ಯುವ ಕವಯತ್ರಿ ಅಶ್ವಿನಿ. ಕೆ ಅವರ ಈ ಕವನ ಸಂಕಲನದಲ್ಲಿ ನಲವತ್ತು ಕವನಗಳಿವೆ. ತಾನು ಕಂಡು ಅನುಭವಿಸಿದ ನೋವು ನಲಿವುಗಳಿಗೆ ಸುಂದರವಾದ ಕಾವ್ಯದ ಚೌಕಟ್ಟು ನೀಡಿದ್ದಾರೆ. ಎಲ್ಲಾ ಕವನಗಳನ್ನು ಓದಿದ್ದೇನೆ. ಒಂದೆರೆಡು ಅನಿಸಿಕೆಗಳನ್ನು ಇಲ್ಲಿ ಪ್ರಾಮಾಣಿಕವಾಗಿ ಅಭಿವ್ಯಕ್ತಿಗೊಳಿಸಿದ್ದೇನೆ. ಬರೆಯುವ ಹಂತದಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಹಿರಿಯರೆನಿಸಿಕೊಂಡವರ ಆದ್ಯ ಕರ್ತವ್ಯ ಎಂದು ಭಾವಿಸಿದವನು. ಕವಯತ್ರಿ ಅಶ್ವಿನಿ. ಕೆಅವರಿಗೆ ಸದಾಕಾಲವೂ ಶುಭವಾಗಲಿ ಎಂಬ ಹಾರೈಕೆ ನನ್ನದು.
ಅತ್ಯಂತ ಕಡಿಮೆ ಪದಗಳಲ್ಲಿ ಹೇಳಬೇಕಾದುದನ್ನು ಬರೆಯುವ ಕಲೆ ಹೇಳಿದಷ್ಟು ಸುಲಭವಲ್ಲ. ಕಥೆ ಕಟ್ಟುವುದು, ಕಾವ್ಯ ಹುಟ್ಟುವುದು ಎಂಬ ಮಾತಿದೆ. ಬರೆಯಲೇಬೇಕೆಂದು ಕುಳಿತು ಗೀಚಿದ ಕೂಡಲೇ ಅದು ನಾವು ನಿರೀಕ್ಷಿಸಿದ ರೀತಿಯಲ್ಲಿ ‘ಕೃತಿ ರಚನೆ' ಆಗುತ್ತದೆ ಎಂಬ ಭ್ರಮೆ ನಾವು ಇಟ್ಟುಕೊಳ್ಳಬಾರದು. ಬರೆಯಬೇಕೆನಿಸಿದಾಗ ಬರೆಯುವುದು ಉತ್ತಮ. ಅನುಭವಗಳು ಹಾಗೂ ಪುಸ್ತಕಗಳ ಓದು ನಮ್ಮ ಬೆಳವಣಿಗೆಗೆ ಸಹಾಯಕವಾದ ಅಂಶಗಳು. ಪ್ರತಿಭೆ-ಸಮಯ-ಸ್ಫೂರ್ತಿ-ಈ ಮೂರು ಅಂಶಗಳು ಕೃತಿ ರಚನೆಗೆ ಸಂಬಂಧಿಸಿದ್ದು. ಅಂಗಡಿಗೆ ಹೋಗಿ ಮೂರು ಕಿಲೋಗ್ರಾಂ ಪ್ರತಿಭೆ ಕೊಡಿ ಎಂದರೆ ಅದು ಅಲ್ಲಿ ಸಿಗದು. ಓದುವುದು, ಬರೆಯುವುದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ನಿತ್ಯ ಜೀವನದಲ್ಲಿ ಆದ ಅನುಭವಗಳು. ಹೀಗೆ ಪ್ರತಿಭೆಗಳು ನಮ್ಮಲ್ಲೇ ಇದೆ. ನಾವು ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಸ್ಫೂರ್ತಿ ಸಿಕ್ಕಿದಾಗ ಬರವಣಿಗೆ ಚೆನ್ನಾಗಿ ಮೂಡಿಬರುತ್ತದೆ. ಬರೀ ಪ್ರತಿಭೆ ಇದ್ದರೆ ಸಾಲದು. ಸಮಯ, ಸ್ಪೂರ್ತಿ ತುಂಬುವವರು ಬೇಕು. ಬರೆಯಲಿಕ್ಕೆ ಸಮಯವಿದೆ. ಆದರೆ ಪ್ರತಿಭೆಯಿಲ್ಲದಿದ್ದರೆ ಒಳ್ಳೆಯ ಬರವಣಿಗೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಲೇಖಕನಿಗೆ ಪ್ರತಿಭೆ, ಸಮಯ ಹಾಗೂ ಸ್ಫೂರ್ತಿ ಸಿಕ್ಕಿದಾಗ, ನಿರೀಕ್ಷಿಸಿದ ರೀತಿಯಲ್ಲಿ ಕೃತಿ ರಚಿಸಲು ಸಾಧ್ಯವಾಗುತ್ತದೆ. ‘ಆರಾಧನೆ' ಓದಿದಾಗ ಅಶ್ವಿನಿ. ಕೆಅವರು ಪ್ರತಿಭಾವಂತೆ ಎಂಬುದರ ಅರಿವಾಯಿತು. ಸಾಕಷ್ಟು ಅನುಭವಗಳನ್ನು ಸಂಪಾದಿಸಿದ್ದಾರೆ. ಅವುಗಳಿಗೆ ಸುಂದರವಾದ ಬರವಣಿಗೆಯ ಚೌಕಟ್ಟು ನೀಡಿದ್ದಾರೆ. ಕವನಸಂಕಲನ ಓದಿ ತುಂಬಾ ಖುಷಿಯಾಯಿತು.