(JavaScript required to view this email address)
Mangalore

About

Kathabindu Prakashana - About
ಕಥಾಬಿಂದು ಸಂಸ್ಥೆಯು 2007 ರಲ್ಲಿ ಪಿ.ವಿ. ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಆರಂಭಗೊಂಡು ಕಥಾಬಿಂದು ಪ್ರಕಾಶನ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕಥಾಬಿಂದು ಗ್ರಾಫಿಕ್ಸ್, ಕಥಾಬಿಂದು ಯೂಟ್ಯೂಬ್, ಹೀಗೆ ಹಲವಾರು ವಿಭಾಗಗಳಲ್ಲಿ ಯಶಸ್ವಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದೆ ಹಾಗೂ ಒಂದು ಅತ್ಯುತ್ತಮ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. 

ಪ್ರತಿವರ್ಷ ಮಂಗಳೂರಿನಲ್ಲಿ ವಾರ್ಷಿಕೋತ್ಸವವನ್ನು ನೆರವೇರಿಸಿ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯಕ್ರಮಗಳ ಜೊತೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಥಾಬಿಂದು ಸಂಸ್ಥೆಯು ತನ್ನನ್ನು ತಾನು ತೊಡಗಿಸಿಕೊಂಡಿದೆ. ಕಥಾಬಿಂದು ಪ್ರಕಾಶನ ಇದುವರೆಗೂ ಸುಮಾರು ನೂರಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಇನ್ನೂ ಹಲವಾರು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.

ಕಥಾಬಿಂದು ಬಗ್ಗೆ ಪಿ.ವಿ. ಪ್ರದೀಪ್ ಕುಮಾರ್ ಅವರ ಮಾತುಗಳು:

ನನ್ನ ಬಗ್ಗೆ ನಾನು ಹೇಳಿಕೊಳ್ಳಬೇಕು ಅಂದರೆ ಅದೊಂದು ಥ್ರಿಲ್ ಕಾದಂಬರಿಯ ರೀತಿಯಲ್ಲಿಯೇ ಇದೆ. ನಾನು ಹತ್ತನೇ ತರಗತಿಯ ವ್ಯಾಸಂಗ ಮುಗಿಸಿದಾಗಲೇ ನನ್ನ ಮುಂದೆ ಕನಸಿನ ಮಹಲೇ ಇತ್ತು. ಆ ಮಹಲಿನ ಜೊತೆಗೆ ನಾನು ಓದುತ್ತಿರುವಾಗಲೇ ಹಲವಾರು ಕಾದಂಬರಿಯನ್ನು ಓದಿದ್ದೇನೆ. ಅದನ್ನು ಸಂಖ್ಯೆಯಲ್ಲಿ ಹೇಳಬೇಕೆಂದರೆ ಸುಮಾರು ಒಂದು ಸಾವಿರ ಪುಸ್ತಕಗಳಾಗಬಹುದು. ಯಂಡಮೂರಿ ವೀರೇಂದ್ರನಾಥ್ ನನ್ನ ನೆಚ್ಚಿನ ಲೇಖಕರು. ಅವರ ಅಷ್ಟೂ ಪುಸ್ತಕಗಳನ್ನು ಓದಿದ್ದೇನೆ. ಇನ್ನು ಸಾಯಿಸುತೆ, ತ. ರಾ. ಸು, ರವರ ‘ದುರ್ಗಾಸ್ತಮಾನ’ ಕೃತಿ ಓದಿ ಅದರ ಗುಂಗಿನಲ್ಲಿ ಅದೆಷ್ಟೋ ದಿನ ಇದ್ದೆ. ಇನ್ನು ಸುದರ್ಶನ ದೇಸಾಯಿ ಅವರ ಪುಸ್ತಕಗಳನ್ನು ಓದಿದ್ದಲ್ಲದೆ ಇವರಂತೆ ನಾನಾಗಬೇಕು ಎಂದು ಕನಸು ಕಂಡಿದ್ದೆ.

