(JavaScript required to view this email address)
Mangalore

News & Articles

ಪರಿಚಿತ ಸಂವೇದನೆಯ ಭಾವ ಪ್ರಪಂಚ

'ಬುದ್ಧಿ- ಭಾವಗಳ ವಿದ್ಯುದಾಲಿಂಗನವೇ ಕಾವ್ಯ' ಎಂಬ ನಮ್ಮ ಹಿರಿಯರ ಕಾವ್ಯ ಮೀಮಾಂಸೆಯನ್ನು ಸ್ಮರಿಸಿಕೊಳ್ಳುತ್ತ ಇಂದಿನ ಕಾವ್ಯ ಜಗತ್ತನ್ನು ಓದಲು ತೊಡಗಿದರೆ ಹಲವು ತೊಡಕುಗಳು ನಮಗೆ ಎದುರಾಗುತ್ತವೆ. ಹಾಗಾಗಿ ಇಂದಿನ ಕಾವ್ಯಲೋಕ ಯಾವುದನ್ನು ಹೇಗೆ ಯಾವ ಮಾತುಗಳಲ್ಲಿ, ಯಾವ ಹೇಳಿಕೆಗಳಲ್ಲಿ, ಯಾವ ಗಪದ್ಯಗಳಲ್ಲಿ, ಯಾವ ಲಯಬದ್ಧ ಸಾಲುಗಳಲ್ಲಿ ತಮ್ಮ ವಿಚಾರವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ ಎಂಬುದನ್ನಷ್ಟೇ ನಾವು ಅವಲೋಕಿಸಿದರೆ ಸಹೃದಯರು ಅಷ್ಟರಮಟ್ಟಿಗೆ ಸುರಕ್ಷಿತರಾಗಿರುತ್ತೇವೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವ ಹಲವಾರು ಬರಹಗಾರರನ್ನು ವೀಕ್ಷಿಸಿದಾಗ ನಾನು ಈ ಆತ್ಯಂತಿಕ ಮನಸ್ಥಿತಿಗೆ ತಲುಪಿದ್ದೇನೆ. ಹಿಂದಿನ ವ್ಯಾಕರಣ ಪ್ರಾಸಗಳ ಆಭರಣವನ್ನು ಹಟಾತ್ತಾಗಿ ಕಳಚಿಟ್ಟು, ಸರಳ ಮತ್ತು ಸಹಜವಾಗಿ ಒಡಮೂಡುವ ಕವಿತೆಗಳಲ್ಲೇ ಹೆಚ್ಚಿನ ಅರ್ಥವಂತಿಕೆಯನ್ನು ನಾವಿಂದು ಗಮನಿಸುತ್ತಿದ್ದೇವೆ. ಕವಿತೆಯೊಂದು ಸದೃಢ ರೂಪಕವಾಗಿಯೇ ಹೊರಬರಬೇಕು ಎಂದು ನನ್ನಂಥವರು ಹಂಬಲಿಸುತ್ತ ಕೂತರೆ ಏನು ಪ್ರಯೋಜನ? ಭಾವ ಮತ್ತು ಅರ್ಥಗಳು ಸಂಯೋಗಗೊAಡು ಹೊರಹೊಮ್ಮುವ ಅರ್ಥ ವಿಸ್ತಾರದ ಕವಿತೆಗಳನ್ನು ಆಸ್ವಾದಿಸಿದ ನಮ್ಮ ರುಚಿಗಳಿಗೆ ಸರೋಜಾ ಬರೆದಂತಹ ಶೈಲಿಯ ರಚನೆಗಳು ಒಂದು ರೀತಿಯಲ್ಲಿ ಇಂದಿನ ಕಾವ್ಯ ಲೋಕವನ್ನು ವಿನಾಕಾರಣ ಅನಾವರಣಗೊಳಿಸಿದಂತಿವೆ. 