(JavaScript required to view this email address)
Mangalore

News & Articles

ಮೇದಿನಿಯ ಸೃಷ್ಟಿ 
ಪುರಾಣಕಥೆಗಳ ಆಧಾರದಲ್ಲಿ ಮೇದಿನಿಯ ಸೃಷ್ಟಿಯ ಕಥೆ :
ಯಕ್ಷಗಾನದಲ್ಲಿ ಬರುವಂತಹ ಪುರಾಣ ಕಥೆಯ ಆಧಾರದಲ್ಲಿ ಭೂಮಿಯ ಸೃಷ್ಟಿಯ ಬಗೆಗಿನ ಕಥೆ :
ಜಗನ್ಮಾತೆ ಆದಿಮಾಯೆಯಿಂದ ಸೃಷ್ಟಿಸಲ್ಪಟ್ಟಂತಹ ಮೂರು ವ್ಯಕ್ತಿಗಳು . 
ಬಿಳಿಯ ವರ್ಣದ ಬ್ರಹ್ಮ, ನೀಲವರ್ಣದ ವಿಷ್ಣು ಹಾಗೂ ಶಿವದೇವರು ನಿರ್ಮಿಸಲ್ಪಡುತ್ತಾರೆ. ವಿಷ್ಣುವು ಸತ್ವಗುಣ, ಬ್ರಹ್ಮನು ರಜೋಗುಣ ಹಾಗೂ ಶಿವನು ತಮೋಗುಣವನ್ನು ಹೊಂದಿರುತ್ತಾರೆ. ಶಿವನು ಕೈಲಾಸವಾಸಿಯಾಗಿ, ಚರ್ಮಾಂಭರನಾಗಿ, ತಲೆಯಲ್ಲಿ ಗಂಗೆ, ಶಿರದಲ್ಲಿ ಚಂದ್ರ, ಕಂಠದಲ್ಲಿ ನಾಗಾಭರಣನಾಗಿಯೂ ತಮೋಗುಣ ಅಂದರೆ ಉಗ್ರಗುಣ, ಪಾರ್ವತಿಪತಿಯಾಗಿ ಲಯಕರ್ತ (ಲಯಾಧಿಕಾರಿ) ನಾಗಿ ಕೈಲಾಸಾಧೀಶನಾಗಿರುತ್ತಾನೆ. ವಿಷ್ಣುವು ಶೇಷಶಯನನಾಗಿ, ಲಕ್ಷ್ಮಿಯನ್ನು ಪಾದದಲ್ಲಿರಿಸಿಕೊಂಡು ಶಂಖ-ಚಕ್ರ , ಗದಾ, ಪದ್ಮಗಳನ್ನು ಧರಿಸಿಕೊಂಡು ಜಗದ ಪಾಲನಾಕರ್ತನಾಗಿ ವೈಕುಂಠದ ಕ್ಷೀರಸಾಗರದಲ್ಲಿ ವಾಸವಾಗಿರುತ್ತಾರೆ. ಬ್ರಹ್ಮದೇವರು ವಿಷ್ಣುವಿನ ನಾಭಿಕಮಲದಲ್ಲಿ ಉದ್ಭವಿಸಿಕೊಂಡು ಸತ್ಯಲೋಕದಲ್ಲಿ ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ , ಅಥರ್ವವೇದಗಳೆಂಬ 4 ಮುಖಗಳಿಂದ ಹೊರಟು; ಸೃಷ್ಟಿಕರ್ತನಾಗಿ “ವಿಧಾತ” ಅಂದರೆ, ಹಣೆಬರಹ ಬರೆಯುವಾತ ಎನಿಸಿಕೊಂಡಿರುತ್ತಾರೆ. ವಿಧಿ ಬರೆಯುವಾಗ, ಬ್ರಹ್ಮನರಾಣಿ ಆದಂತಹ ಶಾರದಾದೇವಿಯು ಒಂದು ಕೈಯಲ್ಲಿ ಜಪಸರವನ್ನು , ಇನ್ನೊಂದು ಕೈಯಲ್ಲಿ ವೇದ ಪುಸ್ತಕವನ್ನು, ಎರಡು ಕೈಗಳಲ್ಲಿ ವೀಣೆಯನ್ನು ನುಡಿಸುತ್ತಾ; ವೀಣೆಯಿಂದ ಹೊರಟಂತಹ ನಾದ ತರಂಗಗಳಿಂದ ಹೊರಡುವ ನಾದಸ್ವರವೇ ವಿಧಾತನಿಗೆ ವಿಧಿ ಬರಹ ಬರೆಯಲು ಸ್ಪೂರ್ತಿ. ಒಮ್ಮೆ ವಿಧಾತನು ಅವಸರದಿಂದ ವಿಧಿ ಬರಹವನ್ನು ಬರೆಯುವ ಸಂದರ್ಭದಲ್ಲಿ ಅಸುರ ಶಕ್ತಿಗಳು ಜನಿಸುತ್ತವೆ. ಈ ಅಸುರ ಶಕ್ತಿಗಳು ಅಹಂಕಾರದಿಂದ ಮಿತಿಮೀರಿ ವರ್ತಿಸಿದಾಗ ;ಅಸುರರ ಸಂಹಾರಕ್ಕೋಸ್ಕರ ನವದುರ್ಗೆಯರ ಅವತಾರವಾಯಿತು. ಈ ಸಂದರ್ಭದಲ್ಲಿ ಸೃಷ್ಟಿಕರ್ತನೆಂಬ ಅಹಂಕಾರವು ಬ್ರಹ್ಮದೇವರಿಗೆ ತಲೆಗೆ ಏರಿದಾಗ; ಉದರ ಶೋಧನೆಯ ಮೂಲಕ ವಿಷ್ಣು ,ಬ್ರಹ್ಮನ ನಡುವೆ ಯುದ್ಧವು ಪ್ರಾರಂಭವಾಗುತ್ತದೆ. ಯುದ್ಧದಲ್ಲಿ ನಾ ಮೇಲು ತಾ ಮೇಲು ಎಂಬ ಘರ್ಷಣೆಯ ನಡುವೆ; ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಮಾತುಕತೆ ನಡೆದಾಗ, ಶಿವನು ವಿಷ್ಣುವೇ ಶ್ರೇಷ್ಠ ಎಂಬ ತೀರ್ಮಾನಕ್ಕೆ ಬಂದು; ಶಿವನು, ವಿಷ್ಣುವಿನಲ್ಲಿ ಐಕ್ಯವಾಗಿ, ಹರಿಹರರು ಒಂದಾಗಿ; ಹರಿ-ಹರರಲ್ಲಿ ಬೇಧವಿಲ್ಲ ಎಂದಾಗುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ, ಭೂಭಾಗ ಸೃಷ್ಟಿಯಾಗದೆ, ಪ್ರಪಂಚವು ಜಲಮಯವಾಗಿರುತ್ತದೆ.
ಒಟ್ಟು ನಾಲ್ಕು ಯುಗಗಳು. ಅವುಗಳೇ; ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ. ಈ ನಾಲ್ಕು ಯುಗಗಳನ್ನು ಒಂದಾಗಿ ಒಂದು ಮನ್ವಂತರ ಅಥವಾ ಒಂದು ಕಲ್ಪ ಎಂದು ಕರೆಯಲಾಗುತ್ತದೆ.(ಒಂದು ಮನ್ವಂತರ = ನಾಲ್ಕು ಯುಗಗಳು = ಒಂದು ಕಲ್ಪ ) ಪ್ರತಿ ಯುಗದಲ್ಲಿಯೂ ಶ್ರೀಮನ್ನಾರಾಯಣ ದೇವರು ಬಾಲ ಮುಕುಂದನಾಗಿ ವಟ ಪತ್ರದಲ್ಲಿ ಅಂದರೆ ಅಶ್ವತ್ಥ ಎಲೆಯಲ್ಲಿ ನೆಲೆಸಿದ್ದರು. ಹಾಗೆಯೇ, ಶ್ರೀಮನ್ನಾರಾಯಣ ದೇವರು ಸ್ತ್ರೀ-ಪುರುಷ 2 ಲಿಂಗಗಳಲ್ಲಿಯೂ ಕಾಣಿಸಿಕೊಳ್ಳುವಂತಹ ಶಕ್ತಿಯನ್ನು