ಅಷ್ಟಕ್ಕೇ ತೃಪ್ತರಾಗದ ಇವರು ಕವನರಚನೆಯ ವ್ಯವಸಾಯದಲ್ಲಿ ಸದಾ ನಿರತರಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಇದೀಗ ಎರಡನೇ ಕವನಸಂಕಲನ ಪ್ರಕಟಿಸುವ ಉತ್ಸುಕತೆಯನ್ನು ತೋರಿದ್ದಾರೆ. ಬರಿಯ ಅಟ್ಟುಂಬೊಳದ ಕಾಯಕ ಮಾತ್ರವಲ್ಲ ಸಾಹಿತ್ಯ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸುವ ಸದಾಶಯ ಹೊಂದಿದ ಇವರು ಮಾನ್ಯ ಡಿ.ವಿ.ಜಿ.ಯವರ
ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ
ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ
ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ
ತಾಣ ನಿನಗಿಹುದಿಲ್ಲಿ- ಮಂಕುತಿಮ್ಮ.
ಎಂಬ ಮಾತಿನ ಆಶಯದಂತೆ ಇದೀಗ ತಮ್ಮ ದ್ವಿತೀಯ ಕವನಸಂಕಲನವನ್ನು" ಭಾವನಿಧಿ" ಎಂಬ ಹೆಸರಿನಲ್ಲಿ ಪ್ರಕಟಿಸುವ ಮನಸುಮಾಡಿರುವುದು ಶ್ಲಾಘನೀಯ. ಮಂಗಳೂರಿನ ಕಥಾಬಿಂದು ಪ್ರಕಾಶನದ ಹದಿನಾರನೇ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲಿ ಕಥಾಬಿಂದು ಸಾಹಿತ್ಯಮಾಲೆಯ ಮುಖಾಂತರ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಯೋಜನೆಯಡಿಯಲ್ಲಿ ಇವರ "ಭಾವನಿಧಿ" ಹೊರಬರುತ್ತಿರುವುದು ಅತ್ಯಂತ ಯೋಗ್ಯ ಹಾಗೂ ಔಚಿತ್ಯಪೂರ್ಣ. ಅಟ್ಟುಂಬೊಳದಲ್ಲಿ ಮೂಡಿದ ಈ ಭಾವನಿಧಿಯೆಂಬ ಹೆಸರಿನ ಈ ಕಾವ್ಯಕುಸುಮವನ್ನು ಸಹೃದಯರು ಪ್ರಕೃತಿಸಖರಾಗಿ,
ನಲ್ಲೆಯ ಮುಡಿಗೇರಿಸುವ ನಲ್ಲರಾಗಿ, ಭಗವಂತನ ಗುಡಿಗೊಯ್ದು ಅರ್ಪಿಸುವ ಭಕ್ತರಾಗಿ, ಸಂತೆಗೆ ಒಯ್ದು ವಿಕ್ರಯಿಸುವ ಹೂವಳರಾಗಿ ಕಾರ್ಯವೆಸಗಬೇಕಾಗಿದೆ.
ಇವರ ಲೇಖನಿಯಿಂದ ಇನ್ನಷ್ಟು ಕವಿತೆಗಳು ರಚನೆಯಾಗಲಿ, ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಲಿ ಎಂಬ ಆಶಯದೊಂದಿಗೆ,
ನಿಮ್ಮವನೇ ಆದ,
ಪ್ರೊ. ಗಣಪತಿ ಭಟ್, ಕುಳಮರ್ವ.
ಅಧ್ಯಕರು, ಅ.ಭಾ.ಸ.ಪ ಬೆಳ್ತಂಗಡಿ ತಾಲೂಕು
Comments (0)
Post Comment
Report Abuse
Be the first to comment using the form below.