ಕಾವ್ಯ ಲೋಕಕೆ ತಮ್ಮ ಹೊಸ ಸಂಕಲನದ ಮೂಲಕ ಕಾಲಿಡುತ್ತಿರುವ ಕವಯಿತ್ರಿ ಶ್ರೀಮತಿ ಪೂರ್ಣಿಮಾ ಯಲಿಗಾರ ಅವರು ಸಾಮಾಜಿಕ ಜಾಲತಾಣದ ಕಾವ್ಯ ಸ್ಪರ್ದೆಗಳಲ್ಲಿ ತುಂಬ ಪರಿಚಿತರು. ದಿನಕ್ಕೆ ಒಂದಾದರೂ ಪ್ರಶಸ್ತಿ ಪತ್ರ ಅವರ ಕಾವ್ಯಕ್ಕೆ ಸಂದಿರುವದನ್ನು ತಿಳಿದು ನಾನು ಎಷ್ಟೋ ಸಲ ವಿಸ್ಮಯಗೊಂಡಿದ್ದೇನೆ. .ಇಂದಿನ ಎಳೆಯರು ಅದರಲ್ಲಿಯೂ ಮಹಿಳೆಯರು ಕಾವ್ಯ ಲೋಕದಲ್ಲಿ ಸಕ್ರೀಯರಾಗಿರುವುದು ತುಂಬ ಸಂತೋಷದ ಸಗತಿಯಾಗಿದೆ. ಶಿಕ್ಷಕಿಯೂ ಆಗಿರುವ ಶ್ರೀಮತಿ ಪೂರ್ಣಿಮಾ ಅವರು ಸಮಾಜಿಕ ಏಳ್ಗೆ ತಮ್ಮ ಕವಿತೆಗಳಿಂದ ಆಗಲಿ ಎಂದು ಭಾವಿಸಿದವರು .ಅವರ ಎಲ್ಲ ಕವಿತೆಗಳು ಸಂಸ್ಕಾರವಂತ ಸಮಾಜ ನಿರ್ಮಾಣವಾಗಲಿ ಎಂದು ಬಯಸುತ್ತವೆ. ಧರ್ಮ ದೇವರುಗಳಲ್ಲಿ ಅಚಲ ವಿಶ್ವಾಸ ನಾಡು ನುಡಿ ಗಳಲ್ಲಿ ಅದಮ್ಯ ಹೆಮ್ಮೆ.,ಹಿರಿಯರು, ಗುರುಗಳಲ್ಲಿ ಭಯಭಕ್ತಿ, ಜೀವನದಲ್ಲಿ ಮೌಲ್ಯಗಳು ಇರಲಿ ಎಂದು ನಂಬಿದ ಆಸ್ತಿಕ ಮನಸ್ಸಿನ ತುಂಬ ಸಂವೇದನಾಶೀಲ ಮನಸ್ಸು ಪೂರ್ಣಿಮಾ ಅವರದ್ದು. ತುಂಬು ಕುಟುಂಬದ ಹಿನ್ನೆಲೆ , ಮನೆತನದಲ್ಲಿ ಪತ್ನಿಯಾಗಿ ಜವಾಬ್ದಾರಿ ಪೂರೈಸಿದ ತಾಯಿಯಾಗಿ ಮಕ್ಕಳ ಭವಿಷ್ಯದ ಕಡೆ ಕಣ್ಣು ನೆಟ್ಟಿರುವ ಶಿಕ್ಷಕಿಯಾಗಿ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಶ್ರೀಮತಿ ಪೂರ್ಣಿಮಾರವರ ಕವಿತೆಗಳೆಲ್ಲವೂ ಮೌಲ್ಯದ ಆಗರಗಳಾಗಿರುವದು ತುಂಬ ಸಂತೋಷದ ಸಂಗತಿ. ಇವೆಲ್ಲವೂ ಅಲ್ಲಲ್ಲಿ ಸ್ಪರ್ಧೆಗಾಗಿ ಬರೆದು ಅವರ ಮೆಚ್ಚುಗೆ ಮತ್ತು ಪ್ರಶಸ್ತಿ ಪಡೆದ ಕವಿತೆಗಳು ಭಾವಗೀತೆಗಳು . ಸರಳ ಸುಂದರ ಸಾಮಾಜಿಕ ಆಶಯ ಹೊಂದಿರುವದು ಎದ್ದು ಕಾಣುತ್ತದೆ.