ಹೊಂದಿರುವುದರಿಂದ ಹರನು ಹರಿಯೇ ಶ್ರೇಷ್ಠವೆಂಬ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಬ್ರಹ್ಮನು ವಿಷ್ಣುವಿನ ಉದರ ಶೋಧನೆ ಮಾಡುವ ಸಂದರ್ಭದಲ್ಲಿ ವಿಷ್ಣು ದೇವರಿಗೆ ನಿದ್ರಾದೇವಿ ಆವರಿಸಿ ನಿದ್ರಿಸಲು ದೇವಿಯಲ್ಲಿ ಸ್ಥಳವನ್ನು ಕೇಳುತ್ತಾರೆ. ಕಾರಣ, ಇಡೀ ಪ್ರಪಂಚವೇ ಜಲಮಯವಾಗಿರುವುದರಿಂದ ದೇವಿಯು ವಟಪತ್ರ ( ಅಶ್ವತ್ಥ ಎಲೆ )ವನ್ನು ಕಳಿಸುತ್ತಾಳೆ. ಹೀಗೆ ನಿದ್ರಿಸುತ್ತಿದ್ದ ವಿಷ್ಣುವಿಗೆ ಕಿವಿ ನೋವು ಕಾಣಿಸಿಕೊಂಡು ಕಿವಿಯಿಂದ ಮಣ್ಣನ್ನು ಹೊರಹಾಕಿದಾಗ ಆ ಮಣ್ಣಿನಿಂದ ಮಧು-ಕೈಟಭರೆಂಬ ಭೂಮಿಯಷ್ಟು ಅಗಲದ ದೈತ್ಯ ರಾಕ್ಷಸರು ಜನಿಸುತ್ತಾರೆ. ರಾಕ್ಷಸರು ತಮ್ಮ ಹಸಿವನ್ನು ನೀಗಿಸಲು ಸೃಷ್ಟಿಕರ್ತ ಬ್ರಹ್ಮನನ್ನೇ ತಿನ್ನಲು ಮುಂದಾದಾಗ ಬ್ರಹ್ಮನು ವಿಷ್ಣುವಿನ ನಾಭಿಕಮಲದಲ್ಲಿ ಅಡಗಿಕೊಳ್ಳುತ್ತಾನೆ. ತ್ರಿಮೂರ್ತಿಗಳಿಗೂ ಮಧು ಕೈಟಭರಿಗೂ ಐದು ಸಾವಿರ ವರ್ಷಗಳ ಕಾಲ ಯುದ್ಧವು ನಡೆದು, ಈ ಯುದ್ಧದಲ್ಲಿ ಯಾರು ಸೋಲದೆ, ಯಾರು ಗೆಲ್ಲದೆ, ಸಮ ಬಲವು ಪ್ರದರ್ಶನಗೊಂಡಾಗ ವಿಷ್ಣುವು ಯುಕ್ತಿಯಿಂದ ಸೋತಂತೆ ನಟಿಸಿ, ನಂತರದಲ್ಲಿ; ಸೋತವರಿಗೆ, ಗೆದ್ದವರು ಕೇಳಿದ ವರವನ್ನು ನೀಡಬೇಕು ಎಂದು ಉಪಾಯದಿಂದ ವಿಷ್ಣುದೇವರು ಮಧು-ಕೈಟಭರಿಂದ ಭಾಷೆಯನ್ನು ಕೇಳುತ್ತಾರೆ. ಮಧು-ಕೈಟಭರು ತಾವೇ ಗೆದ್ದವರು ಎಂಬ ಸಂತೋಷದಲ್ಲಿ ಕೇಳಿದ ವರವನ್ನು ನೀಡುತ್ತೇವೆ ಎಂದು ವಿಷ್ಣು ದೇವರಿಗೆ ಭಾಷೆಯನ್ನು ನೀಡುತ್ತಾರೆ. ಈಗ ವಿಷ್ಣುದೇವರು ತಮ್ಮ ಯುಕ್ತಿಯಿಂದ ವರವನ್ನು ಕೇಳುತ್ತಾರೆ; ಮಧು ಕೈಟಭ ಅವರು ತಮ್ಮ ಪ್ರಾಣವನ್ನು ನೀಡಬೇಕು ಎಂಬ ವರವನ್ನು ವಿಷ್ಣು ಬೇಡಿದಾಗ; ಮಧು-ಕೈಟಭರು ಯೋಚಿಸಿ ಅತ್ಯಂತ ಉಪಾಯದಿಂದ, ತಮ್ಮ ಅಭಿಲಾಷೆಯನ್ನು ಹೇಳುತ್ತಾರೆ. ನೀರಿಲ್ಲದ ಸ್ಥಳದಲ್ಲಿ ತಮ್ಮ ಪ್ರಾಣವನ್ನು ತೆಗೆಯಬೇಕು ಎಂದು ಹೇಳುತ್ತಾರೆ. ಕಾರಣ, ಇಡೀ ಪ್ರಪಂಚವೇ ಜಲಮಯವಾಗಿದ್ದರಿಂದ ಈ ಪ್ರಪಂಚದಲ್ಲಿ ನೀರಿಲ್ಲದ ಜಾಗವೇ ಇರಲಿಲ್ಲ. ಈಗ ವಿಷ್ಣುದೇವರು ತಮ್ಮ ವಿಶ್ವರೂಪವನ್ನು ಧರಿಸಿ, ಪದ್ಮಾಸನದಲ್ಲಿ ಕುಳಿತು, ರಾಕ್ಷಸರಿಗೆ ಜ್ಞಾನವನ್ನು ಒದಗಿಸಿ ರಾಕ್ಷಸರುಗಳಿಗೆ ಮಧು ಕೈಟಭ ಎಂಬ ಹೆಸರನ್ನು ನೀಡಿ, ವಿಷ್ಣು ರಾಕ್ಷಸರನ್ನು ತನ್ನ ತೊಡೆಯ ಮೇಲೆ ಮಲಗಿಸಿ, ಸುದರ್ಶನ ಚಕ್ರದಿಂದ ರಾಕ್ಷಸರ ತಲೆಯನ್ನು ಛೇದಿಸಿ, ರಾಕ್ಷಸರ ದೇಹದಿಂದ ಮೇಧಿನಿಯ ನಿರ್ಮಾಣವನ್ನು ಮಾಡುತ್ತಾರೆ. ಹೀಗೆ, ಈ ಭೂಮಿಯ ನಿರ್ಮಾಣವಾಗುತ್ತದೆ ಎಂದು, ವೇದಗಳ ಬರಹದಿಂದ ತಿಳಿಯುತ್ತದೆ .ಈ ಪುರಾಣ ಕಥೆಯನ್ನು ನಮ್ಮ ತುಳುನಾಡಿನಲ್ಲಿ ಯಕ್ಷಗಾನದ ಮೂಲಕವಾಗಿ ಪ್ರದರ್ಶಿಸುತ್ತಾರೆ . ಭೂಮಿಯ ಸೃಷ್ಟಿಯ ಈ ಕತೆಯು ಪೌರಾಣಿಕ ಗ್ರಂಥಗಳಾದ ಸಪ್ತಶತಿ , ದೇವಿಮಹಾತ್ಮೆ ಗ್ರಂಥಗಳಲ್ಲಿ ಉಲ್ಲೇಖವಾಗಿದೆ .
ನಾವು ವೈಜ್ಞಾನಿಕವಾಗಿ, ಬಿಗ್ ಬ್ಯಾಂಗ್ ಥಿಯರಿ ! (ಭೂಮಿಯ ಉಗಮ ಸಿದ್ಧಾಂತ) ಯಿಂದ ಭೂಮಿಯ ಸೃಷ್ಟಿ ಆಯಿತು ಎಂದು ತಿಳಿದರೆ , ವೈಚಾರಿಕವಾಗಿ ಪೌರಾಣಿಕ ಹಿನ್ನಲೆಯಲ್ಲಿ ಅದರಲ್ಲಿಯೂ ತುಳುನಾಡಿನ ಗಂಡು ಕಲೆಯಾದ ಯಕ್ಷಗಾನದ ಪ್ರಕಾರವಾಗಿ ಈ ಕತೆಯ ಮೂಲಕ ಭೂಮಿಯು ಸೃಷ್ಟಿಸಲ್ಪಟ್ಟಿದೆ ಎಂದು ತಿಳಿಯುತ್ತೇವೆ. ಪೌರಾಣಿಕ ಹಿನ್ನಲೆಯಲ್ಲಿ ಸಹ ಭೂಮಿಯ ಸೃಷ್ಟಿಯ ಬಗೆಗೆ ಬೇರೆ ಬೇರೆ ರೀತಿಯ ಕಥೆಗಳನ್ನು ಕಾಣುತ್ತೇವೆ. ಯಕ್ಷಗಾನದಲ್ಲಿ ಒಂದು ರೀತಿಯಲ್ಲಿ ಭೂಮಿಯ ಸೃಷ್ಟಿಯ ಕಥೆಯನ್ನು ಹೇಳಿದರೆ ಇನ್ನು ದೇವಿಮಹಾತ್ಮೆ , ಸಪ್ತಶತಿ ಗ್ರಂಥಗಳಲ್ಲಿಯು ಬೇರೆ ದೃಷ್ಟಿಕೋನದಲ್ಲಿ ಭೂಮಿಯ ಸೃಷ್ಟಿಯ ಕಥೆಯು ಉಲ್ಲೇಖಗೊಂಡಿದೆ. ಒಂದೇ ವಿಷಯವನ್ನು ವಿವಿಧ ರೀತಿಯಲ್ಲಿ , ಬೇರೆ ಬೇರೆ ಸಂದರ್ಭಗಳಲಿ
