(JavaScript required to view this email address)
Mangalore

News & Articles

ಬರೆಯಲು ಬಳಸುವ ಯಾವುದೇ ಸಾಧನವನ್ನು ಲೇಖನಿ ಎನ್ನಬಹುದು. ನಾವು ದಿನದ ಉದ್ದಕ್ಕೂ ಉಪಯೋಗಿಸುವ
ಸಾಧನಗಳಲ್ಲಿ ಲೇಖನಿ ಮುಖ್ಯವಾಗಿದೆ. ಆದ್ದರಿಂದಲೇ ಪೆನ್ನು ಪ್ರತಿಯೊಬ್ಬರ ಕಿಸೆಯಲ್ಲಿ, ಬ್ಯಾಗಿನಲ್ಲಿ ಯಾವಾಗಲೂ ಇರುತ್ತದೆ.
ಮಕ್ಕಳ ಕಂಪಾಸ ಪೆಟ್ಟಿಗೆಯಲ್ಲಿ ಇದು ಇರಲೇ ಬೇಕು.
ಲೇಖನಿಯು ಅಭಿವ್ಯಕ್ತಿಗೆ ಪೂರಕವಾಗುವ ಸಾಧನ. ಎಷ್ಟೋ ಜನರಿಗೆ ಅದು ಅನ್ನ ನೀಡುತ್ತದೆ. ಕಲಾವಿದನಿಗೆ ಕುಂಚ ಹೇಗೋ
ಲೇಖಕನಿಗೆ ಲೇಖನಿ ಸಹಕಾರಿ. ಇತ್ತೀಚೆಗೆ ಕಂಪ್ಯೂಟರ್‌ ನ ಮೊರೆ ಹೋಗಿರುವ ಯುವ ಜನಾಂಗ ಬರವಣಿಗೆಯ
ಆನಂದವನ್ನು ಅನುಭವಿಸುವುದಿಲ್ಲ. ಪೆನ್ನು ಹಿಡಿದು ಬರೆಯಲು ಕುಳಿತಾಗ ತಲೆಯಲ್ಲಿ ಯೋಚನೆಗಳು ಹಂತ ಹಂತವಾಗಿ
ಮೂಡುತ್ತವೆ ಎಂದು ಹೇಳುವವರೂ ಇದ್ದಾರೆ.. ಅದೇ ರೀತಿ, ಲೇಖಕನಿಗೆ ಲಹರಿ ಬಂದಾಗ, ಲೇಖನಿಯು ಸಹಕರಿಸದಿದ್ದರೆ
ಅವನ ಸೃಜನಶೀಲತೆ ಬತ್ತಿ ಹೋಗುವ ಅನುಭವ ಕೆಲವರಿಗಾದರೂ ಆಗದಿರುವುದಿಲ್ಲ. ಆದ್ದರಿಂದ ಚಿಂತನೆಗಳು ತಾರ್ಕಿಕ
ರೂಪು ಪಡೆಯಲು ಲೇಖನಿಯು ಪ್ರೇರಣೆ ನೀಡುತ್ತದೆ.
ನಾನು ಇತ್ತೀಚೆಗೆ ಒಂದು ಸರಕಾರಿ ಕಛೇರಿಗೆ ಹೋಗಿದ್ದೆ. ನನಗೆ ಸಹಿ ಹಾಕಲು ಹೇಳಿದಾಗ ಅವರು ಕೊಟ್ಟ ಲೇಖನಿಯನ್ನು
ಬಳಸದೆ ನನ್ನ ಕಿಸೆಯಿಂದ ಶಾಯಿಯ ಪೆನ್ನು ತೆಗೆದು ಅಚ್ಚುಕಟ್ಟಾಗಿ ಸಹಿ ಹಾಕಿದೆ. ಎದುರಿಗಿದ್ದ ಸಿಬ್ಬಂದಿ ಮುಖವೆತ್ತಿ ನನ್ನ
ಮುಖ ನೋಡಿದರು. “ಶಾಯಿಯ ಪೆನ್ನು ನೋಡಿ ಖುಷಿಯಾಯಿತು” ಎಂದು ಸಂತಸ ವ್ಯಕ್ತಪಡಿಸಿದರು. ಇದು ಅಪರಿಚಿತರಿಂದ