ಶಿಲೆ ಕಡೆದು ಶಿಲ್ಪವಾಗಿಸಿದ ಗುರುವಿಗೊಂದು ನಮನ
ಇವರ ಸಾನಿಧ್ಯದಿ ಆಗುವದು ಸುಜ್ಞಾನದ ಜನನ
ಇಂತಹ ಸಾಲುಗಳನ್ನು ತುಂಬ ಸುಂದರವಾಗಿ ಹೆಣೆಯುವ ಶ್ರೀಮತಿ ಪೂರ್ಣಿಮಾ ಅವರ ಕಾವ್ಯದಲ್ಲಿ ತಾಯಿ, ಸೈನಿಕರು, ರೈತರ ಬದುಕು, ವಿಜ್ಞಾನಿಗಳ ಚಂದ್ರಯಾನ ದ ಬಗೆಗೆ ಹೆಮ್ಮೆ, ಕಾರ್ಮಿಕನ ಬಗೆಗೆ ಅಪಾರ ಕರುಣೆ, ಸೃಷ್ಟಿ ವೈಭವದ ಚಿತ್ರಣ, ಶ್ರಾವಣ ಮಾಸದ ವೈಭವ , ವಿರಹದ ನೋವು ,ದೇಶ ಭಕ್ತಿ, ಸಿದ್ಧಗಂಗೆಯ ಶಿವಕುಮಾರ ಮಹಾಸ್ವಾಮಿಗಳು, ಮಗುವಿನ ನಗು .. ಹೀಗೆ ಹಲವಾರು ವಿಷಯಗಳು ಸುಭಗ ಸುಲಲಿತ ಕವಿತೆಗಳಾಗಿ ಮೂಡಿಬಂದಿವೆ. ಕವಿಯತ್ರಿ ಪದಗಳಿಗಾಗಿ ಎಲ್ಲೂ ಕಷ್ಟಪಟ್ಟಿಲ್ಲ. ತುಂಬ ಸರಾಗವಾಗಿ ಕವಿತೆ ರಚನೆ ಮಾಡಿದ್ದಾರೆ. ಇಲ್ಲಿ ಪ್ರೀತಿಯ ಭಾವವೂ ಕವಿತೆಯಾಗಿ ಪಲ್ಲವಿಸಿದೆ.
ಹೃದಯ ಚಂದ್ರಮ ನೀನಾದೆ
ಪ್ರೀತಿ ಪಲ್ಲವಿಯ ಹೂವಾದೆ
ಎಂದು ತಮ್ಮ ಪ್ರೇಮವನ್ನು ಆರಾಧಿಸುವ ಪೂರ್ಣಿಮಾ ಅವರು ತುಂಬ ಸುಂದರವಾದ ಭಾವಗೀತೆಗಳನ್ನು ಬರೆಯಬಲ್ಲರು. ಕವಿತೆಯಂದರೆ ಯಾವುದೋ ಒಂದು ಸಂದರ್ಭಕ್ಕೆ ಕಟ್ಟು ಬಿದ್ದು ರಚಿಸಲ್ಪಡುವ ರಚನೆ ಮಾತ್ರವಲ್ಲ. ಅದು ಕವಿಯ ಸ್ವಚ್ಛಂದ ಸುಭಗ ಕಲ್ಪನಾ ವಿಲಾಸವಾದಾಗ ತನ್ನ ಎತ್ತರವನ್ನು ಮುಟ್ಟಬಲ್ಲುದು.. ಅವರ ಕವಿತೆ ಈ ಸ್ಪರ್ಧೆಗಳಾಚೆಗೆ ಬೆಳೆಯಲಿ ,ಇನ್ನೂ ಬೇರೆ ಬೇರೆ ಹೊಸ ವಿಷಯಗಳನ್ನು ಕುರಿತು ಅವರ ಕಾವ್ಯ ರಚನೆ ಮಾಡಲಿ ಎಂದು ನಾನು ಹಾರೈಸುತ್ತೇನೆ.
ಡಾ ವೈ.ಎಂ.ಯಾಕೊಳ್ಳಿ
ಕವಿ,ವಿಮರ್ಶಕ
ಸವದತ್ತಿ
Comments (0)
Post Comment
Report Abuse
Be the first to comment using the form below.