'ದುಡಿತವೇ ತನ್ನ ಜೀವನ ಸಾರ' ಎಂದು ಹೇಳಿಕೊಳ್ಳುವ ಈ ಉಪಾಧ್ಯಾಯಿನಿ ಕವಿಯಿತ್ರಿ ಸದಾ ಕಿಟಕಿಯಲ್ಲಿ ಚಂದ್ರಮನನ್ನು ಅರಸುವವರು. ನಾನು ಕವಿತೆಯ ಬರವಣಿಗೆಯಿಂದಲೇ ಈ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದರೂ, ಒಂದೇ ಒಂದು ಕವನ ಸಂಕಲನವನ್ನು ಹೊರತಂದು ನಂತರ ನನ್ನ ಮಾಧ್ಯಮವನ್ನು ಕಥೆಗಳೆಡೆಗೆ ತಿರುಗಿಸಿಕೊಂಡಿದ್ದರೂ ಈಗಲೂ ನಾನು ಕವಿತೆಗಳ ಕುರಿತಾಗಿರುವ ಅಖಂಡ ಮೋಹವನ್ನು ತ್ಯಜಿಸಿಲ್ಲ, ಹಾಗಾಗಿ ನಾನು ಹಲವರಿಗೆ ಮುನ್ನುಡಿ ಬೆನ್ನುಡಿಗಳನ್ನು ಬರೆದು ಬೆನ್ನು ತಟ್ಟುತ್ತ ಬಂದಿದ್ದೇನೆ. ಅಂಥ ಸಂದರ್ಭದಲ್ಲೇ ನನಗೆ ಆತ್ಮೀಯರಾದ ಸರೋಜಾ ಮೇಟಿಯವರು ದಿಢೀರ್ ಆಗಿ ಅರ್ಜಂಟಿನಲ್ಲಿ ತಮ್ಮ ೩೧ ರಚನೆಗಳನ್ನು ಕಳುಹಿಸಿ ಅನಿಸಿಕೆ ಬರೆಯಲು ಕೇಳಿಕೊಂಡರು. ಇಲ್ಲವೆನ್ನಲಾಗದೇ ಒಪ್ಪಿಕೊಂಡೆ. ಅದಕ್ಕೆ ಹಿನ್ನೆಲೆಯ ಬಹಮುಖ್ಯ ಕಾರಣವೆಂದರೆ, ಈ ಸಂಕಲನದ ಕವಿ ಸರೋಜಾ ಮೇಟಿಯವರು ಸಂಶೋಧನೆಯನ್ನು ಕೈಗೊಂಡು ಹಿಂದಿ ಭಾಷೆಯಲ್ಲಿ ಪಿಎಚ್ಡಿ ಅಧ್ಯಯನ ಮಾಡಿರುವವರು. ಹಲವು ಸಂಘಟನಾತ್ಮಕ ನೆಲೆಯಲ್ಲಿ ತೊಡಗಿಕೊಂಡ ಉತ್ಸಾಹೀ ಲೇಖಕಿ. ಹಿಂದಿಯಲ್ಲೂ ಕವಿತೆಗಳನ್ನು ರಚಿಸಿ ಪ್ರಶಸ್ತಿಗಳನ್ನು ಹೆಗಲಿಗೇರಿಸಿಕೊಂಡವರು. ಬಲುದೂರ ಹಾರುವ ಕನಸುಕಾಣುವ ಈ ಕವಿಯ ಮನಸ್ಸು ಹಕ್ಕಿಯಂತೆ ಸದಾ ಲವಲವಿಕೆಯುಳ್ಳದ್ದು.
ಮೊದಲ ಓದು, ಅನಿಸಿಕೆ-ಅಭಿಪ್ರಾಯ, ಮುನ್ನುಡಿ, ಮೊದಲ ಮಾತು ಏನೇ ಕರೆದುಕೊಂಡರೂ ಇಂಥ ಬರವಣಿಗೆಗಳು ಒಂದು ರೀತಿಯ ಮುಜುಗರ ತುಂಬಿದ ಅತಿಥ್ಯದ ಬರವಣಿಗೆಯಂತೆ ಸದಾ ಸಂದಿಗ್ಧ, ಕವಿತೆಯ ಸತ್ಯ ಹೇಳಿದರೆಲ್ಲಿ ಕವಿಗಳಿಗೆ ನೋವಾಗುತ್ತದೋ ಎಂಬ ಕುರಿತೇ ಯೋಚಿಸುತ್ತ ಅಲ್ಲಲ್ಲಿ ಕಾವ್ಯದ ಸಾಲುಗಳನ್ನು ಹುಡುಕುವ ಹಪಹಪಿಗೆ ಬೀಳಬೇಕಾಗುತ್ತದೆ. ಆದರೆ ಸರೋಜಾ ಅವರ ಹಲವಾರು ರಚನೆಗಳನ್ನು ಓದುತ್ತಾ ಹೋದಂತೆ ಇಲ್ಲಿಯ 'ರೊಟ್ಟಿ' ರಚನೆ ನನ್ನ ಗಮನವನ್ನು ಸೆಳೆಯಿತು. ಇದು ಉತ್ತರಕರ್ನಾಟಕ ಭಾಗದ ನಿತ್ಯದ ಆಹಾರವಾದ ರೊಟ್ಟಿ ತಯಾರಿಕೆಯ ಸ್ಪಂದನವನ್ನಿರಿಸಿಕೊAಡು ಧ್ವನಿಪೂರ್ಣವಾಗಿ ಮೂಡಿ ಬಂದಿದ್ದು, ಒಂದು ಹೆಣ್ಣಿನ ಸಂಕಷ್ಟಗಳಿಗೆ ಪ್ರತಿಮಾ ರೂಪಕವಾಗಿ ಕಟ್ಟಿಕೊಂಡಿದೆ ಅನ್ನಿಸಿತು. ಸ್ವಲ್ಪ ಸಂಯಮದಿAದ ಅಲ್ಲಲ್ಲಿ ಕುಸುರಿ ಕೆಲಸ ಕೈಗೊಂಡಿದ್ದರೆ, ಒಂದೊಳ್ಳೆಯ ಕಾವ್ಯ ಸೆಲೆ ರೊಟ್ಟಿಯಿಂದ ಉದ್ಭವಿಸುತ್ತಿತ್ತು ಎಂಬುದು ಮಾತ್ರ ಅತಿಶಯೋಕ್ತಿಯಲ್ಲ. ಮತ್ತೆ ಕೆಲವು ಕವಿತೆಗಳು ಹೇಳಿಕೆಯ ಮಟ್ಟದಲ್ಲೇ ಉಳಿದು ಕವಿತೆಯಾಗಿ ಪಡಿಮೂಡಲು ಯತ್ನಿಸಬೇಕಾಗಿದೆ.  ಅಲ್ಲಲ್ಲಿ ಜಾತಿ ಮತಗಳ ಕಳೆ/ ಕೀಳಬೇಕು ಬೇರು ಸಮೇತ/ ಎಂಬ ಸಾಲನ್ನು ಹೊತ್ತ 'ನೀರಾವಿ' ಪದ್ಯ ಈ ತಾರತಮ್ಯಗಳ ಸಮಾಜಕ್ಕೆ ಕನ್ನಡಿಹಿಡಿದಂತೆ ಖುಷಿಕೊಡುತ್ತದೆ. ಜಾತಿ ಧರ್ಮದ ಹೆಸರಿನಲ್ಲಿ ಹಚ್ಚುವ ಕಿಚ್ಚಿನ ಕುರಿತು ಇವರಿಗೆ 'ಆತಂಕ' ವಿದ್ದದ್ದು ಇವರ ಕಾವ್ಯ ದಾರಿಯ ನೆಲೆಯಲ್ಲಿ ಆಶಾದಾಯಕವಾದದ್ದು. ಆಧುನಿಕ ವಚನಗಳಂತಿರುವ ಇಲ್ಲಿಯ ಇನ್ನುಳಿದ ಕೆಲವು ರಚನೆಗಳು ನೀತಿಪಾಠವನ್ನು ಹೇಳುವಂತಿವೆ. ಇಂದಿನ ಪ್ರಶಸ್ತಿ-ಪುರಸ್ಕಾರಗಳು ಬರಿಯ ವ್ಯಾವಹಾರಿಕವಾದ ವಿದ್ಯಮಾನಗಳು ಇವರಿಗೆ ಆತಂಕ ತಂದಿದೆ ಎಂಬ ಆರೋಗ್ಯಕರ ನಿಲುವನು ನಾವು ಗಮನಿಸಬೇಕು. 'ನೀ ಅರಿ ಇದನು' ಎನ್ನುತ್ತ ಹಲವು ತಾತ್ವಿಕ ಚಿಂತನೆಗಳನ್ನು ಸರೋಜಾ ತಮ್ಮ ರಚನೆಗಳಲ್ಲಿ ತರಲು ಯತ್ನಿಸಿದ್ದಾರೆ. ಅಹಂಕಾರವು ಮನುಷ್ಯನಿಗೆ ಸರ್ಪದ ವಿಷವಿದ್ದಂತೆ ಎನ್ನುವ ಅವರ ನಿಲುವು ಒಂದರ್ಥದಲ್ಲಿ ನಿಜವಾದುದು. ಬಸವಣ್ಣನನ್ನು 'ಕಾಯಕ ಯೋಗಿ' ಎಂದು ಕರೆಯುತ್ತ ಅವರು ನೀಡಿದ ಅಕ್ಷರ ಕರೆಯನ್ನಿಲ್ಲಿ ಕವಿ ಶ್ಲಾಘಿಸುತ್ತಾರೆ. ಈ ಸಂಕಟದ ಜಗತ್ತಿನಲ್ಲಿ ಎಲ್ಲೆಲ್ಲೂ 'ನಗೆಯ ಹಬ್ಬ' ಮುನ್ನೆಲೆಗೆ ಬರಲಿ ಎಂಬ ಔದಾರ್ಯದ ಆಶಯ ಇವರದು. ಸರ್ಕಾರದ ಉಚಿತ ಭಾಗ್ಯಗಳ ಕುರಿತು ಸರೋಜಾ ಅವರಿಗೆ ಅಸಮಾಧಾನವಿದ್ದದ್ದು ಅವರ ಇಲ್ಲಿಯ 'ಪೊರಕೆ' ರಚನೆಯಿಂದ ಕಂಡುಬರುತ್ತದೆ. ಇಡೀ ಭಾರತೀಯ ಸಮಾಜದಲ್ಲಿರುವ ಸಾಮಾಜಿಕ, ಆರ್ಥಿಕ ಅಸಮಾನತೆಯ ಕುರಿತು ಗಂಭೀರವಾಗಿ ಅಧ್ಯಯನ ನಡೆಸಿದ ಮುಂದೊAದು ದಿನ ಈ ಭಾವ ಇವರಿಂದ ಮರೆಯಾದೀತು ಎಂಬ ಆಶಾಭಾವ ನನ್ನದು. ನಮ್ಮ ಶತಮಾನದ ಬಹುದೊಡ್ಡ ತಲ್ಲಣಗಳಲ್ಲಿ ಒಂದಾದ ಕೊರೋನಾ ಕರಿನೆರಳು ಹೇಗೆ ಹಿರಿಕಿರಿಯರೆನ್ನದೇ ಪ್ರಾಣ ಹಿಂಡಿತು ಎಂಬ ಕುರಿತು ಇವರಿಗೆ ವಿಷಾದವಿದೆ. 'ಭೀತಿ' ಮತ್ತು 'ಇದು ತರವೆ' ಯಂತಹ ರಚನೆಗಳು ಕೂಡ ಕೊರೋನಾ ದುಗುಡವನ್ನು ಸರಳವಾಗಿ ಹಿಡಿದಿಟ್ಟಿವೆ. 'ಹೇಡಿ ನೀನಾಗಬೇಡ' ರಚನೆಯು /ನಡೆವ ದಾರಿಯಲಿ ಅಂಕೆ ಯಾಕೆ?/ ಅಂಕುಡೊAಕುಗಳು ಸಹಜ ತಾನೇ/ ಎಂದು ಸಿದ್ದ ಮಾದರಿಯ ಬದುಕನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿದ್ದದ್ದು ಇವರ ಸಂಪ್ರದಾಯದ ಮನಸ್ಥಿತಿಗೆ ಸಾಕ್ಷಿ. ಮಳೆಯಿಂದ ಭೂಮಿ ತಂಪಾಗುವ ಮತ್ತು ಆನಂತರದ ರಮ್ಯ ನೋಟವು 'ಬಯಕೆಯ ನೋಟ' ರಚನೆಯಲ್ಲಿ ಸಾಮಾನ್ಯ ಹೇಳಿಕೆಗಳಂತೆ ಪ್ರಸ್ತಾಪವಾಗಿದೆ. ಆದರೆ 'ಅವನಿ' ಯಲ್ಲಿ ತನ್ನ ಮಕ್ಕಳ ಉಳಿವಿಗೆ ಲಾವಾ ವನ್ನೇ ನುಂಗಿದ ಭೂತಾಯಿಯ ಅಪಾರ ಸಹನೆಯು ಪರಿಸರ ಕಾಳಜಿಯ ದೃಷ್ಟಿಯಿಂದ ಪ್ರಸ್ತುತವಾಗಿದೆ. ಶ್ರಾವಣದ ಜಿಟಿಜಿಟಿ ಮಳೆಯ ಕುರಿತೂ ಇವರ ಕೆಲವು ಲಹರಿಗಳು ಇಲ್ಲಿವೆ. 