ಒಂದು ಸಕಾರಾತ್ಮಕ ಪ್ರತಿಕ್ರಿಯೆಯಾಗಿತ್ತು. ಹೊಸಬರ ಸ್ನೇಹಕ್ಕೆ ಇದು ಕಾರಣವಾಯಿತು. ಆ ಕಛೇರಿಯಲ್ಲಿ ಅಂದು
ವಿಳಂಬವಿಲ್ಲದೆ ನನ್ನ ಕೆಲಸವಾದದ್ದು ನನ್ನ ಶಾಯಿ ಪೆನ್ನಿನ ಸಾಧನೆ ಎಂದುಕೊಂಡಿದ್ದೇನೆ. ಒಂದು ಎಚ್ಚರಿಕೆಯ ಮಾತು:
ಶಾಯಿ ಪೆನ್ನಿನ ಬಾಯಿ ಸರಿಯಾಗಿ ಮುಚ್ಚದಿದ್ದರೆ ಕಿಸೆ, ಚೀಲ, ಎಲ್ಲೆಂದರಲ್ಲಿ ವಾಂತಿ ಮಾಡಿ ಬಿಡುತ್ತದೆ. ಮುಜುಗುರಕ್ಕೂ
ಕಾರಣವಾಗುತ್ತದೆ!.
ಪ್ರಾಚೀನ, ಅರ್ವಾಚೀನ ಕಾಲದಿಂದ ಇಂದಿನ ವರೆಗೂ ಲೇಖನಿ ಬೆಳೆದು ಬಂದಿರುವ ಬಗೆ ವಿಸ್ಮಯವನ್ನು ಉಂಟು
ಮಾಡುತ್ತಿದೆ. ಹಿಂದಿನ ಕಾಲದಲ್ಲಿ ಹಕ್ಕಿಯ ಗರಿಯನ್ನು ಬಳಸಿ ಅಕ್ಷರಗಳನ್ನು ಬರೆಯುತ್ತಿದ್ದರು. ಕಬ್ಬಿಣದ ನಿಬ್ಬನ್ನು ಶಾಯಿಯಲ್ಲಿ
ಮುಳುಗಿಸಿ ಬರೆಯುವುದು ಮುಂದಿನ ಸುಧಾರಣೆಯಾಯಿತು. ಬರಬರುತ್ತಾ ಶಾಯಿಯ ಪೆನ್ನುಗಳು ಬಳಕೆಗೆ ಬಂದುವು.
ಪೈಲೆಟ್‌ ಪೆನ್ನು ಇನಾಮು ಪಡೆಯುವುದು ಒಂದು ಹೆಮ್ಮೆಯ ವಿಷಯವಾಗಿತ್ತು. ಇತ್ತೀಚೆಗೆ ಬಾಲ್‌ ಪೆನ್ನು, ಜೆಲ್‌ ಪನ್‌,
ಶೈನಿಂಗ್‌ ಪೆನ್ನು, ಮಾರ್ಕರ್‌ ಪೆನ್ನು, ಸ್ಕೆಚ್‌ ಪೆನ್ನು ಮುಂತಾದ ಪ್ರಬೇಧಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದು
ರೂಪಾಯಿಯಿಂದ ಹಿಡಿದು ಸಾವಿರಕ್ಕೂ ದುಬಾರಿಯ ಪೆನ್ನುಗಳು ಲಭ್ಯ. ಉದಾಹರಣೆಗೆ ಸುವರ್ಣ ಪೇರಿತ ʼಕ್ರಾಸ್‌ʼ(cross)
ಪೆನ್ನು ಹೊಂದಿದ್ದಾನಾದರೆ ಅವನ ಹವ್ಯಸವನ್ನು ಮೆಚ್ಚಬೇಕು – ಯಾಕೆಂದರೆ ಅದರ ಕನಿಷ್ಟ ಬೆಲೆ ಸಾವಿರವಾದರೂ ಇರುತ್ತದೆ.
ಆದ್ದರಿಂದ ಪೆನ್ನು ಒಬ್ಬರ ವ್ಯಕ್ತಿತ್ವಕ್ಕೆ ಮೆರುಗು ಕೊಡುವಷ್ಟು ಸಮರ್ಥ ಸಾಧನವಾಗಿದೆ.

