(JavaScript required to view this email address)
Mangalore

News & Articles


ಸಾಹಿತ್ಯ ಮತ್ತು ಪ್ರವಾಸ ಕೆಲವರಿಗೆ ಹವ್ಯಾಸದ ವಿಷಯಗಳು. ಇವೆರಡು ಇವೆ ಎಂದಾದರೆ ಎಷ್ಟು ದೂರ ಬೇಕಾದರೂ ಪ್ರಯಾಣಕ್ಕೆ ಹೊರಡುತ್ತಾರೆ ವಯಸ್ಸು, ಇತರ ಅಡಚಣೆಗಳ ಹೊರತಾಗಿ ಕೂಡ.  ಹಾಗೆ ಆಯೋಗಿತವಾದ ಒಂದು
ಪ್ರವಾಸದ ಕಥನ ಇದು. 


ಏಪ್ರಿಲ್ ಮೇ ತಿಂಗಳು ಅಂದರೆ ಕೆಲವರಿಗೆ ರಜಾ ದಿನಗಳು. ಶಿಕ್ಷಣ ರಂಗದಲ್ಲಿ ಕೆಲಸ ಮಾಡುವವರಿಗೆ ಮೇ ತಿಂಗಳ ಕೊನೆಯವರೆಗೆ ಬಿಡು ವಿರುತ್ತದೆ. ಇದನ್ನು ಗಮನದಲ್ಲಿರಿಸಿ ಮಂಗಳೂರಿನ ಕಥಾ ಬಿಂದು ಪ್ರಕಾಶನದ ಮುಖ್ಯಸ್ಥರಾದ ಪಿ ವಿ ಪ್ರದೀಪ್ ಕುಮಾರ್ ಅವರು  ಸಾಹಿತ್ಯ  ಮತ್ತು ಪ್ರವಾಸ ಕಾರ್ಯಕ್ರಮ ಒಂದನ್ನು ಹೈದರಾಬಾದಿನಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಆಯೋಜಿಸಿದ್ದರು. ಈ ಮಹತ್ವದ ಅಂತರ್ರಾಜ್ಯ ಸಾಹಿತ್ಯ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ, ಸಾಧಕರಿಗೆ ಸನ್ಮಾನ, ದ್ವಿಭಾಷಾ  ಕವಿ ಗೋಷ್ಠಿಗಳು ಒಳಗೊಂಡಿದ್ದುವು. 