'ಕರುನಾಡು' ರಚನೆಯಲ್ಲಿ /ಸತ್ವ ಪರೀಕ್ಷೆಗೆ ತಾವು ಸದಾ ಸಿದ್ದ/ ಎಂಬ ಕನ್ನಡಿಗರ ಅಸ್ಮಿತೆಯನ್ನು ಓದುಗರಿಗೆ ಪರಿಚಯಿಸುತ್ತದೆ, ಪರಿಸರ ಕಳಕಳಿಯ ದೃಷ್ಟಿಯಿಂದ /ಕೊಡಲಿ ಪೆಟ್ಟು ತಿಂದು/ ಸಿಹಿ ಹಣ್ಣು ನೀಡುವ ಪ್ರಕೃತಿ/ ಎಂಬ ಸಾಲುಗಳಿರುವ 'ನಿವೇದನೆ' ಗಿಡಮರಗಳ ಸಹನೆಯನ್ನು ಹೇಳುತ್ತಿದೆ. ಮತ್ತೆ ಮತ್ತೆ ತಾಯ ಮಡಿಲನ್ನು ಸೇರುವ ತವಕವನ್ನು ಇಲ್ಲಿಯ 'ಬೀಜ' ರಚನೆ ವ್ಯಕ್ತಪಡಿಸುತ್ತದೆ. ಜರಿದು ತನ್ನ ಆತ್ಮಬಲ ಕುಗ್ಗಿಸ ಹೊರಟವರೇ/ ಮಣ್ಣು ಮುಕ್ಕಿದರು/ ಎಂಬ ಸಕಾರಾತ್ಮಕ ಯೋಚನೆಯೊಂದಿಗೆ ಇವರ ಬರವಣಿಗೆಯ ಜಗತ್ತು ಉಸಿರಾಡುತ್ತಿದೆ. ನಿರ್ಭಯ ನಿಸ್ವಾರ್ಥದ ಅಧಿದೆವತೆಯಾದ 'ಅಕ್ಕ' ನ ಕುರಿತಾದ ರಚನೆ ಅವಳ ಜೀವನ ಚರಿತ್ರೆಯ ತುಂಡಿನAತಿದೆ. ಯುದ್ಧ ಮಾಡಿ ದೇಸ ಕಾಯುವ ಸೈನಿಕರ ನಿಸ್ಪçಹತೆಯ ಕುರಿತು ಇವರಿಗೆ ಅಂತಃಕರಣವಿದೆ. 'ಇರಲಿ ಪ್ರೀತಿ' ಎಂಬ ರಚನೆಯಲ್ಲಿ ಎಲ್ಲರೂ /ಬಿಡಬೇಕು ಹಠ ಚಳುವಳಿ/ ಸೇವೆ ತ್ಯಾಗವೇ ನಮಗೆ ಬಳುವಳಿ/ ಅನ್ನುವ ಈ ಕವಿ ಸಿದ್ಧ ಮಾದರಿಯ ಸಾಮಾಜಿಕ ನಿಲುವನ್ನು ಒಪ್ಪಿ ನೆಮ್ಮದಿಯಾಗಿರುವವರು. 'ಬನ್ನಿ, ಬನ್ನಿ ಮುಡಿಯೋಣ' ರಚನೆ ಪ್ರಾಸಬದ್ಧವೂ ಲಯಬದ್ದವೂ ಆಗಿ ಮೂಡಿದ್ದು ಮಹಿಳಾ ಮಂಡಳಗಳಲ್ಲಿ ಹಾಡಲು ತುಂಬ ಸೊಗಸಾಗಿದೆ.  ಕವಿಯ ಅಂತರAಗದಲ್ಲಿ ಅಡಗಿ ಕೂತಿರುವ ಆತಂಕ ನೋವು ಸಂಕಟ ದ್ವಂದ್ವ ದಿಗಿಲುಗಳೆಲ್ಲ ಒಂದು ರೀತಿಯ ಭಾವದೀಪ್ತಿಯ ಪ್ರಭೆಯಲ್ಲಿಯೇ ರೂಪತಾಳುತ್ತಾ ಕೊನೆಯಲ್ಲಿ ಅವು ಕೇವಲ ಲಹರಿ ರೂಪದಲ್ಲಿ ಹೊರಚೆಲ್ಲಿದ್ದು ಇಲ್ಲಿ ಕಾಣುತ್ತದೆ. ಸರೋಜಾ ಬದುಕನ್ನು ತೀವ್ರವಾಗಿ ಅನುಭವಿಸುತ್ತಿರುವ ಕವಿ. ಅನುಭವದ ಅನಂತ ಮುಖಗಳನ್ನು ಹಿಡಿಯುವ ಯತ್ನ ಇಲ್ಲಿ ಕಾಣುತ್ತದೆ. ಕಾವ್ಯ ಈ ಕವಿಗೆ ಪ್ರತಿಕ್ಷಣದ ಧೇನಿಕೆಯಲ್ಲ. ಆ ಬೆಳಕಿನತ್ತ ಚಲಿಸುತ್ತ ಜೀವನ ಸಾರ್ಥಕ ಮಾಡಿಕೊಳ್ಳುವ ನಿಶ್ಚಲ ಮನಸ್ಸು ಇಲ್ಲಿದೆ. ಶಿಲೆ ಸೀಳಲು ಎಂಥ ಕಠಿಣ ತಪಸ್ಸು ಬೇಕು ಮತ್ತು ಅದರಲ್ಲಿ ಕಲೆಯನ್ನು ಅರಳಿಸಲು ಎಂಥ ಧ್ಯಾನಸ್ಥ ಮನಸ್ಥಿತಿಯ ಅಗತ್ಯವಿದೆ ಎಂಬುದನ್ನು ಸರೋಜಾ ಮೈಗೂಡಿಸಿಕೊಂಡರೆ, ಅವರ ಕಾವ್ಯ ಜೀವನಕ್ಕೆ ಇನ್ನಷ್ಟು ಹೊಳಪು ತುಂಬಬಲ್ಲದು. ಆದರೆ ಅವರ ದೈನಂದಿನ ಕೆಲಸಕಾರ್ಯಗಳ ನಡುವೆ ಹರಡಿಹೋಗಿರುವ ಭಾವ ಪ್ರಪಂಚವನ್ನು ಸರೋಜಾ ಹೆಕ್ಕಿ ನಮ್ಮ ಮುಂದಿರಿಸಿದ್ದಾರೆ. ಇವರಿಗೆ ಬದುಕಿನ ಬಗ್ಗೆ ಇರುವ ಪ್ರೀತಿಯೇ ಒಟ್ಟಾರೆ ಲಹರಿಯ ಮನೋಧರ್ಮವನ್ನು ರೂಪಿಸಿದೆ. ಕವಿಗೆ ಈ ಬದುಕಿನ ತುಂಬ ಸಂಗತಿಗಳು ಜೊಳ್ಳಾಗಿ ಕಾಣಿಸುತ್ತವೆ. ಬದುಕಿನ ಹಾದಿಯಲ್ಲಿ ಗಟ್ಟಿಕಾಳು ಅಪರೂಪವಾಗಿ ದೊರೆಯುವಂಥದ್ದು. ಅದರ ಒಂದು ಶಿಸ್ತುಬದ್ಧ ಹುಡುಕಾಟವೇ ಎಲ್ಲರ ಕಾವ್ಯದ ನೆಲೆ ಕೂಡ ಆಗಿದೆ. ಹಾಗಾಗಿ ಎಲ್ಲಾ ಕವಿತೆಗಳು ಹುಡುಕುವದು ವಯಕ್ತಿಕ ನೆಲೆಯಲ್ಲಿ ಅಭಿವ್ಯಕ್ತಿಗೊಳ್ಳುವ ಮಾನವೀಯ ಮೌಲ್ಯಗಳನ್ನೇ, ಮನಸ್ಸಿನ ಮೇಲೆ ಅಚ್ಚೊತ್ತಿದ ತಲ್ಲಣಗಳನ್ನು ಆತ್ಮಗತಗೊಳಿಸಿಕೊಳ್ಳುವ ಒತ್ತಡ ಇಂದು ಎಲ್ಲ ಕವಿಗಳಲ್ಲೂ ಇರುತ್ತದೆ. ಕವಿತೆ ಅಂಥವರಿಗೆ ಅನಿವಾರ್ಯವಾಗುತ್ತದೆ. ಕವಿತೆ ಬದುಕಿನ ಅಗತ್ಯವೂ ಆಗುತ್ತದೆ. ಕವಿತೆಯೊಂದು ಸಮಾಜದ ಪ್ರತಿ ಮನಸ್ಸುಗಳನ್ನು ಸಮುದಾಯದ ಚಿಂತನೆಗಳನ್ನು ಒಡಲಲ್ಲಿಟ್ಟುಕೊಂಡೇ ಮಿಡಿಯುತ್ತದೆ, ಈ ನಿಟ್ಟಿನಲ್ಲಿ ಹೊರೇಸ್ ಅನ್ನೋ ಇಂಗ್ಲೀಷ ಲೇಖಕ ಒಂದೆಡೆ ಹೇಳಿದ ನೆನಪನ್ನು ಕೆದಕುವದಾದರೆ, 'ಕವಿಯು ಅಕ್ವೇರಿಯಂ ನಲ್ಲಿ ಬದುಕಿದರೆ, ಸಮುದಾಯಗಳು ಸಾಗರದ ಸಂಗಡ ಗುದ್ದಾಡುತ್ತಾ ಇರುತ್ತವೆ' ಅದೇ ಅಕವೇರಿಯಂ ಕುರಿತು ಹಿರಿಯ ಕವಿ ಎಚ್.ಎಸ್ ಶಿವಪ್ರಕಾಶ್ 'ಕಾವ್ಯದ ಪ್ರಯೋಜನ ಕವಿಗೇ ಬೇರೆ, ಓದುಗನಿಗೇ ಬೇರೆ, ಮತ್ತು ಸಮುದಾಯಕ್ಕೇ ಬೇರೆ, ಹಾಗಾಗಿ ಇಂದಿನ ಕವಿ ಅಕ್ವೇರಿಯಂ ನಲ್ಲಿ ಕೂತರೆ ಪ್ರಯೋಜನ ಇಲ್ಲ, ಕವಿ ಸಮುದಾಯದಲ್ಲಿ ಒಂದಾಗಬೇಕು' ಎನ್ನುತ್ತಾರೆ.