ಆದರೆ ಮುಂದೊಂದು ದಿನ ಮಂಗಳ ವಾರಪತ್ರಿಕೆಯಲ್ಲಿ ಲೇಖಕರ ಭೇಟಿಯ ಸಂದರ್ಭದಲ್ಲಿ ನನ್ನ ಕರೆಸಿದಾಗ ಅಲ್ಲಿ ನನಗೆ ಸುದರ್ಶನ ದೇಸಾಯಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಅವರನ್ನು ನಾನು ಭೇಟಿಯಾದಾಗ ಮೊದಲು ಅವರು ಹೇಳಿದ ಮಾತು ಇನ್ನೂ ನನ್ನ ಕಿವಿಯಲ್ಲಿ ಹಾಗೆಯೇ ಇದೆ. ಅವರು ಅದಾಗಲೆ ನನ್ನ ಕೃತಿಯನ್ನು ಓದಿದ್ದರು. “ನಿಮ್ಮ ಭೇಟಿಯಾಗಿದ್ದು ಸಂತೋಷವಾಯ್ತು. ನೀವಿನ್ನೂ ಯುವಕರು. ನಿಮ್ಮ ಕೃತಿಯ ರಚನೆ ತುಂಬಾ ಚೆನ್ನಾಗಿದೆ. ನಾನು ಓದಿದ್ದೇನೆ ನನ್ನ ಮಕ್ಕಳು ಓದಿ..... ಅವರು ನಿಮ್ಮ ಅಭಿಮಾನಿಗಳಾಗಿ ಬಿಟ್ಟಿದ್ದಾರೆ..... ಇನ್ನು ನೀವು ಏನಾದರೂ ಸಾಧಿಸಬಹುದು..” ಇದಕ್ಕಿಂತಲೂ ಪ್ರಶಸ್ತಿ ಬೇಕಾ? ಇನ್ನು ನಾನು ಸಾಹಿತ್ಯ ಕ್ಷೇತ್ರಕ್ಕೆ ಹೇಗೆ ಬಂದೆ ಎನ್ನುವುದನ್ನು ವಿವರಿಸುತ್ತೇನೆ. ೧೯೮೩ ಏಪ್ರಿಲ್ ತಿಂಗಳಿನಲ್ಲಿ ನನ್ನ ಸಾಹಿತ್ಯ ಯಾತ್ರೆ ಏನೋ ಪ್ರಾರಂಭವಾಯ್ತು. ಅದು ಪಾರ್ಕಿನ ಕಲ್ಲುಬೆಂಚಿನ ಮೇಲೆ ಕುಳಿತು ಪ್ರಪ್ರಥಮವಾಗಿ ನಾನು ಲೇಖನಿಯನ್ನು ಹಿಡಿದು ಬರೆಯಲು ಪ್ರಾರಂಭಿಸಿದ ಕಾದಂಬರಿ ‘ರಹಸ್ಯ ಗುಂಪು’. ಈ ಪುಸ್ತಕ ಬರೆಯುವಾಗ ಇದ್ದ ಉತ್ಸಾಹ ಬರೆದು ಮುಗಿದ ಮೇಲೂ ಇತ್ತು. ಆದರೆ ಅದನ್ನು ಪ್ರಕಟಿಸುವಾಗ ನನ್ನ ಉತ್ಸಾಹ ಉಡುಗಿ ಹೋಯ್ತು. ನಾನು ಕಾದಂಬರಿ ಬರೆಯುತಿದ್ದಾಗ ಪತ್ತೇದಾರಿ ಕಾದಂಬರಿಗೆ ಒಂದು ರೀತಿ ಪರ್ವಕಾಲವೆಂದೇ ಹೇಳಬಹುದು. ೧೯೮೦ ರ ಸುಮಾರಿನಲ್ಲಿ ಯುವಕ, ಯುವತಿಯರ ಮುಖ್ಯ ಹವ್ಯಾಸ ಕಾದಂಬರಿಯನ್ನು ಓದುವುದಾಗಿತ್ತು. ಆಗ ಹೆಚ್ಚು ಓದುಗರು ಇದ್ದಿದ್ದು ಈ ಪತ್ತೇದಾರಿ ಪುಸ್ತಕಕ್ಕೆ. ಹಾಗಾಗಿ ನಾನು ಪತ್ತೇದಾರಿ ಕಾದಂಬರಿಯನ್ನು ಬರೆದು ದಿನ ಬೆಳಗಾಗುವುದರಲ್ಲಿ ಪ್ರಖ್ಯಾತಿಯನ್ನು ಹೊಂದಬೇಕು ಎನ್ನುವ ಕನಸನ್ನು ಕಂಡಿದ್ದು ನಿಜ. ಆದರೆ ನನ್ನ ಕನಸು ಭಗ್ನಗೊಳ್ಳಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಕೆಲವೇ ದಿನಗಳಲ್ಲಿ ಆ ಉತ್ಸಾಹ ಉಡುಗಿ ಹೋದದ್ದರಿಂದ ನಾನು ೧೭ವರ್ಷಗಳ ಕಾಲ ಲೇಖನಿಯನ್ನು ಹಿಡಿಯುವುದನ್ನೇ ಮರೆತು ಹೋದೆ. ೧೯೮೫ರಲ್ಲಿ ಬಿಟ್ಟ ಲೇಖನಿಯನ್ನು ಮತ್ತೆ ಹಿಡಿದದ್ದು ೨೦೦೨ರ ಸೆಪ್ಟೆಂಬರ್ ಹತ್ತರಂದು. ಅಂದರೆ ಸರಿ ಸುಮಾರು ಹದಿನೇಳು ವರ್ಷಗಳು ಬರೆದಿದ್ದರೆ ಇನ್ನೆಷ್ಟು ಅದ್ಭುತ ಕಾದಂಬರಿಗಳು ಸೃಷ್ಠಿಯಾಗುತ್ತಿದ್ದವೋ ಗೊತ್ತಿಲ್ಲ. ಅದರ ಬಗ್ಗೆ ನನಗೆ ಈಗಲೂ ಪಶ್ಚಾತ್ತಾಪ ಇದೆ. ಇನ್ನು ಮುಂದೆಯೂ ಇರುತ್ತದೆ. ನಾನು ಮತ್ತೆ ಲೇಖನಿಯನ್ನು ಹಿಡಿದ ಈ ದಿನ ಭಾದ್ರಪದ ಚೌತಿಯ ಶುಭದಿನದಂದು. ಆ ವಿನಾಯಕನ ಪ್ರೇರಣೆಯಾಯಿತೋ ಅಥವಾ ನನ್ನ ಮಡದಿ ಸುನೀತಾಳ ಸ್ಫೂರ್ತಿಯಿಂದಲೋ ಗೊತ್ತಿಲ್ಲ. ಅಂತೂ ಅದೊಂದು ದಿನ ಹಿಡಿದ ಲೇಖನಿ ನನ್ನ ಬೆರಳುಗಳಲ್ಲಿಯೇ ಪ್ರತಿಷ್ಠಾಪಿಸಿದ ಹಾಗಾಗಿ ಹೋಗಿದೆ. ಲೇಖನಿಯನ್ನು ನಾನು ಬಿಟ್ಟರೂ ಅದು ನನ್ನನ್ನು ಬಿಡುವುದಿಲ್ಲ. ಅಲ್ಲಿಂದ ಸಾಲು ಸಾಲು ಕಾದಂಬರಿಗಳು. ಒಂದೇ ಎರಡೇ ಲೆಕ್ಕ ಹಾಕುತ್ತಾ ಹೋದರೆ ಸುಮಾರು ಐವತ್ತು ದಾಟಿ ನೂರನ್ನು ಮುಟ್ಟುತ್ತದೆಯೇನೋ ಗೊತ್ತಿಲ್ಲ.

