ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು, ಇಲ್ಲಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ಇತ್ತೀಚಿಗೆ ಲಕ್ಷ್ಮೀ ವಿ ಭಟ್ ಮಂಜೇಶ್ವರ ರಚಯಿತ ಅಷ್ಟ ದ್ರವ್ಯ ಹಾಗೂ ಝೇಂಕಾರ ಕೃತಿಗಳನ್ನು ಸಾನಿಧ್ಯ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಯಿತು. ಡಾ. ಧನಂಜಯ ಕುಂಬ್ಳೆ ಅಷ್ಟ ದ್ರವ್ಯವನ್ನು ಲೋಕಾರ್ಪಣೆ ಗೈದು ಕೃತಿ ಅವಲೋಕನ ಮಾಡುತ್ತಾ, ಈ ಕೃತಿಯು ಹೊಸ ಬರೆಹಗಾರರಿಗೆ ಮಾತ್ರವಲ್ಲದೆ ವಿಶ್ವವಿದ್ಯಾಲಯದ ಸಾಹಿತ್ಯಾಭ್ಯಾಸಿಗಳಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಈ ಕೃತಿಯೇ ಒಂದು ಪಠ್ಯಪುಸ್ತಕವಿದ್ದಂತೆ ಎಂದು ನುಡಿದರು. ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರಾದ ಡಾಕ್ಟರ್ ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿಯವರು ಝೇಂಕಾರ ಕೃತಿಯನ್ನು ಲೋಕಾರ್ಪಣೆ ಮಾಡಿ, ಸಾಹಿತ್ಯ ಕ್ಷೇತ್ರಕ್ಕೆ ಇದೊಂದು ಅತ್ಯಮೂಲ್ಯ ಕೊಡುಗೆ ಎಂದು ಬಣ್ಣಿಸಿದರು. ಡಾ. ಮೀನಾಕ್ಷಿ ರಾಮಚಂದ್ರ ಇವರು ಝೇಂಕಾರ ಕೃತಿ ಅವಲೋಕನ ಮಾಡಿ, ತ್ರಿಪದಿಗಳು ಮಹಿಳೆಯರ ಗಾಯತ್ರಿ ಎಂಬುದು ಮತ್ತೊಮ್ಮೆ ಲಕ್ಷ್ಮಿಯ ಮೂಲಕ ಸಾಬೀತಾಯಿತು ಎಂದು ನುಡಿದರು. ಮುಂದುವರೆದು ಮಾತನಾಡುತ್ತಾ ಕನ್ನಡ ನೆಲದ ಜನಮಾನಸದಲ್ಲಿ ಹಾಸು ಹೊಕ್ಕಾಗಿ ಬೆಳೆದಿರುವ ಸಾಹಿತ್ಯ ತ್ರಿಪದಿಗಳು. ಈ ಕೃತಿಯಲ್ಲಿ ಹಲವು ವೈವಿಧ್ಯ ವಿಚಾರಗಳ ಅನಾವರಣವನ್ನು ಕಾಣಬಹುದು. ಕಾಸರಗೋಡಿನ ಕನ್ನಡಿಗರಲ್ಲಿ ಕನ್ನಡದ ರಕ್ತ ಸ್ವಲ್ಪ ಬಿರುಸಾಗಿಯೇ ಹರಿಯುತ್ತಿದೆ ಎಂದು ನುಡಿದರು. ಬಳಿಕ ಶಿಕ್ಷಣ ತಜ್ಞ ಶ್ರೀ ವಿ.ಬಿ ಕುಳಮರ್ವ ಇವರು ಛಂದೋಬದ್ಧ ಕವಿತೆಗಳು;ಆಧುನಿಕ ಪ್ರಯೋಗ ಈ ವಿಷಯದ ಕುರಿತು ಉಪನ್ಯಾಸ ನೀಡಿದರು. ಕೃತಿಯಿಂದ ಆಯ್ದ ಕೆಲವು ಹಾಡುಗಳನ್ನು ಶ್ರೀಮತಿ ಅನುಷಾ ಕೊಲ್ಲರಮಜಲು , ಶ್ರೀಮತಿ ಪ್ರಸನ್ನಾ ಸಿ ಎಸ್ ಭಟ್ ಕಾಕುಂಜೆ ಹಾಗೂ ದಿವಾಕರ್ ಬಲ್ಲಾಳ ಇವರು ಸುಮಧುರವಾಗಿ ಹಾಡಿದರು. ಸಭಾಧ್ಯಕ್ಷರಾದ ಕಥಾಬಿಂದು ಪ್ರಕಾಶನದ ಶ್ರೀ ಪಿ ವಿ ಪ್ರದೀಪ್ ಕುಮಾರ್ ಅವರು ಶುಭಾಶಂಸನೆ ಗೈದರು.
Comments (0)
Post Comment
Report Abuse
Be the first to comment using the form below.