ಕರ್ನಾಟಕ ಸಂಘ ಖಾರ್ಘರ್ ನ ಸ್ಥಾಪನಾ ದಿವಸ ಹಾಗೂ ಸರ್ವಸದಸ್ಯರ ಸಭೆಯ ಜೊತೆಗೆ ಸಂಘದ ಸದಸ್ಯೆಯಾದ ಶ್ರೀಮತಿ ರಶ್ಮಿಭಟ್ ರವರ ಮೊದಲ ಕವನ ಸಂಕಲನ ಭಾವದ ಹೊನಲುಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖಾರ್ಘರ್ ನ ಸಾಯಿಲೀಲಾ ಬ್ಯಾಂಕ್ವೆಟ್ ಹಾಲ್ ನಲ್ಲಿ ದಿನಾಂಕ 10-09-2023ರಂದು ಸಂಜೆ ನಡೆದ ಈ ಕಾರ್ಯಕ್ರಮವನ್ನು ಶ್ರೀಮತಿ ಸುಮತಿ ಅರುಣ್ ಕುಮಾರ್ ನಿರೂಪಿಸಿದರು. ಸಂಘದ ಅಧ್ಯಕ್ಷ ಶ್ರೀ ಯೋಗೀಂದ್ರಮ್ ಕೊಟಾರಿ, ಗೌರವಾಧ್ಯಕ್ಷೆ ಶ್ರೀಮತಿ ನಳಿನಿ ಪ್ರಸಾದ್, ಕಾರ್ಯದರ್ಶಿ ಶ್ರೀ ಶೈಲೇಶ್ ಪುತ್ರನ್ ಹಾಗೂ ಶ್ರೀಮತಿ ರಶ್ಮಿ ಭಟ್ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಆಶಾ ಪೂಜಾರಿಯವರು ಕವಯಿತ್ರಿಯ ಪರಿಚಯ ಮಾಡಿದರು. ಶ್ರೀ ಯೋಗೀಂದ್ರಮ್ ಕೊಟಾರಿ ಮತ್ತು ಶ್ರೀಮತಿ ನಳಿನಿ ಪ್ರಸಾದ್ ಪುಸ್ತಕ ಬಿಡುಗಡೆ ಮಾಡಿದರು. ಕಲಾವಿದೆ ಹಾಗೂ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯೂ ಆಗಿರುವ ನಳಿನಿ ಪ್ರಸಾದ್ ರವರು ಪುಸ್ತಕದ ಪರಿಚಯ ಮಾಡಿ ಮಾತನಾಡಿದರು.“ಸಾಹಿತ್ಯದಲ್ಲಿ ಕವನದ ಪ್ರಕಾರ ಅರ್ಥೈಸಿಕೊಳ್ಳಲು ಕಷ್ಟವಾದ ಪ್ರಕಾರ ಎನ್ನುವುದು ಸಾಮಾನ್ಯ ಅಭಿಪ್ರಾಯ. ಆದರೆ ರಶ್ಮಿಯವರ ಶೈಲಿ ಬಹಳ ಸರಳವಾಗಿದ್ದು, ಸಾಮಾನ್ಯ ಓದುಗನಿಗೂ ನಿಲುಕುವಂತಿವೆ. ಈ ಕವನಗಳು ಕವಯಿತ್ರಿಯ ಭಾವನೆಗಳನ್ನು ಓದುಗನ ಮುಂದೆ ತೆರೆದಿಡುತ್ತವೆ. ಕವನ ಸಂಕಲನಕ್ಕೆ ಮುನ್ನಡಿಯನ್ನು ಆತ್ಮೀಯರಾದ ಡಾ. ದಾಕ್ಷಾಯಣಿ ಯಡಹಳ್ಳಿಯವರು ಬರೆದಿದ್ದಾರೆ ಹಾಗೂ ಬೆನ್ನುಡಿಯನ್ನು ಮಿತ್ರರಾದಂತಹ ಡಾ.ಕೊಳ್ಚಪ್ಪೆ ಗೋವಿಂದ ಭಟ್ಟರು ಬರೆದಿದ್ದಾರೆ. ರವಿ ಕಾಣದ್ದನ್ನು ಕವಿ ಕಂಡ ಎನ್ನುವಂತೆ, ಇದ್ದದ್ದರಲ್ಲಿ ವಿಶೇಷತೆಯನ್ನು ಗ್ರಹಿಸುವ ಕಲ್ಪನಾಶಕ್ತಿ ಇವರ ಕವನಗಳಲ್ಲಿ ಕಂಡು ಬರುತ್ತದೆ. ಈ ಕವನಗಳಲ್ಲಿ ಆಕ್ರೋಶವಿದೆ, ಪ್ರಕೃತಿಯನ್ನು ಆರಾಧಿಸುವ ತನ್ಮಯತೆ ಇದೆ, ಪ್ರೀತಿ, ಶೃಂಗಾರ ರಸವೂ ಇದೆ. ಈ ರೀತಿ ನವರಸಭಾವಗಳಿಂದ ಕೂಡಿರುವ ವೈವಿಧ್ಯಮಯ ಕವನಗಳ ಓದು ಒಳ್ಳೆಯ ಅನುಭವವನ್ನು ನೀಡುತ್ತದೆ. ಹೆಣ್ಣಿನ ಬವಣೆಗಳು, ಸಾಂಸಾರಿಕ ಬಂಧನಗಳ ಬಗ್ಗೆ ಬರೆದಿರುವ ಕವನಗಳು ದುಃಖವನ್ನು ವ್ಯಕ್ತ ಪಡಿಸಿದರೂ, ಸಕಾರಾತ್ಮಕವಾಗಿ ಕೊನೆಗೊಳ್ಳುತ್ತವೆ. ದೇಶ-ನಾಡಿನ ಬಗೆಗಿನ ಕವನಗಳ ಜೊತೆಗೆ ಮುದ್ದಾದ ಎರಡು ಶಿಶುಗೀತೆಗಳೂ ಇವೆ. ಆಸೆಯೇ ದುಃಖಕ್ಕೆ ಮೂಲ ಎನ್ನುವ ಕವನ ಜಡೆಕವನದ ಪ್ರಕಾರದಲ್ಲಿರುವ ಒಂದು ವಿಶೇಷ ಪ್ರಯತ್ನ. ರಶ್ಮಿಯವರಿಗೆ ಹಾಡುವ ಹವ್ಯಾಸ ಇರುವುದರಿಂದಲೋ ಏನೋ, ಈ ಕವನಗಳು ಹಾಡುವಿಕೆಗೂ ಒಗ್ಗಿಕೊಳ್ಳುವಂತಿವೆ. ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯಿಂದ ನಮಗೆಲ್ಲ ಪರಿಚಿತರಾದ ರಶ್ಮಿಯವರಿಗೆ ಅವರ ಚೊಚ್ಚಲ ಕವನ ಸಂಕಲನದ ಬೀಡುಗಡೆಯ ಸಂದರ್ಭದಲ್ಲಿ ಅಭಿನಂದನೆಗಳನ್ನು ತಿಳಿಸುತ್ತಾ, ಅವರು ಸಾಹಿತ್ಯಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸುತ್ತೇನೆ.”ಎಂದು ಪುಸ್ತಕದ ಓದಿನ ತಮ್ಮ ಅನುಭವವನ್ನು ಹಂಚಿಕೊಂಡರು.
Comments (0)
Post Comment
Report Abuse
Be the first to comment using the form below.