ಸಮುದಾಯ ಪರ ಚಿಂತನೆಗೆ ಪುಷ್ಟಿ ಕೊಡುವ ಹಾಗೆ, ಕವಿ ಸುಬ್ಬು ಹೊಲೆಯಾರ್ ಒಂದು ಭಾಷಣದಲ್ಲಿ ಹೇಳಿದ್ದು ನನಗೆ ನೆನಪಿದೆ. ಅದೇನೆಂದರೆ 'ಕಾವ್ಯ ಮತ್ತು ಕಲೆ ಅನ್ನೋದು ಎಲ್ಲರ ಮನೆಯ ಮೇಲೆ ಸುರಿಯೋ ಮಳೆಯಂತಿರಬೇಕು, ಆದರೆ ಕೆಲವರು ಮಳೆ ನನ್ನ ಮನೆ ಮೇಲೆ ಮಾತ್ರ ಸುರಿಯಲಿ, ನನ್ನ ಮನೆಯನ್ನ ಮಾತ್ರ ಸೊಂಪಾಗಿಡಲಿ ಅನ್ನೋ ರೀತಿಯ ಭಜನೆಯನ್ನ ಪಠಿಸುತ್ತಾರೆ' ಎಂಬ ಮಾತನ್ನು ಅವರು ತುಂಬ ನೋವಿನಿಂದ ಹೇಳುತ್ತಾರೆ. ಸುಬ್ಬು ಅವರ ಮಾತು ಇಡೀ ಮನುಷ್ಯ ಕುಲವನ್ನು ಹೇಗೆ ಒಳಗೊಳ್ಳಲಿಕ್ಕೆ ಹಂಬಲಿಸುತ್ತಿದೆ ಅಂದರೆ, ಅಂಥದ್ದೊAದು ಹಂಬಲವೇ ಕಾವ್ಯವನ್ನು ಒಂದು ಉನ್ನತ ಮಟ್ಟದ ಆದರ್ಶದ ನೆಲೆಗೆ ಒಯ್ಯುತ್ತದೆ ಮತ್ತು ಕಾವ್ಯವು ಜನಸಾಮಾನ್ಯರ ಸೊತ್ತು ಎಂಬ ಅರಿವನ್ನು ನೀಡುತ್ತದೆ.
ವಿಮರ್ಶಕ ಓಎಲ್‌ಎನ್ ಒಂದು ಕಡೆ ಹೇಳಿದ್ದನ್ನು ಇಲ್ಲಿ ನೆನಪಿಸಬಹುದು ಅನಿಸುತ್ತದೆ, 'ಕಾವ್ಯ ಅನ್ನೋದು ಒಂದು ಸಾಹಿತ್ಯ ಪ್ರಕಾರ ಅಷ್ಟೇ ಅಲ್ಲ, ಬದುಕನ್ನು ನೋಡುವ ಒಂದು ಕ್ರಮ, ಬದುಕನ್ನು ನೋಡುವ ಒಂದು ದೃಷ್ಟಿಕೋನ ಕಾವ್ಯ' ಅಂತ ವಿಮರ್ಶಕ ಓಎಲ್‌ಎನ್ ಹೆಳಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಿಂದೆ ವರ್ಡ್ಸವರ್ಥ ನಂತಹ ಕವಿಗಳು ಕೂಡ ಜನಭಾಷೆಗೆ ಅಗ್ರಸ್ಥಾನವನ್ನೇ ಕೊಟ್ಟಿದ್ದರು. ಇಲ್ಲಿ ಅವನೇ ಹೇಳಿದ ಸಾಲನ್ನು ನೆನಪಿಸೋದಾದ್ರೆ, 'ಭಾವನೆಗಳ ತೀವ್ರತೆಯನ್ನು ಹೊತ್ತು ನಿಲ್ಲಲು ಸಮರ್ಥವಾಗುವ ಭಾಷೆ ಬಹಳ ಮಹತ್ವದ್ದು' ಎನ್ನುತ್ತಾರೆ. ಇವೆಲ್ಲರ ಮಾತುಗಳನ್ನು ಸರೋಜಾ ಅವರ ಈ ಸಂಕಲನವನ್ನು ಓದುತ್ತ ಓದುತ್ತ ಚರ್ಚಿಸಬಹುದಾಗಿದೆ.
ಸಂಕಲನವಾಗಿ ಹೊರತರುವ ಒತ್ತಡದ ಫಲವಾಗಿ ಇಲ್ಲಿಯ ಅನೇಕ ರಚನೆಗಳು ಮೈದಾಳಿದಂತೆ ಕಾಣುತ್ತಿವೆ. ಸರೋಜಾ ಇಲ್ಲಿ ತಮ್ಮ ಭಾವನೆಗಳ ಸರಪಳಿಯನ್ನೇ ತೆರೆದಿಟ್ಟಿದ್ದಾರೆ. ಇಲ್ಲಿ ಕಾವ್ಯದ ದಾರಿ ಪರಿಚಿತ ಸಂವೇದನೆಗಾಗಿ ಮಾತ್ರ ಅರಸುತ್ತಿದೆ. 'ನಾನೇ ಕಾವೇರಿಯಾಗಿ ಹರಿವೆ' ಎಂಬಷ್ಟು ಚೈತನ್ಯಶೀಲ ಕವಿ ಇವರು. ಆಯಾ ಕವಿಗಳ ಕಾವ್ಯದ ಅಂಗಾAಗ ಕೂಡ ಆ ಕವಿಯ ಜೀವನ ದರ್ಶನದಿಂದಲೇ ಮೈತಾಳಿರುತ್ತದೆ. ತಮ್ಮ ವಿದ್ಯಾರ್ಥಿ ಬಳಗದಿಂದ 'ಹಿಂದೀ ಟೀಚರ್' ಎಂದೇ ಹೆಮ್ಮೆಯಿಂದ ಕರೆಸಿಕೊಳ್ಳುವ ಸರೋಜಾ ಮೇಟಿಯವರಿಂದ ಇನ್ನೂ ಅನೇಕ ಒಳ್ಳೆಯ ಕೃತಿಗಳು ಮೂಡಿ ಬರಲಿ ಎಂದು ಹಾರೈಸುತ್ತೇನೆ. 