ಮೇ ನಾಲ್ಕರಿಂದ ಹತ್ತರವರೆಗೆ ಮಂಗಳೂರು ಮತ್ತು ಬೆಂಗಳೂರು ಮೂಲದ 24 ಸಾಹಿತ್ಯಾಸಕ್ತರು  ಸಾಹಿತ್ಯ ಕಾರ್ಯಕ್ರಮ ಮತ್ತು ಮೂರು ದಿನಗಳ ಪ್ರವಾಸ ಅನುಭವವನ್ನು ಗುರಿ ಇರಿಸಿ ಹೊರಟದ್ದು. ಎಲ್ಲರಿಗೂ ಗೊತ್ತಿರುವಂತೆ ಈ ನಗರ ನಿಜಾಮರ ರಾಜಧಾನಿಯಾಗಿತ್ತು. ಈ ನಗರ ಮುತ್ತುಗಳ ಖರೀದಿಗೆ ಖ್ಯಾತಿ ಹೊಂದಿದೆ.  24 ಮಂದಿ ಸಾಹಿತ್ಯಾ ಸಕ್ತರು ಮೇ 5ನೇ ತಾರೀಕು ಬೆಳಿಗ್ಗೆ ಹೈದರಾಬಾದ್ ತಲುಪಿದೆವು. ನಿಗದಿತ ವಸತಿಗೃಹದಲ್ಲಿ ದಣಿವಾರಿಸಿ ಬೆಳಿಗ್ಗೆ ಹೈದರಾಬಾದ್ ನಗರದ ಪ್ರೇಕ್ಷಣೀಯ ಸ್ಥಳಗಳ ಭೇಟಿಗೆ ಹೊರಟೆವು. ಅವುಗಳಲ್ಲಿ ಸೋಲಾರ್ ಜಂಗ್ ಮ್ಯೂಸಿಯಂ ಎಲ್ಲರ ಮನ ಗೆದ್ದಿತು. ಇದು ವೈವಿಧ್ಯಮಯವಾದ ವಸ್ತು ಸಂಗ್ರಹಾಲಯ. ಚಾರಿತ್ರಿಕ, ಜಾಗತಿಕ ವಿಸ್ತೃತವಾದ ವ್ಯವಸ್ಥಿತ ವಸ್ತು ಸಂಗ್ರಹಾಲಯವೆನ್ನುವುದು ಇದರ ಹೆಗ್ಗಳಿಕೆ. ಅದೇ ದಿನ  ಸಂಜೆ 5:00 ಗಂಟೆಗೆ  ಸಾಹಿತ್ಯ ಕಾರ್ಯಕ್ರಮ ಮೊದಲೇ ಆಯೋಜನೆಯಾಗಿತ್ತು.  ನಮ್ಮ ತಂಡದ ಕೆಲವರು ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡುವ ಅವಕಾಶ ಮತ್ತು ಪ್ರಶಸ್ತಿ ಪಡೆಯುವ ಅವಕಾಶ ಪಡೆದರು. ಕೆಲವರ ಪುಸ್ತಕಗಳು ಕೂಡ ಬಿಡುಗಡೆಯಾದವು. ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಬಳಗದ ಏಳು ಜನ ಮಹಿಳೆಯರು ನಿತ್ಯ ಕವನ ಹಚ್ಚೇವು ಕನ್ನಡದ ದೀಪ ಪ್ರಸ್ತುತಪಡಿಸಿದರು. ಭಾವಪೂರ್ಣವಾಗಿ ಮೂಡಿಬಂದ ಕವನಕ್ಕೆ ಸಭಿಕರಿಂದ ಪ್ರೋತ್ಸಾಹ ಸಿಕ್ಕಿತು.

ಸಾಹಿತ್ಯ ಕಾರ್ಯಕ್ರಮ ಐದರಂದು ಮುಗಿದ ಮೇಲೆ ಉಳಿದ ಮೂರು ದಿನ ಪ್ರವಾಸಕ್ಕೆ ಸೀಮಿತವಾಗಿತ್ತು. 


ಸಾಹಿತ್ಯ ಮತ್ತು ಪ್ರವಾಸ ಕಾರ್ಯಕ್ರಮ - Youtube Video
ಆರನೇ ತಾರೀಕಿಗೆ ನಮ್ಮ ಪ್ರಯಾಣ ಹೊರಟದ್ದು ನಗರ ಮಧ್ಯದಲ್ಲಿ ಇರುವ ಹುಸೇನ್ ಲೇಕ್ ಕಡೆಗೆ. ಮಧ್ಯದಲ್ಲಿ ಬುದ್ಧನ ಭವ್ಯವಾದ ಮೂರ್ತಿ ಇರುವ ವಿಶಾಲವಾದ ಸರೋವರದಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಇರುವುದರಿಂದ ಯಂತ್ರಿಕೃತ ದೋಣಿಯಲ್ಲಿ ಪ್ರಯಾಣ ಮಾಡಿದವು. ಬಿರು ಬಿಸಿಲು ಇದ್ದರೂ ಯಾರೂ ಧೃತಿಗೆಡಲಿಲ್ಲ. ಆಮೇಲೆ ಲುಂಬಿನಿ ಗಾರ್ಡನ್, ಚಾಮಹಲ್ ಅರಮನೆ, ಮತ್ತು ಚಾರ್ಮಿನಾರ್  ಸಂದರ್ಶಿಸಿ ಹೈದರಾಬಾದಿನ ಮುಖ್ಯ ಮುತ್ತುಗಳ ವ್ಯಾಪಾರ ಕೇಂದ್ರಗಳನ್ನು ನೋಡಿದೆವು. ಮಧ್ಯಾಹ್ನದ ಬಳಿಕ ನಮ್ಮ ಪ್ರಯಾಣ ಮುಂದುವರಿದದ್ದು ಹೈದರಾಬಾದ್ ನಿಂದ 30 ಕಿಲೋಮೀಟರ್ ದೂರದಲ್ಲಿರುವ "ದಿವ್ಯದರ್ಶನಂ ಭಕ್ತಿ ಸಂಕುಲ"ಕ್ಕೆ. 


