ನನ್ನ ಹುಮ್ಮಸ್ಸು ನೋಡಿ ನನ್ನ ಸಾಹಿತ್ಯ ಸಹವರ್ತಿಗಳು ಒಂದಿಬ್ಬರು
"ನೀವು ಇಳಿರಿ ಅಮ್ಮ ನೀವು ಜಾರದ ಹಾಗೆ ನಾನು ನಿಮ್ಮ ಕೈ ಭದ್ರವಾಗಿ ಹಿಡಿಯುತ್ತೇವೆ" ಎಂಬ ಆಶ್ವಾಸನೆ ನೀಡಿದ್ದೇ ತಡ ಅವರ ಕೈಯನ್ನು ನಾನು ಗಟ್ಟಿಯಾಗಿ ಹಿಡಿದು ಕೊಂಡು ಹಿಂದೆ ತಿರುಗದೆ..ಕೆಳಗೆ ಇಳಿಯ ತೊಡಗಿದೆ..ಮುಂದೆ ಹೋದಂತೆ ಬಹಳ ಕಠಿಣವಾಗಿದೆ ಅನ್ನಿಸಿದ್ದು ಸಹಜ.ನನ್ನ ಉತ್ಸಾಹ ಅದಕ್ಕೆ ಅಡ್ಡಿಮಾಡಲಿಲ್ಲ ಒಂದು ಬದಿಯಿಂದ ಗುಹೆಯ ಗೋಡೆಯನ್ನು ಹಿಡಿದು ಕೈ ಹಿಡ್ಕೊಂಡಿದ್ದವರ ಕೈಯ್ಯನ್ನು ಬಿಡದೆ ,ಹೇಗೋ..ಕುಳಿತುಕೊಂಡೇ ಜಾರುತ್ತಾ ಕೆಳಗಿಳಿಯುವಂಥಾ ಪರಿಸ್ಥಿತಿಯನ್ನು ನಿಭಾಯಿಸುತ್ತಾ.ನಮ್ಮ ಊರು ಕೊಳಚಪ್ಪಿನಲ್ಲಿ ತೋಟಕ್ಕೆ, ರಬ್ಬರು ಗುಡ್ಡೆಗೆ ಇಳಿದು ಹತ್ತಿದ ಅನುಭವವಿದ್ದುದರಿಂದ.ಸಾಧಾರಣ ನೂರು ಅಡಿಯಷ್ಟು ಆಳವಿರುವ ಗುಹೆಯ ಅಂತ್ಯದ ಜಾಗಕ್ಕೆ ತಲಪಿದೆವು .ಮೇಲಿನಿಂದ ಒಂದೊಂದೇ ನೀರ ಹನಿ ತೊಟ್ಟಿಕ್ಕಿ ಕೆಲವು ಕಡೆ ಸ್ವಲ್ಪ ಜಾರುತ್ತಿದ್ದುದೂ ಸತ್ಯ
ಕೆಳಗಿಳಿಯುತ್ತಿದ್ದಂತೆ ಮಧ್ಯಭಾಗಕ್ಕಿಂತ ಸ್ವಲ್ಪ ಮುಂದೆ ಒಂದು ಶುಭ್ರ ಒಸರಿನ ತಿಳಿಕೊಳವು ಎದುರಾಯಿತು. ಕನ್ನಡಿಯಂತೆ ಹೊಳೆಯುತ್ತಿರುವ ಆ ಸ್ವಚ್ಛ ಜಲವು ಅಲ್ಲಿಯ ಪ್ರಕೃತಿ ಸಹಜದೋದ್ಭವದ ತೀರ್ಥವಂತೆ .ಆ ಗಂಗೆಯು ಸ್ವಲಮುಂದೆ ಹರಿಯುತ್ತಾ ಅವಳು ಅಂತರ್ಗಾಮಿಯಾಗುವಲ್ಲಿಯ ತನಕ ಗುಹೆಯ ಉದ್ದವೂ ಪೂರ್ಣಗೊಳ್ಳುತ್ತದೆ
ಇಳಿಯಲು ಬಳಸಿದ ಬೆಳಕನ್ನು ಅಲ್ಲಿ ಒಮ್ಮೆ ತೆಗೆದಾಗ ಬರೇ ಕಾರ್ಗತ್ತಲು.ಗಾಡಾಂಧಕಾರ!
