"ಭಾವಯಾನ" ಚಿಕ್ಕ ಪದಗಳಿಂದ ಆರಂಭವಾದ ಭಾವನೆಗಳ ಯಾನ ಬರಹಗಾರ್ತಿಯನ್ನಾಗಿ ಮುಂದುವರೆಸಿದೆ. ಈ ಯಾನ ನಿರಂತರವಾಗಿರಲಿ ಎಂಬುದೇ ನನ್ನ ಆಶಯ.ಚುಟುಕು ಕವನ ಸಂಕಲನಕ್ಕೆ ಪ್ರಮುಖ ಕಾರಣಕರ್ತರೆಂದರೆ ಕಥಾಬಿಂದು ಪ್ರಕಾಶನ ಸಂಸ್ಥೆಯ ಪ್ರದೀಪ್ ಕುಮಾರ್ ಸರ್. ನನ್ನ ಮೊದಲನೆಯ ಪುಸ್ತಕ ಮನದನಿಯ ಚಿತ್ತಾರವನ್ನು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ಚಾಮರಾಜಪೇಟೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದ್ದ ಕಥಾ ಬಿಂದು ಪ್ರಕಾಶನದ ಕಾರ್ಯಕ್ರಮದಲ್ಲಿ ಬಹಳ ಅದ್ದೂರಿಯಾಗಿ ಲೋಕಾರ್ಪಣೆ ಮಾಡಿ ಜನಮನ ಗೆಲ್ಲುಲು ದಾರಿ ತೋರಿದರು. ಸದಾ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವ ಇವರು ಹಲವಾರು ಬರಹಗಾರರಿಗೆ ದಾರಿ ದೀಪ. ಇಂದು ನನ್ನ "ಭಾವಯಾನ" ಚುಟುಕು ಸಂಕಲನಕ್ಕೆ ಬಹಳ ಸೊಗಸಾಗಿ ಮುನ್ನುಡಿಯನ್ನು ಬರೆದು ತಮ್ಮದೇ ಸಂಸ್ಥೆಯಾದ ಕಥಾಬಿಂದು ಪ್ರಕಾಶನದಡಿಯಲ್ಲಿ ಮುದ್ರಿಸಿ ಲೋಕಾರ್ಪಣೆ ಮಾಡುತ್ತಿರುವುದು ಅವರ ಪ್ರೋತ್ಸಾಹಕರ ಮನಕ್ಕೆ ಹಿಡಿದ ಕನ್ನಡಿ. ನನ್ನೆರಡೂ ಪುಸ್ತಕಗಳಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರೋತ್ಸಾಹ ನೀಡಿರುವ ಇವರಿಗೆ ಸದಾ ನಾನು ಋಣಿಯಾಗಿರುವೆ. ಹಾಗೆಯೇ.... ಬೆನ್ನುಡಿಯ ಕರ್ತೃ ಉತ್ತಮ ಬರಹಗಾರರು, ಉಪನ್ಯಾಸಕರು ಆದ ಶ್ರೀನಾಗ್ ಪಿ ಎಸ್ ರವರು ಕೂಡ ನನ್ನ ಬರವಣಿಗೆಯ ಸುಧಾರಣೆಗೆ ಪ್ರಮುಖ ಕಾರಣಕರ್ತರು. ಮುಖಪುಸ್ತಕದ ಬಳಗ ಯುಗಾದಿಯ ಮೂಲಕ ಬಹಳಷ್ಟು ಕವಿಮನಗಳನ್ನು ಗುರುತಿಸಿದ ಕೀರ್ತಿ ಅವರದು. "ಭಾವಯಾನ" ಚುಟುಕು ಸಂಕಲನಕ್ಕೆ ಬಹಳ ಸುಂದರ ಪದಗಳಿಂದ ಬೆನ್ನುಡಿಯನ್ನು ಬರೆದು ಪ್ರೋತ್ಸಾಹ ನೀಡಿದ ಇವರಿಗೆ ಅನಂತಾನಂತ ಧನ್ಯವಾದಗಳು.
ಜೊತೆಗೆ ತನ್ನೆಲ್ಲಾ ಕಾರ್ಯದಲ್ಲೂ ಪ್ರೋತ್ಸಾಹಿಸುತ್ತಾ ಬಂದಿರುವ ಶಿಕ್ಷಕಿ, ಕವಯಿತ್ರಿ ನನ್ನ ಗೆಳತಿಯಾದ ಸುಧಾಕಂದಕೂರ ಹಾಗೂ ಉಪನ್ಯಾಸಕರು, ಕವಿಗಳು ಆದ ಕವಿ ಸಹೋದರ ಅವಿನಾಶ್ ಸೆರೆಮನಿ ಅವರಿಗೂ ಧನ್ಯವಾದಗಳು . ನಾಲ್ಕು ಸಾಲುಗಳಲ್ಲಿ ಅರ್ಥಪೂರ್ಣ ಭಾವ ತುಂಬುವ ಪ್ರಯತ್ನವೇ ಚುಟುಕು. ಈ ನಿಟ್ಟಿನಲ್ಲಿ "ಭಾವಯಾನ" ಚುಟುಕು ಸಂಕಲನದ ಮೂಲಕ ಬರವಣಿಗೆಯ ಮೇಲೆ ನಾನೆಷ್ಟು ಹಿಡಿತ ಸಾಧಿಸಿರುವೆನೆಂಬುದ ಓದುಗ ಮನಗಳು ಹೇಳಬೇಕಷ್ಟೇ.
ಧನ್ಯವಾದಗಳೊಂದಿಗೆ...
ದರ್ಶಿನಿ ಪ್ರಸಾದ್ ವನಗೂರು
Comments (0)
Post Comment
Report Abuse
Be the first to comment using the form below.