ಈ ನಡುವೆ ನಾನು ‘ಕಥಾಬಿಂದು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದೆ. ಅದು ೨೪.೦೪.೨೦೦೭ರಂದು. ಅಂದು ಹುಟ್ಟುಹಾಕಿದ ಈ ಸಂಸ್ಥೆಯ ಪ್ರಾರಂಭದ ದಿನವೇ ಅದರ ಕೊನೆಯ ದಿನ ಕೂಡ ಆಗುತ್ತಿತ್ತು. ಆದರೆ ನನಗೆ ಅದರ ಕೊನೆಯ ದಿನ ಆಗಲು ಇಷ್ಟವಿರಲಿಲ್ಲ ನನ್ನಲಿದ್ದ ಕನಸು ಏನೆಂದರೆ ನನ್ನ ನಂತರವೂ ಈ ಸಂಸ್ಥೆ ಮುಂದುವರಿಯಬೇಕು ಎನ್ನುವ ಕನಸು. ನನ್ನ ನಂತರದ ವಿಚಾರ ಹಾಗಿರಲಿ. ಒಂದೆರಡು ವರ್ಷಗಳಾದರೂ ಈ ಸಂಸ್ಥೆ ಮುಂದುವರಿದರೆ ಸಾಕು ಎನ್ನುವ ಆಸೆ ಇತ್ತು. ಇದು ಸುಲಭದ ಕನಸಲ್ಲ. ಕನಸು ಕಾಣಲು ಸುಂದರವಾಗಿರುತ್ತದೆ. ಆದರೆ ಅದನ್ನು ನನಸು ಮಾಡಲು ಶಕ್ತಿ, ಯುಕ್ತಿ ಎಲ್ಲವೂ ಬೇಕು. ಇಲ್ಲಿ ಶಕ್ತಿ ಅಂದರೆ ತೋಳ್ಬಲ ಅಲ್ಲ. ಹಣ ಬಲ, ಜನ ಬಲ ಮತ್ತು ಬುದ್ಧಿಶಕ್ತಿ. ಆದರೆ ವಿಪರ್ಯಾಸ ನೋಡಿ ನನ್ನಲ್ಲಿ ಬುದ್ಧಿಶಕ್ತಿ ಬಿಟ್ಟರೆ ಮತ್ತೆ ಯಾವ ಶಕ್ತಿಯೂ ಇಲ್ಲ. ಹಣ ಬಲವಂತೂ ಕೇಳಲೇಬೇಡಿ. ನನ್ನ ಮನೆಯ ಜೀವನ ನಡೆಯುತ್ತಿದ್ದದ್ದೆ ಸಣ್ಣ ಒಂದು ಪೆಟ್ಟಿಗೆ ಅಂಗಡಿಯ ವ್ಯಾಪಾರದಿಂದ. ಅಲ್ಲಿ ಲಾಭ ಹೆಚ್ಚೆಂದರೆ ತಿಂಗಳಿಗೆ ಒಂದು ನಾಲ್ಕು ಸಾವಿರದಿಂದ ಹತ್ತು ಸಾವಿರದ ಒಳಗೆ. ಈ ಸ್ವಲ್ಪ ಹಣ ಮನೆಯ ನಿರ್ವಹಣೆಗೆ ಆಗುತ್ತಿತ್ತು. ಇನ್ನು ಸಾಹಿತ್ಯ ಸೇವೆಗೆ ಎಲ್ಲಿಂದ ತರಲಿ? ಅದು ನಮ್ಮಂತವರಿಗೆ ಅಲ್ಲವೇ ಅಲ್ಲ ಎಂದು ನಾನು ಅದರ ಚಿಂತೆಯನ್ನು