ಹಲವಾರು ದೃಷ್ಟಿಕೋನದಲ್ಲಿ , ಸಂದರ್ಭಕ್ಕೆ ಅನುಗುಣವಾಗಿ ಚಿತ್ರಿಸಲಾಗಿದೆ. ಪೌರಾಣಿಕ ಹಿನ್ನಲೆಯ ಕಥೆಗಳಲ್ಲಿ ಸಹ ಭಿನ್ನ ದೃಷ್ಟಿಕೋನವನ್ನು ಕಾಣುತ್ತೇವೆ. ಯಕ್ಷಗಾನದಲ್ಲಿ ಮೂಡಿ ಬಂದಂತಹ ಮೇಧಿನಿ ಸೃಷ್ಟಿಯ ಕಥೆಯನ್ನು ನಾನಿಲ್ಲಿ ತೆಗೆದುಕೊಂಡಿರುವುದು. ಕಾರಣ, ಇಲ್ಲಿ ನಾನು ತೆಗೆದುಕೊಂಡ ವಿಷಯ ಪರಶುರಾಮ ಕ್ಷೇತ್ರ. ನಮ್ಮ ತುಳುನಾಡ ಗಂಡುಕಲೆ ಯಕ್ಷಗಾನ ಆದ್ದರಿಂದ ಯಕ್ಷಗಾನದ ಪುರಾಣ ಕಥೆಯ ಆಧಾರದಲ್ಲಿ ಭೂಮಿಯ ಸೃಷ್ಟಿಯ ಕಥೆಯನ್ನು ತೆಗೆದುಕೊಂಡಿರುವುದು. 
 ವೈಜ್ಞಾನಿಕ ದೃಷ್ಟಿಯಿಂದ ನೋಡುವವರಿಗೆ ಭೂಮಿಯ ಉಗಮ ಸಿದ್ಧಾಂತ ಸತ್ಯ ಎಣಿಸಿದರೆ , ವೈಚಾರಿಕವಾಗಿ ಪೌರಾಣಿಕ , ಆಧ್ಯಾತ್ಮದ ಒಲವಿರುವ ವ್ಯಕ್ತಿಗಳಿಗೆ ಪುರಾಣದ ಕಥೆಯಲ್ಲಿ ಹೆಚ್ಚಿನ ಆಸಕ್ತಿ ಇರಬಹುದು. ಇದೊಂದೇ ಪೌರಾಣಿಕ ಕಥೆ ಮಾತ್ರವಲ್ಲದೇ ವಿವಿಧ ರೀತಿಯ ಪುರಾಣ ಕಥೆಗಳನ್ನು ಅಲ್ಲಿನ ಪರಿಸರದ ಜನರ ನಂಬಿಕೆ, ಆಚರಣೆಗೆ ಅನುಗುಣವಾಗಿ ನಾವು ಕಾಣುತ್ತೇವೆ. ಇಲ್ಲಿ ನಾನು ಮನುಷ್ಯನ ವೈಜ್ಞಾನಿಕ ಹಾಗೂ ವೈಚಾರಿಕ; ಪೌರಾಣಿಕವಾದ ಯಾವುದೇ ವಿಷಯವನ್ನಾಗಲಿ ಪ್ರಶ್ನಿಸುತ್ತಿಲ್ಲ . ಇವೆಲ್ಲವೂ ಮನುಷ್ಯನ ಆಲೋಚನೆ , ನಂಬಿಕೆ , ಮನುಷ್ಯ ಬೆಳೆದು ಬಂದಂತಹ ಪರಿಸರ, ಮನುಷ್ಯನ ಮನಸ್ಥಿತಿ , ವಿಷಯವನ್ನು ನೋಡುವ ದೃಷ್ಟಿಕೋನಕ್ಕೆ ಸಂಬಂಧ ಪಟ್ಟಿರುವತದ್ದು.
ಮೇದಿನಿಯ ಸೃಷ್ಟಿ
ದಿವ್ಯ ಮಯ್ಯ
ಮೇದಿನಿಯ ಸೃಷ್ಟಿ
ಮೇದಿನಿಯ ಸೃಷ್ಟಿ
ಮೇದಿನಿಯ ಸೃಷ್ಟಿ

Comments (0)




Be the first to comment using the form below.