(JavaScript required to view this email address)
Mangalore

News & Articles

 ಶ್ರೀಮತಿ ವೀಣಾ ಕಾರಂತ್ ಅವರ 
"ನನ್ನಾಸೆ" 
ಕವನ ಸಂಕಲನ 
ಕಥಾ ಬಿಂದು ಪ್ರಕಾಶನ 
ಈ ವರ್ಷ ಪ್ರಕಟಿಸಿದ ಸಾಹಿತ್ಯ ಕೃತಿಗಳಲ್ಲಿ ಒಂದಾಗಿದೆ. 
ಕವನವೆಂದರೆ ಮನಸ್ಸಿನ ಒಂದು ಉತ್ತೇಜಿತ ಸ್ಥಿತಿಯಲ್ಲಿ ಜನ್ಯವಾಗುವ ಭಾವ ವಿಶೇಷ. ಹೂವು ಅರಳುವುದು ಹೇಗೆ ನಿಸರ್ಗದ ಸ್ವಯಂ ಪ್ರೇರಿತ ಪ್ರಕ್ರಿಯೆಯೋ ಹಾಗೆ ಕವನದ ಹುಟ್ಟು ಕೂಡ ಸ್ವಾಭಾವಿಕ. ಉತ್ತಮ ಕವನದ ಅರಳುವಿಕೆಗೆ ಪ್ರತಿಭೆ ಇರಬೇಕೆಂಬ ಅಭಿಪ್ರಾಯ ಕೂಡ ಇದೆ.  ಈ ಪ್ರತಿಭೆ ಕೂಡ ಹುಟ್ಟಿನ ಜೊತೆಗೆ ಬರುವಂತಹ ಸಾಮರ್ಥ್ಯ ವಿಶೇಷ. ಒಂದು ಕವಿತೆಯ ಹುಟ್ಟಿಗೆ ಮೂಲಭೂತವಾಗಿ ಬೇಕಾದ್ದು ಕವಿ ಮನೋಧರ್ಮ. ಅದೊಂದಿದ್ದರೆ ಸಕಾರಣವಾಗಿ ಆಗಿರಬಹುದು ಇಲ್ಲವೇ  ಅಕಾರಣವಾಗಿ ಇರಬಹುದು ಭಾವಸ್ಪುರಣವಾಗುತ್ತದೆ. ಪ್ರಕೃತಿ ಮತ್ತು ಪರಿಸರದಲ್ಲಿ ನಡೆಯುವ ವಿಶೇಷ ವಿದ್ಯಮಾನಗಳು ದೈನಂದಿಕ ಬದುಕಿನಲ್ಲಿ ಮನೆಯೊಳಗೂ ಹೊರಗೂ ನಡೆಯುವ ಘಟನೆಗಳು  ಈ ಘಟನೆಗಳು ಭಾವಸ್ಪುರಣಕ್ಕೆ ಕಾರಣವಾಗಬಹುದು.  ಹೀಗೆ ನಿರ್ದಿಷ್ಟವಾದ ಬಾಹ್ಯ ಕಾರಣವಿಲ್ಲದಿದ್ದಾಗಲೂ ಕವಿಯ ಭಾವ ಕೋಶದೊಳಗೆ ಅಡಗಿರುವ ಕಿಡಿಯೊಂದು ಕೂಡ ಉನ್ಮಿಲನಲ್ಗೊಂಡು ಕಾವ್ಯ ರಚನೆಯನ್ನು ಒತ್ತಾಯಿಸಬಹುದು. ಅದೇನೇ ಇರಲಿ ಈ ಭಾವಸ್ಪುರಣ ಅದಕ್ಕೆ ಯೋಗ್ಯವಾದ ಪದಗಳಲ್ಲಿ ಮತ್ತು ಉಚಿತವಾದ ಗತಿಯಲ್ಲಿ ಹಿಡಿದಿಡುವುದು ಕವಿಯ ಕೌಶಲ. ಕವಿಯ ಪ್ರತಿಭೆ ಮತ್ತು ವ್ಯುತ್ಪತ್ತಿ ಈ ಎರಡರ ಸಹಭಾಗಿತ್ವದಿಂದ ಕವಿತೆ ಕಟ್ಟುವ ಕಾಯಕ ಪೂರ್ಣವಾಗುತ್ತದೆ.

ವೀಣಾ ಆರ್ ಕಾರಂತ ಅವರು ತನ್ನ ಮನದಾಳದ ಹೊಳಹುಗಳನ್ನು "ನನ್ನಾಸೆ"ಎಂಬ ಕವನ ಸಂಕಲನದಲ್ಲಿ ಕವಿತೆಯಾಗಿಸಿದ್ದಾರೆ. ಸುಮಾರು 50 ಕವನ ಕುಸುಮಗಳು ಇಲ್ಲಿವೆ. ಒಂದೊಂದು ಬಣ್ಣ ಒಂದೊಂದು ಗಂಧ. ಈ ಕವನಗಳಲ್ಲಿ ಎದ್ದು ಕಾಣುವ ಅಂಶವೆಂದರೆ ಉದಿಸಿದ ಆಸೆಗಳನ್ನು ಯೋಜನೆಗಳನ್ನು ವ್ಯಕ್ತಪಡಿಸುವುದು ಕವನದ ಉಡುಪುಗಳ ಬಗ್ಗೆ ಯಾವುದೇ ಕಟ್ಟುಪಾಡುಗಳನ್ನು ಹಾಕಿಕೊಳ್ಳದೆ ಮನಸ್ಸಿಗೆ ಬಂದ ನಿರ್ಮಿತಿಯ ಭಾವಗಳನ್ನು ಪೋಣಿಸಿರುವುದು ವೀಣಾ ಕಾರಂತವರ ಸಾಧನೆ.