ಬಿಟ್ಟು ಬಿಟ್ಟಿದ್ದೆ. ಆದರೂ ಎಲ್ಲೋ ಒಂದು ಕಡೆ ಮುಂದೊಂದು ದಿನ ನನ್ನ ಕೃತಿಗಳು ಪ್ರಕಟವಾಗಿ ಓದುಗರು ಮೆಚ್ಚಿ ನನ್ನ ಹಸ್ತಾಕ್ಷರವನ್ನು ಪಡೆದುಕೊಳ್ಳಲು ಬರುತ್ತಾರೆ ಎಂದು ಕನಸು ಕಾಣುತ್ತಲೇ ಇದ್ದೆ. ಕನಸು ಕಾಣಲು ಯಾವುದೇ ಸುಂಕ ಕೊಡಬೇಕಾಗಿಲ್ಲ ಬಿಡಿ, ಸುಂಕವಿಲ್ಲದೆ ಉಚಿತವಾಗಿ ಸಿಗುವ ಮನರಂಜನೆ ಅಂದರೆ ಅದು ಕನಸು ಕಾಣುವುದು ಮಾತ್ರ. ಹಾಗಾಗಿ ನಾನು ಕನಸು ಕಾಣುತ್ತಿದ್ದೆ. ಆ ಸಮಯಕ್ಕೆ ‘ಮಂಗಳ’ ವಾರಪತ್ರಿಕೆಯಲ್ಲಿ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದಾಗ ನನ್ನ ಕನಸಿಗೆ ಮತ್ತೆ ಬೇರು, ಬಳ್ಳಿ, ಟಿಸಿಲು ಕಾಣಿಸಿಕೊಂಡಿತು. ಆ ಕನಸಿನ ಸಾಕಾರವೇ ‘ಮೃದುಲಳ ಡೈರಿ’. ಹಗಲೆಲ್ಲ ಅಂಗಡಿಯಲ್ಲಿ ವ್ಯಾಪಾರ ಮಾಡಿ ರಾತ್ರಿ ಹತ್ತರಿಂದ ಹನ್ನೊಂದರ ಮಧ್ಯದಲ್ಲಿ ಕುಳಿತು ಬರೆದು ಓದುಗರಿಂದ ಅದ್ಭುತ ಕಾದಂಬರಿ ಎಂದು ಕರೆಸಿಕೊಂಡ ಕಾದಂಬರಿ ಎನ್ನುವುದು ಈಗ ಇತಿಹಾಸವಾಗಿ ಉಳಿದುಕೊಂಡಿದೆ. ಆ ನಂತರ ‘ಬಾಳೇ ತೂಗುಯ್ಯಾಲೆ’ ‘ಮರಣ ಶಾಸನ’ ‘ಚಂಡಮಾರುತ’ ‘ರಣವೀಳ್ಯ’ಹೀಗೆ ಸಾಲು ಸಾಲು ಕಾದಂಬರಿಗಳ ಅಕ್ಷರದ ಮೆರವಣಿಗೆಯನ್ನು ನಾಡಿನ ಹೆಸರಾಂತ ಪತ್ರಿಕೆಗಳಾದ ಮಂಗಳ, ಸುಧಾ, ತರಂಗ, ಕರ್ಮವೀರ, ರಾಗಸಂಗಮ, ಹಂಸರಾಗ, ಕ್ರೈಂ, ಥ್ರಿಲ್ ಹೀಗೆ ಎಲ್ಲ ಪತ್ರಿಕೆಗಳಲ್ಲಿಯೂ ಈ ಅಕ್ಷರಗಳ ಮೆರವಣಿಗೆಯನ್ನು ಬಹು ವಿಜೃಂಭಣೆಯಿಂದ ಮಾಡಿಬಿಟ್ಟೆ.