ಒಂದಿಷ್ಟೂ ಬೆಳಕಿಲ್ಲದೆ ಕರಿ ಕತ್ತಲಿನ ದೊಡ್ಡ ಮೊತ್ತ!!ಒಬ್ಬರೇ ನಿಂತಂಥ ಅನುಭವ
ಮನುಜ ನವ ಮಾಸ ಗರ್ಭದ ಕತ್ತಲಿನ ಕೂಪದಿಂದ ಹೊರಬಂದು, ಮುಂದಿನ ಹಂತದಲ್ಲಿ ಅಜ್ಞಾನದ ಕತ್ತಲು ಅವನನ್ನು ಸಂಪೂರ್ಣ ಆವರಿಸಿ ದಾರಿಕಾಣದಾದಾಗ.. ಜಗನ್ಮಾತೆಯ ಬೆಳಕು ಅವನಿಗೆ ಜ್ಞಾನ ದೀವಿಗೆಯಾಗಿ ದಾರಿ ತೋರಿಸುತ್ತಿದೆ ಎಂಬೊಂದು ನಿತ್ಯ ಸತ್ಯ ನಿಚ್ಚಳವಾಗಿ ಹೊಳೆಯಿತು
ಗುಹೆಯ ಅಂತ್ಯಭಾಗವು ಗುಂಪು ಗುಂಪಾಗಿರುವ ಬಾವಲಿಗಳ ವಾಸಸ್ಥಾನವೂ ಅಹುದು
ಒಂದು ಅದ್ಭುತ ರೋಮಾಂಚನ ರೋಚಕದ ಅನುಭವ ಪಡೆಯುತ್ತಾ ತೀರ್ಥಜಲವನ್ನು ಸ್ವಲ್ಪಸೇವಿಸಿ ತಲೆಗೂ ಪ್ರೋಕ್ಷಿಸುತ್ತಾ ಮೆಲ್ಲನೆ ಮೇಲೇರುತ್ತಾ ಹೊರಗೆ ಬಂದು ,ಏನೋ ಒಂದು ದೊಡ್ಡ ಸಾಹಸ ಮಾಡಿದವರಂತೆ ಅಬ್ಬಾ ಎಂಬ ಒಂದು ದೊಡ್ಡದಾದ ನಿಟ್ಟುಸಿರು ಹೊರಗೆ ಬಂತು
ಗುಹೆಯಲ್ಲಿ ಅಲ್ಲಲ್ಲಿ ಭೈರವನಿಗೆ,
ನಾಗನಿಗೆ ,ದೇವಿಗೆ ದಿನಾ ಪೂಜೆ ಸಲ್ಲುತ್ತಿದೆಯಂತೆ
ಶಿಲೆಯಲ್ಲರಳಿದ ಕಮಲದಂತಿರುವ ಒಂದು ಕಲ್ಲು ,ಹಿಂದಿನ ಯಾವನೋ ರಾಜನಿಗೆ ದೊರಕಿ ಆ ಸ್ಥಳ ಮುಂದೆ ಕಮಲ ಶಿಲೆಯಾಯಿತು ಅಂತ ಪ್ರತೀತಿ
'ಜಗನ್ಮಾತೆಯು ಬಲದಲ್ಲಿ ಶಿಲೆಯಷ್ಟು ಗಟ್ಟಿಯಾಗಿದ್ರೂ..ಅವಳ ತಾಯಿ ಹೃದಯ ಕಮಲದ ಎಸಳಿನಂತೆ ಕೋಮಲ.'.ಕಮಲ ಶಿಲೆಗೆ ಅನ್ವರ್ಥವಾಗುವ ನುಡಿ
ಕಮಲಶಿಲೆಯನ್ನು ಬಿಟ್ಟು ನಾವು ಮುಂದೆ ಹೋಗುತ್ತಿದ್ದರೆ..ಒಂದು ವರ್ಣನೆಗೆ ನಿಲುಕದ ಬಹು ಸುಂದರದ ಒಂದು ಪುಣ್ಯ ಭೂಮಿಯಿಂದ ವಂಚಿತರಾಗುತ್ತಿದ್ದೆವು
ಅನಿವಾರ್ಯವಾಗಿ ದೊರೆತ ಈ ಒಂದು ಅಪೂರ್ವ ಅನುಭವಕ್ಕೆ..ಆ ತಾಯಿ ದುರ್ಗಾ ಪರಮೇಶ್ವರಿಯ ಪ್ರೇರಣಾ ಶಕ್ತಿಯೇ ಮೂಲವೇ ಅನ್ನಬೇಕು
ಅಮ್ಮಾ ತಲೆ ಬಾಗಿ ನಿನಗೆ ಕೋಟಿ ನಮಸ್ಕಾರ
ಸಾಧ್ಯವಾದವರು ಒಮ್ಮೆ ಹೋಗಿ ಕಣ್ಣಾರೆ ಕಂಡು ಬನ್ನಿ
ಹಿಂದೆ ಇಂಥಾ ಗುಹೆಯೊಳಗೆ ನಮ್ಮ ಪೂರ್ವಜರಾದ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದರಂತೆ..ಈಗಲೂ ಹಿಮಾಲಯದ ತಪ್ಪಲಿನಲ್ಲಿಯೂ ಅಲ್ಲದೆ ಬೇರೆ ಬೇರೆ ಕಡೆ ಇಂಥಾ ಗುಹೆಗಳಿಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿದ್ದು ಅಚ್ಚರಿ ಉಂಟುಮಾಡುತ್ತಿವೆ
Comment (1)
Post Comment
Report Abuse
Divya commented on September 2nd, 2023 at 8:46 AM
ಕಮಲಶಿಲೆ ಯ ಅನುಭವ ತುಂಬಾ ಚೆನ್ನಾಗಿದೆ. ನಿಮ್ಮ ಬರವಣಿಗೆಯ ಮೂಲಕ ನಾವೇ ಕಮಲಶಿಲೆಗೆ ಹೋಗಿ ಬಂದಂತ ಅನುಭವವಾಯಿತು. ಮತ್ತು ಕಮಲಶಿಲೆಗೆ ಹೋಗಲೇಬೇಕು ಕಣ್ಣಾರೆ ನೋಡಿ ಕಣ್ತುಂಬಿಕೊಂಡು ಮನಸಾರೆ ಅನುಭವಗಳನ್ನು ಸವಿಯಬೇಕು ಎಂದನಿಸಿದ್ದಂತೂ ಸತ್ಯ. ಸುಂದರ ಪ್ರವಾಸಿ ಅನುಭವ...