ಸಾಹಿತ್ಯ ಮತ್ತು ಪ್ರವಾಸ ಕಾರ್ಯಕ್ರಮ
ಇದೊಂದು ಭಕ್ತಿ ಪ್ರಧಾನ ಕೇಂದ್ರ.ವಿಶಿಷ್ಟಾದ್ವೈತದ ಹರಿಕಾರರಾದ ರಾಮಾನುಜಾಚಾರ್ಯರ ಬೃಹತ್ ಗಾತ್ರದ ಮೂರ್ತಿ ಇಲ್ಲಿನ ಆಕರ್ಷಣೆ.   ಈ ವಿಗ್ರಹವನ್ನು ದ ಸ್ಟ್ಯಾಚು ಆಫ್ ಇಕ್ವಾಲಿಟಿ  ಎಂದು ಕರೆಯುತ್ತಾರೆ. ಪದ್ಮಾಸನದಲ್ಲಿ ಪೀಠದ ಮೇಲೆ ಕುಳಿತ ರಾಮಾನುಜಾಚಾರ್ಯರ ವಿಗ್ರಹದ ಎತ್ತರ 108 ಅಡಿಗಳು. ನೆಲದಿಂದ ವಿಗ್ರಹದ ತುದಿಯವರೆಗಿನ ಎತ್ತರ 216 ಅಡಿ. ಸಮಾನತಾ ಮೂರ್ತಿಯ  ಎದುರುಗಡೆಯಲ್ಲಿ ಬಣ್ಣದ ದೀಪಗಳನ್ನು ಬೆಳಗಿಸುವ ದೃಶ್ಯ ವಿಸ್ಮಯಕಾರಿ. ನೀರಿನ ಕಾರಂಜಿ, ಬಣ್ಣದ ಬೆಳಕುಗಳ ಸಂಯೋಜನೆ ಒಂದು ದಿವ್ಯ ಅಚ್ಚರಿಯನ್ನು ಮೂಡಿಸುತ್ತದೆ. ಇಲ್ಲಿನ ಸೌಂದರ್ಯವನ್ನು ಪೂರ್ಣವಾಗಿ ಆಸ್ವಾದಿಸಬೇಕಾದರೆ ನಾಲ್ಕೈದು ಗಂಟೆಗಳಷ್ಟು ಸಮಯವನ್ನು ಮೀಸಲಾಗಿಸಿ ಹೋಗುವುದೇ ಲೇಸು. ಇಲ್ಲಿಯ ಪ್ರವೇಶ ಶುಲ್ಕ ವಯಸ್ಕರಿಗೆ 200 ರೂ ಮತ್ತು ಮಕ್ಕಳಿಗೆ 125. ಬುಧವಾರ ಈ ತಾಣಕ್ಕೆ ರಜಾ ದಿನ. ಉಳಿದ ದಿನಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ ಎಂಟು ಗಂಟೆವರೆಗೆ ಈ ಪ್ರೇಕ್ಷಣೀಯ ಸ್ಥಳ ತೆರೆದಿರುತ್ತದೆ. 


ಸಾಹಿತ್ಯ ಮತ್ತು ಪ್ರವಾಸ ಕಾರ್ಯಕ್ರಮ
ರಾಮಾನುಜಾಚಾರ್ಯರ ಮೂರ್ತಿ ಇರುವ ದಿಬ್ಬದ ನಾಲ್ಕು ಸುತ್ತಿನಲ್ಲಿ ಖ್ಯಾತಿವೆತ್ತ  108   ದೇವಾಲಯಗಳ ಕಿರು ಗುಡಿಗಳು  ಸುಂದರವಾಗಿ ಮೂಡಿಬಂದಿವೆ. ದೇಗುಲಗಳ ಬೀದಿಗಳಲ್ಲಿ ನಡೆಯುವುದೇ ಒಂದು ಸಾರ್ಥಕ್ಯ ಭಾವವನ್ನು ಮೂಡಿಸುತ್ತವೆ.  