ಈ ಮೆರವಣಿಗೆಯನ್ನು ಮಾಡುತ್ತಿರುವಾಗಲೇ ಹುಟ್ಟಿದ್ದು ‘ಕಥಾಬಿಂದು’ ಸಂಸ್ಥೆ. ೨೪. ೦೪. ೨೦೦೭ ರಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದು ಅಧಿಕೃತವಾಗಿ ಈ ಸಂಸ್ಥೆಯ ಹುಟ್ಟನ್ನು ಘೋಷಿಸಿದೆ. ಆದರೆ ಅಲ್ಲಿಂದ ನಂತರ ಈ ಸಂಸ್ಥೆಯನ್ನು ಮುನ್ನಡೆಸಲು ಕಷ್ಟವಾಯ್ತು. ನಾನು ಮೊದಲೇ ಹೇಳಿದೆನಲ್ಲ ನನ್ನಲ್ಲಿ ಹಣಬಲವಾಗಲಿ, ಜನಬಲವಾಗಲಿ ಇಲ್ಲವೆಂದು. ಹಾಗೆ ಯಾವುದೂ ಇಲ್ಲದ ನಾನು ಈ ಸಂಸ್ಥೆಯನ್ನು ಹೇಗೆ ನಡೆಸಲಿ? ಎನ್ನುವ ಯೋಚನೆ ಇರುವಾಗ ನನ್ನ ನೆರವಿಗೆ ಬಂದವರು ಕರ್ಮವೀರ ಪತ್ರಿಕೆಯ ಸಂಪಾದಕರಾದ ಶ್ರೀ ಬಾಬು ಕೃಷ್ಣಮೂರ್ತಿಯವರು. ಅವರು ಅಂದು ಫೋಟೋಕಾಮಿಕ್ಸ್ ಕೇಳಿ ಪಡೆದುಕೊಂಡಿದ್ದರಿಂದ ನನ್ನ ಕಥಾಬಿಂದು ಸಂಸ್ಥೆಯು ಅಂಬೆಗಾಲು ಹಾಕಲು ಸಾಧ್ಯವಾಯ್ತು. ಆಗ ಪ್ರಕಟವಾದ ಫೋಟೋಕಾಮಿಕ್ಸ್ಗಳು ಎರಡು. ಮರೀಚಿಕೆ ಮತ್ತು ಅಭೇದ್ಯ ಆನಂತರ ಸುಮಾರು ಒಂದು ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಯಾವುದೇ ಚಟುವಟಿಕೆಯೂ ನಡೆಯಲಿಲ್ಲ. ಹೇಗಾದರೂ ಮಾಡಿ ಚಟುವಟಿಕೆಯನ್ನು ಮುನ್ನಡೆಸಬೇಕು ಎಂದು ಯೋಚಿಸಿದಾಗ ‘ವೀರಯೋಧ’ ಎನ್ನುವ ಸೈನಿಕರ ಸಾಹಸವನ್ನು ಆಧಾರವಾಗಿಟ್ಟುಕೊಂಡು ಚಿತ್ರಿಸಿದ ಧಾರಾವಾಹಿ ದೂರದರ್ಶನ ಚಂದನದಲ್ಲಿ ಪ್ರಸಾರವಾಗಿ ಮತ್ತೆ ಕೆಲವು ಸಮಯ ಚಾಲ್ತಿಯಲ್ಲಿರುವಂತಾಯ್ತು. ನಂತರ ಮತ್ತೆ ಒಂದು ವರ್ಷಗಳ ಕಾಲ ಯಾವುದೇ ಚಟುವಟಿಕೆ ಇಲ್ಲ. ನಾನು ಕೂಡ ಈ ಸಾಹಿತ್ಯ ಕಾರ್ಯಕ್ರಮದಿಂದ ಹೊಟ್ಟೆ ತುಂಬುವುದಿಲ್ಲ ಎಂದು ಬೆಂಗಳೂರನ್ನು ಸೇರಿಬಿಟ್ಟೆ. ಆ ನಂತರವಂತೂ ಉಸಿರು ಎಳೆಯುವುದಕ್ಕೆ ತುಂಬಾ ಕಷ್ಟಪಟ್ಟಿತು ಈ ಸಂಸ್ಥೆ. ಉಸಿರು ಎಳೆಯುವುದಕ್ಕೆ ಕಷ್ಟಪಡುತ್ತಿರುವ ‘ಕಥಾಬಿಂದು’ಗೆ ಮರು ಜೀವ ತುಂಬಿದವರು ದಿ. ಎಂ. ಜೆ. ರಾವ್. ಅವರ ಸಲಹೆಯಂತೆ ನಾನು ೨೪. ೦೭. ೨೦೧೧ರಂದು ೪ನೇ ವಾರ್ಷಿಕೋತ್ಸವವನ್ನು ಆಚರಿಸುವ ಮೂಲಕ ‘ಕಥಾಬಿಂದು’ ಎನ್ನುವ ನಾಲ್ಕುವರೆ ಅಕ್ಷರದ ನಾಲ್ಕು ವರ್ಷದ ಮುದ್ದಾದ ಮಗುವನ್ನು ಬದುಕಿಸಿಕೊಂಡಿದ್ದಲ್ಲದೆ ಪ್ರಪ್ರಥಮವಾಗಿ ಮೂವರು ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಮೂಲಕ ಪ್ರಾರಂಭವಾದ ವಾರ್ಷಿಕೋತ್ಸವ ಇಂದು ವರ್ಷಕ್ಕೆ ಕನಿಷ್ಠ ನೂರು ಜನರನ್ನು ಪ್ರೋತ್ಸಾಹಿಸಿ ಗೌರವಿಸುವಷ್ಟು ಬೆಳೆದು ಬಿಟ್ಟಿದೆ.