ಕಾವ್ಯ ಕುಸುಮ
-ಸುನಂದಾ ಕಡಮೆ
ಕಾವ್ಯ ಕುಸುಮ
ಸ್ಫುರಣೆಗೊಂಡು ಕವಿತೆ; ಹದಗೊಂಡು ಎದೆಯಲ್ಲಿ ಮತ್ತೆ, ಸಹಜ- ಲಯ- ಭಾಷೆ ಬಂಧದೊAದಿಗೆ 'ಆನು ಒಲಿದಂತೆ ಹಾಡುವೆ 'ಎನುವಂತೆ ಒಡಮೂಡಿ ಬರುತ್ತದೆ. ಆ ಕವಿ ಸಮಯದಿಂದ ಛಕ್ಕನೆ ಎಚ್ಚತ್ತು "ಇದು ಹೇಳಬೇಕಲ್ಲ" ಎಂದುಕೊAಡಾಗಲೆಲ್ಲ ಕವಿತೆ ವಾಚ್ಯತೆಗೆ ಜಾರುತ್ತದೆ. ಕವಿ ಸಮಯಕ್ಕೆ 'ಕವಿ ಸಂಯಮ' ಬಹಳ ಅಗತ್ಯ. ಅದು ಕಾಯ್ದುಕೊಂಡು ರಚನೆಯಾಗಿರುವ ಅವರ ಕವಿತೆಗಳು_ ನಗೆ ಹಬ್ಬ, ಬೀಜ, ರೊಟ್ಟಿ ಮುಂತಾದವುಗಳು ಕಾಣಬಹುದು.
 ಗಗನಕೆ ಚಿಮ್ಮಿದೆ ನಗೆ ಬಿಲ್ಲು, 
 ಹೊರಹೊಮ್ಮಿದೆ ಕಾಮನಬಿಲ್ಲು. -ನಗೆಹಬ್ಬ
 ಇಲ್ಲಿಯ ಕವಿತೆಗಳು ಯಾವ 'ವಾದ'ಕ್ಕೂ ವಾಲದೆ ಒಟ್ಟು ಬದುಕಿನ ಮೌಲ್ಯವನ್ನು ಕಟ್ಟಿಕೊಡುವ ಭಾವ ಲಹರಿಯಿಂದ ಸಮಷ್ಟಿ ಪ್ರಜ್ಞೆಯತ್ತ ಸಾಗುತ್ತವೆ. ಒಳ್ಳೆಯ ಕಾವ್ಯದೋದಿನ ರಸಾನುಭವದ ಸಂದರ್ಭದಲಿ ರೂಪಾತ್ಮಕವಾದ ಕೆಲ ಸಾಲುಗಳು ತಟ್ಟನೆ ಹಿಡಿದು ನಿಲ್ಲಿಸುವಂತೆ ಇಲ್ಲಿಯ ಕೆಲ ಸಾಲುಗಳು ತಟ್ಟುತ್ತವೆ. 
 ದುಗುಡ ದುಮ್ಮಾನಗಳು 
 ಗಂಟಿಕ್ಕಿದ ಕೇಶ ರಾಶಿಯಂತೆ…
'ಅವನಿ' ಪದ್ಯದ ಸಾಲುಗಳು ಗಮನಿಸಬಹುದು. ಭರವಸೆ ಮೂಡಿಸುವ ಕವಿತೆಗಳನ್ನು ನೀಡಿರುವ, ಕನ್ನಡ ಮತ್ತು ಹಿಂದಿ ಸಾಹಿತ್ಯವನ್ನು ಅಧ್ಯಯನ ಮಾಡಿರುವ ಅವರಿಂದ ಕಾವ್ಯ ಲೋಕಕ್ಕೆ ಹೆಚ್ಚಿನ ಕಾಣ್ಕೆ ಸಲ್ಲಲಿ ಎಂದು ಆಶಿಸುತ್ತ ಈ ಕೃತಿಗಾಗಿ ಅವರಿಗೆ ನನ್ನ ಅಭಿನಂದನೆಗಳು.
ಮಹಾಂತಪ್ಪ ನಂದೂರ 
ಕಾವ್ಯ ಕುಸುಮ
ಕಾವ್ಯ ಕುಸುಮ
ಕಾವ್ಯ ಕುಸುಮ
ಕಾವ್ಯ ಕುಸುಮ
ಕಾವ್ಯ ಕುಸುಮ

Comments (0)




Be the first to comment using the form below.