವನದಲ್ಲಿ (ಕವನ ಸಂಖ್ಯೆ 23) ಉತ್ತಮ ಸಂದೇಶವನ್ನು ಸಾರುವ ಸಾಲುಗಳು ಇವು
ಅರಳಿ ಬಾಡುವ ಮುನ್ನ ಆದರ್ಶವಿರಬೇಕು
ಸಾಧ್ಯವಾದಷ್ಟು ಒಳಿತ ಬಯಸಬೇಕು
"ಅವ್ವ" ಶೀರ್ಷಿಕೆಯ ಕವನದಲ್ಲಿ ಬರುವ ಎರಡು ಸಾಲುಗಳು ತುಂಬಾ ಭಾವನಾತ್ಮಕ
ಇನ್ನೊಂದು ಜನುಮವು ನನಗಾಗಿ ಇದ್ದರೆ
ಪಾದರಕ್ಷೆಯಾಗಿ ಅವಳ ಕಾಲಡಿ ಬಾಳುವೆ ತುಂಬಾ ಮಾರ್ಮಿಕ ಸಾಲುಗಳು.
42ನೇ ಕವನದ ಸಾಲುಗಳು ಸ್ತ್ರೀಪರತೆಯನ್ನು ಎತ್ತಿ ಹಿಡಿಯುತ್ತವೆ
ಹೆಣ್ಣಿಂದು ಕೊರಗದಿರಿ ಜರಿಯದಿರಿ
ಹೆಣ್ಣೆಂದು ಮರುಗದಿರಿ ಮೂಢರಿರಾ
ಹೆಣ್ಣಲ್ಲವೇ ಬಸಿರಿಗೆ ಉಸಿರು ಕೊಟ್ಟವಳು
ಜೀವ ಜಗತ್ತಿಗೆ ಚೈತನ್ಯದ ಹಸುರುಡಿಸಿದವಳು.
"ಪಚ್ಚೆ ಪತ್ತಲು" ಶೀರ್ಷಿಕೆಯ 45ನೇ ಕವನ ಒಂದು ಪ್ರಕೃತಿ ಗೀತೆ. ನಿಸರ್ಗದ ಪ್ರಕ್ರಿಯೆಯನ್ನು ಬಿಚ್ಚಿಟ್ಟ ಆವೇಶ ಚೆನ್ನಾಗಿದೆ.
"ಅಭಿಸಾರಿಕೆ" ಎನ್ನುವ ಮುಂದಿನ ಕವನ ವಿಶೇಷತೆಯನ್ನು ಹೊಂದಿದೆ. ಹೆಚ್ಚಿನ ಕವನಗಳು ಜೀವನ ಪರವಾದ ಆಶಯವನ್ನು ಓದುಗರಿಗೆ ತಲುಪಿಸುವುದು ಕವನ ಸಂಗ್ರಹದ ಒಟ್ಟಂದದ ಹೆಗ್ಗಳಿಕೆ. ತುಳಿದ ದಾರಿಯನ್ನು ತುಳಿಯುವ ಒತ್ತಾಯ ಕವಯತ್ರಿಗೆ ಇಲ್ಲ ಎಂಬುದು ಕವನಗಳನ್ನು ಓದುವಾಗ ಮನವರಿಕೆಯಾಗುತ್ತದೆ. ಕಾವ್ಯ ಗುಣವನ್ನು ಗಮನಿಸಿದರೆ ಈ ಕವಯತ್ರಿ ಮುಂದೆ ಉತ್ತಮ ಪರಿಪಕ್ವ ಕವನಗಳನ್ನು ಕೊಡುವ ಭರವಸೆ ಮೂಡಿಸುತ್ತಾರೆ. ಶ್ರೀಮತಿ ಗುಲಾಬಿ ರಾಘವೇಂದ್ರ ಅವರು ವೃತ್ತಿಯಲ್ಲಿ ಶಿಕ್ಷಕಿ. ಪ್ರವೃತ್ತಿಯಲ್ಲಿ ಕವಯತ್ರಿ. ಹಲವು ಅಂತರ್ಜಾಲ ತಾಣಗಳಲ್ಲಿ ನಡೆಯುವ ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಲ್ಲದೆ ತಮ್ಮ ಬರವಣಿಗೆಯನ್ನು ಸುಧಾರಿಸಿಕೊಂಡಿರುವುದು ಗಮನಾರ್ಹ. ಶ್ರೀಮತಿ ಗುಲಾಬಿಯವರ ಕಾವ್ಯ ಪಯಣ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
Comments (0)
Post Comment
Report Abuse
Be the first to comment using the form below.