ನಾಡು ನುಡಿಗಳ ಬಗ್ಗೆ ಗೌರವ, ದೇವರ ಬಗ್ಗೆ ಅಭಿಮಾನ, ಮೌಢ್ಯಗಳ ಬಗ್ಗೆ ಆಕ್ರೋಶ, ಸಕರಾತ್ಮಕ ಚಿಂತನೆ, ಮಾನವೀಯ ಮೌಲ್ಯಗಳನ್ನು ಒಳಗೊಂಡ 'ಆರಾಧನೆ ' ಯಲ್ಲಿರುವ ಕವನಗಳ ಆಶಯ ಸರ್ವಕಾಲಕ್ಕೂ ನಿಲ್ಲುವಂತಹದ್ದು. ಸುಂದರವಾದ ರಚನೆಗಳಿವೆ. ಕೆಲವೊಂದು ಕವನಗಳನ್ನು ಸುಶ್ರಾವ್ಯವಾಗಿ ಹಾಡಬಹುದಾಗಿದೆ. ಆಮೆಗೂ ಗೆಲುವುಂಟು ಕವನದಲ್ಲಿ ಪ್ರೀತಿ, ವಿಶ್ವಾಸ, ಹೃನ್ಮನದಿ ತುಂಬಿಕೊಂಡು ನಿಧಾನವಾಗಿ ಗುರಿಮುಟ್ಟಬಹುದೆಂಬ ಆಶಯ ವ್ಯಕ್ತಪಡಿಸಿದ್ದಾರೆ.ಎಂದೆಂದಿಗೂ ಜೀವ ಶಕ್ತಿಯೇ ಮಾಯೆ ಎಂಬ ನಂಬಿಕೆಯು ಎಂದೆಂದಿಗೂ ಎಂದು ‘ಇಬ್ಬಂದಿ' ಕವನದಲ್ಲಿ ಹೇಳಿದ್ದಾರೆ. ಕವಯತ್ರಿಯ ಕನ್ನಡ ಪ್ರೇಮದ ಬಗ್ಗೆ ‘ಕನ್ನಡವ ಕಟ್ಟಿ ಬೆಳಸಿ ಜೋಪಾನ' ಕವನ ಓದಿದಾಗ ನಮಗರಿವಾಗುತ್ತದೆ. ಲೇಖನಿಯನ್ನು ಯಜಮಾನನಿಗೆ ಹೋಲಿಸಿದ್ದಾರೆ.
ಮುದುಡಿದ ಹೂವುಗಳು, ಸಾತ್ಪಾತ್ರರು, ನಿಸ್ವಾರ್ಥ, ಕರ್ತವ್ಯ, ಈ ಮುಂತಾದ ಕವನಗಳನ್ನು ಒಂದೆರೆಡು ಬಾರಿ ಓದಿ ಅರ್ಥ ಮಾಡಿಕೊಳ್ಳಬೇಕು. ಸರಳವಾದ ಶೈಲಿ. ಕೆಲವೊಮ್ಮೆ ವಾಚ್ಯ ಅನಿಸಿದರೂ, ಅದು ಕಾವ್ಯಕ್ಕೆ ಪೂರಕವಾಗಿದೆ. ವೇಣುಪುರದ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ಅಗುಳ ಚೆಲ್ಲುವ ಮುನ್ನ ಯೋಚನೆಗೈಯುವ ಒಂದಗುಳಿ ನಿಂದ ಅದೆಷ್ಟು ಶ್ರಮವಿದೆ (ಒಕ್ಕಲಿಗನ ಒಕ್ಕಲು) ತುಂಬಾ ಅರ್ಥಪೂರ್ಣವಾದ ಸಾಲಿದು. ನನಗೆ ತುಂಬಾ ಇಷ್ಟವಾಯಿತು. ‘ಆರಾಧನೆ' ಯ ಕವನಗಳನ್ನು ಓದಿದ ಮೇಲೆ ಏನು? ಏಕೆ? ಹೇಗೆ? ಹಾಗಾಗದಿದ್ದರೆ? ಎಂಬ ಪ್ರಶ್ನೆ ಹಾಕಿ, ತಾರ್ಕಿಕವಾಗಿ ಯೋಚಿಸಿದಾಗ ಯಾವುದು ಸರಿ, ಯಾವುದು ತಪ್ಪು ಎಂಬ ಅರಿವು ನಮಗಾಗುತ್ತದೆ. ಇದು ಜ್ಞಾನ ಕಟ್ಟುವ ಕೆಲಸ. ಹಾಗಾಗಿ ಈ ಕವನ ಸಂಕಲನ ಜ್ಞಾನ ಕಟ್ಟುವ ಕೆಲಸಕ್ಕೆ ಅನುವು ಮಾಡಿಕೊಟ್ಟಿದೆ.ನೀತಿಯುಕ್ತ ವಾಕ್ಯಗಳ ಜೋಡಣೆಯಿಂದ ಕೆಲವೊಂದು ಕವನಗಳನ್ನು ಇನ್ನೊಮ್ಮೆ ಓದಬೇಕೆನಿಸುತ್ತದೆ. ಉದಾಹರಣೆಗೆ:-
"ಬದುಕೆಂಬ ರೈಲು ಬಂಡಿಯಲಿ ಹಲವಾರು ಭೋಗಿಗಳು ನಾವುಗಳು".
"ಅನ್ನ ನೀಡುವ ಅನ್ನದಾತ ದೇವರಿಗಿಂತ ಕಡಿಮೆಯಿಲ್ಲ".
Comments (0)
Post Comment
Report Abuse
Be the first to comment using the form below.