ಹೈದರಾಬಾದಿನ ಇನ್ನೊಂದು ಲೋಕವಿಖ್ಯಾತ ಪ್ರವಾಸಿ ತಾಣ ರಾಮೋಜಿ ಫೀಲಿಂ ಸಿಟಿ. ನಗರದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದ ಸಾವಿರದ ಏಳುನೂರು ಚದರ ಕಿಲೋಮೀಟರ್ ವಿಸ್ತೀರ್ಣ ಇರುವ ವಿಶಾಲವಾದ ಪ್ರದೇಶದಲ್ಲಿ ಈ ಮಾಯಾಲೋಕ ಬೆಳೆದು ನಿಂತಿದೆ.  ಈ ತಾಣ ಸಿನಿಮಾ ಚಿತ್ರೀಕರಣದ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ.  ಹಳ್ಳಿಯಿಂದ ಹಿಡಿದು ಮಹಾನಗರದ ಯಾವುದೇ ಸನ್ನಿವೇಶದ ಚಿತ್ರೀಕರಣಕ್ಕೆ ಇಲ್ಲಿ ಕೃತಕವಾಗಿ ತಯಾರಿಸಿದ ಆದರೆ ನೈಜವಾಗಿ ತೋರುವ ತಾಣಗಳಿವೆ. ಎಲ್ಲಾ ತರದ ಬೀದಿಗಳು ಕಟ್ಟಡಗಳು ಸಂತೆಗಳು, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಎಲ್ಲವೂ ಇಲ್ಲಿ ನಿರ್ಮಿಸಿದ್ದಾರೆ. ಖ್ಯಾತ ಸಿನಿಮಾಗಳ ಕೆಲವು ಸೆಟ್ಟಿಂಗಗಳು  ಪ್ರೇಕ್ಷಕರಿಗೆ ನೋಡಲು ಇನ್ನೂ ಉಳಿದುಕೊಂಡಿವೆ. ಬಾಹುಬಲಿ ಚಂದ್ರಮುಖಿ ಉಂಟಾದ ಯಶಸ್ವಿ ಸಿನಿಮಾಗಳ ಸೆಟ್ಟಿಂಗ್ ಗಳು ಇನ್ನು ನೈಜವಾಗಿ ಉಳಿದುಕೊಂಡಿದೆ.ಖ್ಯಾತನಾಮ ಸಿನಿಮಾಗಳ ಸೆಟ್ಟಿಂಗ್ ಗಳು ಇನ್ನು ಅಂದಗೆಡದೆ ಉಳಿದಿರುವುದೇ ಅಚ್ಚರಿಯ ವಿಚಾರವಾಗಿದೆ. ಅದೇ ರೀತಿ ಹಲವು ವರ್ಷಗಳ ಹಿಂದೆ ಚಿತ್ರೀಕರಣಗೊಂಡ ರಾಮಾಯಣ, ಮಹಾಭಾರತದ ಪೌರಾಣಿಕ ಪರಿಕರಗಳು ಇನ್ನೂ ತಮ್ಮ ನೈಜತೆಯನ್ನು ಕಾದುಕೊಂಡಿವೆ. ಫಿಲಂ ಸಿಟಿಯ ದ್ವಾರದವರೆಗೆ ಮಾತ್ರ ಹೊರಗಿನ ವಾಹನಗಳಿಗೆ ಪ್ರವೇಶ. ಆಮೇಲೆ ಸುಸಜ್ಜಿತವಾದ ಬಸುಗಳಲ್ಲಿ ಮುಖ್ಯವಾದ ಎಲ್ಲಾ ಆಂತರಿಕ ತಾಣಗಳನ್ನು ಫಿಲಂ ಸಿಟಿಯ ಸಿಬ್ಬಂದಿ ತೋರಿಸುತ್ತಾರೆ. ಇಲ್ಲಿ ಪ್ರವೇಶ ಧನ ರೂ 1600. ಅಲ್ಲಿಂದ ವಾಪಸ್ ಬರುವಾಗ ನಗರ ಮಧ್ಯದಲ್ಲಿ  ಗುಡ್ಡದ ತುದಿಯಲ್ಲಿ ಎದ್ದು ನಿಂತಿರುವ ಬಿರ್ಲಾ ಟೆಂಪಲ್  ನೋಡುವ ಭಾಗ್ಯ ಸಿಕ್ಕಿತು.

