ಕನ್ನಡ ಸಾಹಿತ್ಯ ಲೋಕದಲ್ಲಿ ಕಳೆದ ಎರಡು ದಶಕಗಳಿಂದ ಲೇಖಕರಾಗಿ ಹಾಗೂ ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವಪಿ.ವಿ. ಪ್ರದೀಪ್ ಕುಮಾರ್ ಅವರು ಇದೀಗ ಆಧುನಿಕ ತಂತ್ರಜ್ಞಾನದ ನೆರವಿನಿಂದ ವಿಶಿಷ್ಟ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿರುವ'ಅದಿತಿ' (Aditi) ಎಐ ಚಲನಚಿತ್ರ ಸರಣಿಯ ಬಿಡುಗಡೆ ಹಾಗೂ ಕಿರುನೋಟವನ್ನು ಮಂಗಳೂರಿನ ಪತ್ರಿಕಾ ಭವನದಲ್ಲಿ ನೆರವೇರಿಸಲಾಯಿತು.
ತಮ್ಮ ಕಾಗದದ ಮೇಲಿನ ಕಥೆಗಳು ಹಾಗೂ ಕಲ್ಪನೆಯ ಪಾತ್ರಗಳಿಗೆ ದೃಶ್ಯ ರೂಪ ನೀಡುವ ಉದ್ದೇಶದಿಂದ ಈ ಸರಣಿಯನ್ನು ರೂಪಿಸಲಾಗಿದೆ. ಆರಂಭದಲ್ಲಿ ಎಐ ತಂತ್ರಜ್ಞಾನದ ಬಗ್ಗೆ ಯಾವುದೇ ಪೂರ್ವಾಪರ ಅರಿವಿಲ್ಲದಿದ್ದರೂ, ಸತತ ಅಭ್ಯಾಸ ಹಾಗೂ ನೂರಾರು ಪ್ರಯೋಗಗಳ ಫಲವಾಗಿ ಈ ಕಲ್ಪನೆಗೆ ಜೀವ ಬಂದಿದೆ ಎಂದು ನಿರ್ದೇಶಕ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಈ ಸರಣಿಯ ಪ್ರತಿಯೊಂದು ಎಪಿಸೋಡ್ ಒಟ್ಟು ೬ (ಆರು) ನಿಮಿಷಗಳ ಅವಧಿಯದ್ದಾಗಿರಲಿದ್ದು, ಅದರಲ್ಲಿ ೩ ನಿಮಿಷ ಕಥೆಯ ದೃಶ್ಯರೂಪ ಹಾಗೂ ೩ ನಿಮಿಷ ಪಾತ್ರಗಳ ವಿನ್ಯಾಸದ ವಿವರಣೆ ಇರಲಿದೆ. ಮುಂದಿನ ವಾರದಿಂದ 'ಕಥಾಬಿಂದು ಮಾಧ್ಯಮ' ಯೂಟ್ಯೂಬ್ ಚಾನೆಲ್‌ನಲ್ಲಿ 'ಅದಿತಿ' ಪಾತ್ರದ ಸೃಷ್ಟಿ ಹಾಗೂ ಮೊದಲ ಎಪಿಸೋಡ್ ಪ್ರಸಾರವಾಗಲಿದೆ. ರಹಸ್ಯ ಗಡಿಯಾರವೊಂದರ ಸುತ್ತ ಹೆಣೆದಿರುವ ರೋಮಾಂಚನಕಾರಿ ಕಥಾಹಂದರ ಹೊಂದಿರುವ ಈ ಸಿನಿಮಾ, ಕನ್ನಡ ಚಿತ್ರರಂಗದಲ್ಲೇ ಒಂದು ವಿನೂತನ ಮೈಲಿಗಲ್ಲಾಗುವ ನಿರೀಕ್ಷೆಯಿದೆ.
Comments (0)
Post Comment
Report Abuse
Be the first to comment using the form below.