ನನ್ನಾಸೆ
"ನನ್ನಾಸೆ" ವೀಣಾ ಕಾರಂತ್ ಅವರ ಚೊಚ್ಚಲು ಕವನ ಸಂಗ್ರಹ.  ಕವನಗಳ ವಸ್ತುವಿನಲ್ಲಿ ವೈವಿಧ್ಯತೆ ಇದೆ;  ಪ್ರಕೃತಿ ಗೀತೆಗಳು, ಭಕ್ತಿ ಗೀತೆಗಳು, ಬದುಕಿನ ನಿರೀಕ್ಷೆಗಳು, ನೋವು ನಲಿವುಗಳು ಈ ಸಂಕಲನದ ಕವನಗಳ ಆಂತರ್ಯವಾಗಿದೆ. ಕಾಣುವ ವೈಶಿಷ್ಟ್ಯ, ಭರವಸೆ ಮೂಡಿಸುವ ಕಾವ್ಯ ಚೈತನ್ಯ ಗಮನಕ್ಕೆ ಬರುವ ಸಕಾರಾತ್ಮಕ ಅಂಶ.  ಚೊಚ್ಚಲು ಕವನ ಸಂಗ್ರಹ ಸಾಮಾನ್ಯವಾಗಿ ಕಾಣುವ ಸ್ವಚ್ಛಂದತೆ ಈ ಕವನಗಳಲ್ಲಿಯೂ ಕಾಣಬಹುದು. ಮುಂದಿನ ಕವನ ಸಂಕಲನಗಳಿಗೆ ಇದು ಆರಂಭಿಕ ಮೆಟ್ಟಲು.

ವೀಣಾ ಕಾರಂತ್  ಅವರ ಕವನಗಳಿಗೆ ಶಾಸ್ತ್ರೋಕ್ತ ಉಡುಪುಗಳಾದ ಛಂದಸ್ಸು, ಪ್ರಾಸ, ಅಲಂಕಾರ ಅಳವಡಿಸಿದರೆ ಇನ್ನೂ ಹೆಚ್ಚು ಗೇಯತೆ ಬರುತ್ತಿತ್ತು.  ಮುಂದಿನ ಸಂಕಲನಗಳಲ್ಲಿ ಅವುಗಳ ಬಗ್ಗೆ ಅವರು ಗಮನ ಹರಿಸಬಹುದು.

ವೀಣಾ ಕಾರಂತ್ ತೀರ್ಥಹಳ್ಳಿಯ ಹೇರಂಬಾಪುರದವರು.  ಇವರು ಉದ್ಯೋಗಸ್ಥರು.  ಅಂತರ್ಜಾಲ ಆಧಾರಿತ ಸಾಹಿತ್ಯ ಸ್ಪರ್ಧೆಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಕವನಗಳು ಮಾತ್ರವಲ್ಲದೆ ಚುಟುಕು, ಹಾಸ್ಯ, ರುಬಾಯಿ, ಹನಿಗವನ, ಹಾಯ್ಕು, ಹಾಗೂ ಸಾಹಿತ್ಯದ ಇತರ ಪ್ರಕಾರಗಳನ್ನು ಕೂಡ ಬರೆಯುತ್ತಾರೆ. ಅವರಿಗೆ ಹಲವು ಸಾಹಿತ್ಯಕ ಬಹುಮಾನಗಳು ಬಂದಿವೆ. ಉದಯೋದ್ಮುಖ ಕವಯಿತ್ರಿ ಎಂದು ಗುರುತಿಸಿಕೊಂಡಿರುವ ವೀಣಾ ಕಾರಂತ ಅವರಿಗೆ ತಮ್ಮ ಪ್ರವೃತ್ತಿಯಲ್ಲಿ ಹೆಚ್ಚಿನ ಯಶಸ್ಸು ಸಿಗಲಿ ಎಂದು ಶುಭ ಹಾರೈಕೆಗಳು.

ನನ್ನಾಸೆ
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು
ನನ್ನಾಸೆ
ನನ್ನಾಸೆ - Youtube Video
ನನ್ನಾಸೆ
ನನ್ನಾಸೆ
ನನ್ನಾಸೆ
ನನ್ನಾಸೆ

Comment (1)




ವಆ

ವೀಣಾ ಆರ್ ಕಾರಂತ್ commented on July 12th, 2023 at 7:38 PM 
ತುಂಬಾ ಚೆನ್ನಾಗಿದೆ ಬರಹ.ತುಂಬಾ ಧನ್ಯವಾದಗಳು