ನಮ್ಮ ತಂಡದ ಸಾಹಿತಿಗಳಿಗೆಲ್ಲ ಊಟ ಉಪಚಾರ ನೀಡಿದ್ದು ಕಾಮತ್ ಹೋಟೆಲ್. ಉಡುಪಿಯ ವಿಶೇಷ ತಿಂಡಿ, ಊಟ ಪರ ಊರಿನಲ್ಲಿ ಆಹಾರದ ಸಮಸ್ಯೆಯನ್ನು ನಿವಾರಿಸಿತು.

ನಮ್ಮ ಪ್ರವಾಸದ ಕೊನೆಯ ದಿನ ಪ್ರೇಕ್ಷಣೆಗೆ ದಕ್ಕಿದ್ದು ಸ್ನೋ ಓಲ್ಡ್. ಒಂದು ವಿಸ್ಮಯದ ಕೃತಕ ಹಿಮ ಪ್ರದೇಶ. ಪ್ರೇಕ್ಷಕರು ಹಿಮಾಲಯವನ್ನು ತಲುಪಿದಂತೆ ಹಿಮದಲ್ಲಿ ಓಡಾಡಿ ತಮ್ಮ ಖುಷಿಯಲ್ಲಿ ಮೈ ಮರೆಯುತ್ತಾರೆ.
ಆಯೋಜಕರು ಮಧ್ಯಾಹ್ನದ ನಂತರ ಹೈದರಾಬಾದಿನ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿಗೆ ಅನುವು ಮಾಡಿಕೊಟ್ಟಿದ್ದಾರೆ. 

ಹೀಗೆ ನಡೆದ ಸಾಹಿತ್ಯ ಮತ್ತು ಪ್ರವಾಸ ಕಾರ್ಯಕ್ರಮ ಭಾಗವಹಿಸಿದವರೆಲ್ಲರ ಅವಿಸ್ಮರಣೀಯ ಅನುಭವವಾಗಿ ಉಳಿಯಿತು. ಕೆಲವು ಮಾತೆಯರು ಪ್ರೀತಿಯಿಂದ ಸಿಹಿ ಮತ್ತು ಖಾರದ  ತಿಂಡಿ ತಿನಸುಗಳನ್ನು ಬಳಗದ ಸದಸ್ಯರೆಲ್ಲರಿಗೂ ಕೊಡುವ ಮೂಲಕ ಪ್ರವಾಸದ ಸಂಭ್ರಮವನ್ನು ಹೆಚ್ಚಿಸಿದ್ದಾರೆ




ಪ್ರವಾಸ ಕಥನ 

ಡಾ ಕೊಳಚಪ್ಪೆ ಗೋವಿಂದ ಭಟ್ 
ಮಂಗಳೂರು
ಸಾಹಿತ್ಯ ಮತ್ತು ಪ್ರವಾಸ ಕಾರ್ಯಕ್ರಮ
ಸಾಹಿತ್ಯ ಮತ್ತು ಪ್ರವಾಸ ಕಾರ್ಯಕ್ರಮ
ಸಾಹಿತ್ಯ ಮತ್ತು ಪ್ರವಾಸ ಕಾರ್ಯಕ್ರಮ

Comments (0)




Be the first to comment using the form below.