ʼಲೇಖನಿಯು ಖಡ್ಗಕ್ಕಿಂತ ಶಕ್ತವಾದದ್ದುʼ ಎಂಬ ಆಡು ಮಾತಿದೆ. ಹೌದು, ಬರಹಗಳ ಅಂತಹ ಸಾಮರ್ಥ್ಯವನ್ನು ನಾವು
ಚರಿತ್ರೆಯ ಉದ್ದಕ್ಕೂ ಕಾಣಬಹುದು. ಲೇಖಕ-ಚಿಂತಕರು ಹುಟ್ಟುಹಾಕಿದ ಎಷ್ಟೋ ಕ್ರಾಂತಿಗಳನ್ನು ನಾವು ನೋಡಿದ್ದೇವೆ.

ಧರ್ಮಗ್ರಂಥಗಳಿಂದ ಹಿಡಿದು ಕ್ರಾಂತಿಕಾರಿ ಸಾಹಿತ್ಯದ ವರೆಗೆ, ಕಾವ್ಯಗಳಿಂದ ಹಿಡಿದು ಪ್ರಭಾವೀ ಕೃತಿಗಳ ವರೆಗೆ ಈ ವ್ಯಾಪ್ತಿ
ಹರಡಿದೆ. ಲೇಖನಿಗೆ ಅಂತಹ ಬಲವೆಲ್ಲಿಂದ ಬಂತು ಎಂದು ಅಚ್ಚರಿ ಪಡುವವರೂ ಇದ್ದಾರೆ.
ಶಾಯಿ ಪೆನ್ನುಗಳು ಪರಿಸರ ಸ್ನೇಹಿ ಎಂಬುದು ಒಂದು ಗುಣವಿ಼ಶೇಷವಾದರೆ ನಮ್ಮ ಅಕ್ಷರಗಳ ಗುಣಮಟ್ಟ ಮತ್ತು ವೈಶಿಷ್ಟ್ಯತೆ
ಕೆಡದಿರುವುದು ಇನ್ನೊಂದು ಹೆಚ್ಚುಗಾರಿಕೆ. ಪೆನ್ನಿನ ನಿಬ್ಬು ಚೆನ್ನಾಗಿರುವಷ್ಟು ಕಾಲ ಅಕ್ಷರಗಳ ಹರಿವು ನಿರರ್ಗಳ. ಇಂದಿನ
ಇತರ ತರದ ಪೆನ್ನುಗಳು ʻಉಪಯೋಗಿಸು-ಬೀಸಾಡುʼ ರೂಪದವುಗಳು. ಇದು ಪ್ಲಾಸ್ಟಿಕಿನ ಕಸಯನ್ನು ಹೆಚ್ಚಿಸುವುದು ಮತ್ತು
ಒಂದು ರೀತಿಯ ಕಿರಿಕಿರಿಗೂ ಕಾರಣವಾಗುತ್ತದೆ. ಮಕ್ಕಳಿಗೆ ಈ ಪೆನ್ನುಗಳನ್ನು ಕೊಟ್ಟರೆ ಅಕ್ಷರಗಳು ವಕ್ರವಕ್ರವಾಗುತ್ತವೆ
ಎಂದು ಪಾಲಕರ ಅಭಿಪ್ರಾಯ. ಸ್ಟೇಷನರಿ ಅಂಗಡಿಗೆ ಹೋದರೆ ಲೇಖನಿಗಳು ಗಮನ ಸೆಳೆಯುವಂತೆ ಎದುರಿಗೇ
ಇಟ್ಟಿರುತ್ತಾರೆ. ಅವುಗಳ ಚಂದ ಮತ್ತು ಲಾಲಿತ್ಯವನ್ನು ನೋಡಿಯೇ ಅದು ಕೊಳ್ಳುಗರನ್ನು ಆಕರ್ಷಿಸುತ್ತವೆ. ಅವುಗಳ ಆಕಾರ,
ವಿನ್ಯಾಸ, ಬಣ್ಣ ಎಲ್ಲವೂ ಕೊಳ್ಳುಗರ ಆಯ್ಕೆಯನ್ನು ನಿರ್ಧರಿಸುತ್ತವೆ.
ಲೇಖನಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನಬಹುದುದಾದ ಸಾಧನ. ತನ್ನಿಂದಲೇ ಬರಹವಾಗುತ್ತದೆ ಎನ್ನುವ
ಅಹಂಕಾರ ಅದಕ್ಕಿಲ್ಲ. ಅದನ್ನು ಹಿಡಿದವನ ಮನವನ್ನಷ್ಟೇ ಅದು ವ್ಯಕ್ತಪಡಿಸುತ್ತದೆ. ಮಾಲಿಕ ಹೇಳಿದಂತೆ ಬರೆಯುತ್ತದೆ, ಸಹಿ
ಹಾಕುತ್ತದೆ. ಸಹಿಯ ಹೆಚ್ಚುಗಾರಿಕೆ ಎಲ್ಲರಿಗೂ ಗೊತ್ತಿರುವಂಥದ್ದೇ. ಲೇಖನಿ ಬಿಟ್ಟು ಹೋಗಿದ್ದರೆ, ನಾವು ಹೊರಟ ಕೆಲಸಗಳು
ಪರಾವಲಂಬಿಯಾಗುತ್ತದೆ ಮತ್ತು ತಡವಾಗುತ್ತದೆ. ಆದ್ದರಿಂದ ಹೊರಗೆ ಹೊರಡುವಾಗ ಲೇಖನಿ ಒಯ್ಯಲು ಮರೆಯಬೇಡಿ. !
ಲೇಖನಿಯೆಂಬ ಸಂಗಾತಿ.
ಡಾ ಕೊಳ್ಚಪ್ಪೆ ಗೋವಿಂದ ಭಟ್‌
ಮಂಗಳೂರು 7045353049
ಲೇಖನಿಯೆಂಬ ಸಂಗಾತಿ.
ಲೇಖನಿಯೆಂಬ ಸಂಗಾತಿ.

Comments (0)




Be the first to comment using the form below.