ಗೋವಿಂದ ಭಟ್ಟರ ಈ ಸಂಕಲನದ ಬಹುಪಾಲು ಕವನಗಳು ತಮ್ಮ ಶೈಲಿ ಹಾಗೂ ಸಂವೇದನೆಯಲ್ಲಿ ನವೋದಯಕ್ಕೆ ಹತ್ತಿರವಾಗಿವೆ. ಇದನ್ನು ಒಂದು ಅವಗುಣವೆಂದು ನಾನು ಭಾವಿಸುವುದಿಲ್ಲ. ಎಲ್ಲ ಕವಿಗಳೂ ಯಾವುದೋ ಒಂದು ನಿರ್ದಿಷ್ಟ ಧೋರಣೆಯನ್ನು ಸಾರುವ ಕವನಗಳನ್ನೇ ಬರೆಯಬೇಕು ಎಂದು ಫರ್ಮಾನು ಹೊರಡಿಸುವುದು ಸರ್ವಾಧಿಕಾರಿ ಮನೋಭಾವ. ರಮ್ಯ ಸಂವೇದನೆಯ ಕವನಗಳನ್ನು ಬರೆಯುವವರು, ಓದಿ ಆನಂದಿಸುವವರು ಈಗಲೂ ಇದ್ದಾರೆ. ಈ ಸಂಕಲನದಲ್ಲಿರುವ ‘ಗಂಡನ ಮನೆಗೆ ಕಾಲಿಟ್ಟಗಳಿಗೆ', ‘ಬಾ ಒಲವೇ', ‘ರಂಗೋಲಿ' ಯಂತಹ ಕವನಗಳು ಕೆ. ಎಸ್. ಎನ್ ಅವರ ಮೈಸೂರ ಮಲ್ಲಿಗೆಯನ್ನು ನೆನಪಿಸುವಷ್ಟು ಸರಳ, ಭಾವಪೂರ್ಣ ಹಾಗೂ ಸುಂದರವಾಗಿವೆ. ನಿಸರ್ಗ ಸೌಂದರ್ಯವನ್ನು ಆರಾಧಿಸುವ ಭಾವಗೀತೆಗಳ ಮಾದರಿಯ ಕೆಲವು ಕವಿತೆಗಳನ್ನೂ ಭಟ್ಟರು ಈ ಸಂಕಲನದಲ್ಲಿ ಸೇರಿಸಿದ್ದಾರೆ. ನವ್ಯ ಸಂವೇದನೆಯ ವೈಚಾರಿಕತೆಯನ್ನು ಮೈಗೂಡಿಸಿಕೊಂಡ ಕೆಲವು ಯಶಸ್ವಿ ಕವನಗಳೂ ಇಲ್ಲಿವೆ. ಮಾತು, ಹಳೆ ಸರಕು, ಕನಸುಗಳು, ಮೌನದ ಮಾತು, ಸದ್ದು ಆ ಬಗೆಯವು. ಗೋವಿಂದ ಭಟ್ಟರು ಮೂಲತಃ ಕಥೆಗಾರರಾದ್ದರಿಂದ ಅವರ ಹಲವು ಕವಿತೆಗಳು ಕಥನಾತ್ಮಕವಾಗಿವೆ. ಅಲ್ಲಿ ಕಳೆದು ಹೋದ ಕಾಲ ಘಟ್ಟದ ಮಧುರ ನೆನಪುಗಳು ಮತ್ತು ನೀರಸವಾದ ವರ್ತಮಾನದ ಕ್ಷಣಗಳು ಮುಖಾಮುಖಿಯಾಗುತ್ತವೆ. ‘ಕಿಟಕಿ', ‘ಏನೋ ಕಳೆದ ಹಾಗೆ', ‘ತಾಂಬೂಲ' ನನಗಿಷ್ಟವಾದ ಕಾಡುವ ಕವನಗಳು. ಈಸಂಕಲನದಲ್ಲಿ ನನಗೆ ತುಂಬಾ ತೃಪ್ತಿ ನೀಡಿದ ಕವನ ‘ಕದ್ದವರು ಯಾರು?' ಚೀನಿಗುಂಬಳದ ರೂಪಕದ ಮೂಲಕ ವಿವಾಹದ ಕಾರಣ ಮಗಳು ಹೆತ್ತವರಿಂದ ದೂರವಾದ ನಂತರ ಉಂಟಾಗುವ ನೋವನ್ನು ಕವಿ ಇಲ್ಲಿ ಬಹಳ ಸೂಚ್ಯವಾಗಿ ಅಭಿವ್ಯಕ್ತಿಸಿದ್ದಾರೆ.
“ಮನಸ್ಸು ಹಿಗ್ಗಿತು ಹೆತ್ತ ಹಾಗೆ ಮಗುವನ್ನೇ!”
“ಹೊರಗೆ ಅಂಬೆಗಾಲಿಕ್ಕಿತು ಬಳ್ಳಿ ಹಸಿರು”
“ಕಾಯಿಯ ಹೊರ ಮೈಮೇಲೆ ಮೂಡಿತು ಚಿತ್ತಾರ”
“ಹೆಣ್ಣು ಮಾಡಿಕೊಂಡ ಹಾಗೆ ಮೆಹಂದಿಯ ಶೃಂಗಾರ”
ಎAಬ ಸಾಲುಗಳಲ್ಲಿ ಕಾಣಬಹುದಾದ ಸಣ್ಣ ಸುಳಿವುಗಳನ್ನು ಬಿಟ್ಟರೆ ಬೇರೆಲ್ಲೂ ಈ ಕವನ ತನ್ನ ಗುಟ್ಟು ಬಿಟ್ಟುಕೊಡುವುದಿಲ್ಲ.
“ಒಂದು ಮುಂಜಾನೆ ನೋಡಿದರೆ ಬಳ್ಳಿ ಇತ್ತು ಹಾಗೆ”
“ಗೊತ್ತಾಗಲಿಲ್ಲ ಚೀನಿಕಾಯಿ ಮಾಯವಾದದ್ದು ಹೇಗೆ?”
ಎಂದು ಕವನ ಕೊನೆಗೊಂಡಾಗಲೇ ಅದರ ಧ್ವನಿ ರಮ್ಯತೆ ಅರಿವಾಗುತ್ತದೆ. ಈ ಸಂಕಲನದಲ್ಲಿರುವ ಇಂಥದೇ ಇನ್ನೊಂದು ಕವನ ‘ನಿನಗೊಂದು ನಮನ'. ಇಲ್ಲಿ ಕವಿ ಎತ್ತರಕ್ಕೆ ಬೆಳೆದ ಅಡಿಕೆ ಮರದೊಂದಿಗೆ ತನ್ನ ಬೆಳವಣಿಗೆಯನ್ನು ಹೋಲಿಸಿಕೊಳ್ಳುತ್ತಾ- ನೀನು ವಿವಶ ನಿಂತಲ್ಲೇ ಕಂಡಿರುವೆ ಅವಕಾಶ
ನಾನು ಊರೂರು ಸುತ್ತಿದರೂ
ಉಳಿದದ್ದು ಮಾತ್ರ ಶೇಷ
ಎಂದು ತನ್ನ ಬಗ್ಗೆ ಅತೃಪ್ತಿ ಮತ್ತು ಅಡಿಕೆ ಮರದ ಬಗ್ಗೆ ಗೌರವವನ್ನು ವ್ಯಕ್ತಪಡಿಸಿದ ರೀತಿ ಕಲಾತ್ಮಕವಾಗಿದೆ. ನಾನು ಕಂಡAತೆ ಗಂಭೀರ ಸ್ವಭಾವದವರಾದ ಗೋವಿಂದ ಭಟ್ಟರು ಜಂಬ್ರದ ಗಮ್ಮತ್ತು' ಮತ್ತು ‘ಅಮ್ಮಾವ್ರ ಗಂಡ' ಎಂಬ ಎರಡು ಹಾಸ್ಯ/ವಿಡಂಬನೆಯ ಕವನಗಳನ್ನೂ ಈ ಸಂಕಲನದಲ್ಲಿ ಸೇರಿಸಿದ್ದಾರೆ. ಕೆಲವು ಕವನಗಳು ವಾಚ್ಯತೆಯ ದೋಷದಿಂದಸೊರಗಿರುವುದನ್ನೂ ನಾನು ಗಮನಿಸಿದ್ದೇನೆ. ಒಟ್ಟಿನಲ್ಲಿ ಕೊಳ್ಚಪ್ಪೆ ಗೋವಿಂದ ಭಟ್ಟರು ‘ಋತು ಗಾನ'ದಲ್ಲಿ ಒಳ್ಳೆಯ ಕವನಗಳನ್ನೆ ಹೆಚ್ಚಿನ ಸಂಖ್ಯೆಯಲ್ಲಿ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು.
Comments (0)
Post Comment
Report Abuse
Be the first to comment using the form below.