"ನೈದಿಲೆ ನಗು" ಶೀರ್ಷಿಕೆಯ ಈ ಕವನ ಸಂಕಲನದಲ್ಲಿ ಸೀಮಿತ 30 ಕವನಗಳಿವೆ. ಅವರು ದೈನಂದಿಕ ವಿಷಯಗಳನ್ನು ಕುರಿತ ಕವನ ರಚಿಸಿದರೂ ಹಳೆಯ ಜಾಡು ಹಿಡಿಯದಿರುವುದು ಗಮನಾರ್ಹ ಅಂಶವಾಗಿದೆ. ಪ್ರಾಸ, ರಾಗ, ಗೇಯತೆಯ ಕುರಿತು ತಲೆಕೆಡಿಸಿಕೊಳ್ಳದೆ ಕಾವ್ಯದ ಕಸುವು, ರೂಪಕ, ಅಂತ:ಸತ್ವಗಳು ಕಡೆಗೆ ಹೆಚ್ಚು ಗಮನಹರಿಸಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗೆಂದ ಮಾತ್ರಕ್ಕೆ ಕವನಗಳ ಮೂಲ ರೂಪ, ರಚನೆ, ವಿನ್ಯಾಸವನ್ನು ಕಿತ್ತೆಸೆಯದೆ ಉಳಿಸಿಕೊಂಡು ವಿಶೇಷತೆಯನ್ನು ಮೆರೆದಿದ್ದಾರೆ. ಒಂದೆರಡು ಕವನಗಳನ್ನು ಅವಲೋಕಿಸಿದರೆ ಮೇಲಿನ ಹೇಳಿಕೆಗಳು ಸ್ಪಷ್ಟವಾಗಬಹುದು ಅನಿಸುತ್ತದೆ. "ನನ್ನ ಲೇಖನಿ"ಯ ಕವನದ ಒಂದು ಚರಣ ಇಂತಿದೆ.
ಬರುವವರೆಗೆ ಕಾಯುವೆ ಆಲಿಂಗನಕೆ
ಮುನಿಸು ಮರೆತು ನಸುನಾಚಿ ಬಳಿ ಬಂದು
ಮುಷ್ಟಿ ಬಂಧನಕೆ ಒಳಗಾಗಲೇಬೇಕು
ನನ್ನ ಕೈಯ ಬಿಸಿ ಸ್ಪರ್ಶಕೆ ಕರಗಲೇಬೇಕು
ಗೀಚುವುದು ತೋಚಿದ ಮನದಿಂಗಿತವ ಕವನದಲ್ಲಿ ಲೇಖನಿಯನ್ನು ರೂಪಕವಾಗಿಸಿ ಮನದ ಭಾವಗಳನ್ನು ಈ ಬರಹದ ಉಪಕರಣಕ್ಕೆ ಆರೋಪಿಸಿ ಓದುಗನನ್ನು ಚಿಂತನೆಗೆ ಹಚ್ಚುವುದೇ ಕವನದ ಹೆಚ್ಚುಗಾರಿಕೆ. "ಅವಳೇ ನಿರಂತರ" ಎಂಬ ಕವನದಲ್ಲಿ
ಗಂಡಾದರೇ ಶ್ರೇಷ್ಠ ಅಲ್ಲ
ಹೆಂಡತಿಯನ್ನು ಅರಿಯುವ ಗಂಡಾದರೆ ಶ್ರೇಷ್ಠ
ಅವಳನ್ನು ನಗಿಸುವ ವಿದೂಷಕನಾಗು
ಆರೈಕೆ ಮಾಡುವ ವೈದ್ಯನಾಗು
ಬರೀ ಮನೆಗೆ ರಾಜನಾಗಬೇಡ
ಅವಳ ಭಾರೀ ಮನಕೆ ರಾಜನಾಗು ಎಂಬ ಚರಣದಲ್ಲಿ ಹೆಣ್ಣಿನ ಮನಸ್ಸನ್ನು ಗೆಲ್ಲುವ ಬಗ್ಗೆ ಆಶಯವನ್ನು ಬಿಚ್ಚಿಟ್ಟ ಕವಯತ್ರಿ ದಿಟ್ಟೆ ಎನಿಸುತ್ತದೆ. ಶ್ರೀಮತಿ ಭುವನೇಶ್ವರಿ. ರು. ಅಂಗಡಿ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ಪ್ರವೃತ್ತಿಯಲ್ಲಿ ಲೇಖಕಿ. ಈಗಾಗಲೇ ಎರಡು ಕೃತಿಗಳು ಪ್ರಕಟವಾಗಿದ್ದು, ಈ ಕವನ ಸಂಕಲನ ಹೆಚ್ಚು ಪ್ರಬುದ್ಧತೆಯನ್ನು ತೋರುತ್ತಿದೆ. ಅವರ ಕಾವ್ಯ ನಡಿಗೆ ಯಶಸ್ವಿಯಾಗಲಿ ಎಂದು ಶುಭ ಹಾರೈಕೆಗಳು.
Comments (0)
Post Comment
Report Abuse
Be the first to comment using the form below.