ಅಲ್ಲಿಂದ ಪ್ರತಿವರ್ಷ ಮಂಗಳೂರಿನ ಪುರಭವನದಲ್ಲಿ ವಾರ್ಷಿಕೋತ್ಸವವನ್ನು ನೆರವೇರಿಸಿ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಮೂಲಕ ನನ್ನ ‘ಕಥಾಬಿಂದು’ ಸಂಸ್ಥೆಯನ್ನು ಬೆಳೆಸುತ್ತಾ ಪೋಷಿಸುತ್ತ ಬಂದಾಗ ಕೆಲವು ಗಣ್ಯರು ನನ್ನ ಸಂಸ್ಥೆಗೆ ಕೈ ಜೋಡಿಸಿದರು. ಅವರಲ್ಲಿ ಪ್ರಮುಖವಾದವರು ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು. ಇವರ ಸಲಹೆ ಸಹಕಾರದಿಂದ ‘ಕಥಾಬಿಂದು’ ಎಂದಷ್ಟೆ ಇದ್ದ ಸಂಸ್ಥೆಯು ‘ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ’ಎಂದಾಯಿತು. ಮುದ್ದಾದ ಮಗುವಿನಂತಿದ್ದ ಸಂಸ್ಥೆ ಯುವಕನಂತಾಗಿ ಹೋಯಿತು. ಯುವಕನಾದ ನಂತರ ಅದರದೆ ಆದ ಹಲವಾರು ಕನಸುಗಳು ಇರುತ್ತದೆಯಲ್ಲವೆ? ಆಗ ಯುವಕನ ಆಸೆಯಂತೆ ‘ಕಥಾಬಿಂದು ಪ್ರಕಾಶನ’ ಎಂದು ಮರು ನಾಮಕರಣ ಮಾಡಿ ೨೭. ೦೮. ೨೦೧೬ ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಪೇಜಾವರ ಸ್ವಾಮಿಗಳ ಆಶೀರ್ವಾದದಿಂದ ಅವರ ದಿವ್ಯ ಉಪಸ್ಥಿತಿಯಲ್ಲಿ ೯ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಇನ್ನೂ ಸುಂದರವಾಗಿ ಯುವಕ ಕಂಗೊಳಿಸುವಂತಾಯ್ತು. ಅಲ್ಲಿಂದ ನಂತರ ಈ ಯುವಕನನ್ನು ಹಿಡಿಯುವುದು ಕಷ್ಟವಾಗಿ ಹೋಗಿದ್ದು ಮತ್ತೊಂದು ಇತಿಹಾಸ.

ಅಂತಾರಾಷ್ಟ್ರೀಯ ಚಿತ್ರಕಾರರಾದ ಶ್ರೀ ಬಿ. ಕೆ. ಮಾಧವ ರಾವ್ ಇವರ ಕುಂಚದಿಂದ ಅರಳಿದ ‘ಕಥಾಬಿಂದು ಪ್ರಕಾಶನ’ದ ಲಾಂಛನದಲ್ಲಿ ಕನ್ನಡದ ಭುವನೇಶ್ವರಿ ದಕ್ಷಿಣಕನ್ನಡದ ಗಂಡು ಕಲೆ ಯಕ್ಷಗಾನ, ಕಹಳೆ, ಭುವನೇಶ್ವರಿಯ ಕೈಯಲ್ಲಿ ಪುಸ್ತಕ, ಮತ್ತೊಂದು ಭರತನಾಟ್ಯ ಭಂಗಿಯಲ್ಲಿರುವ ಯುವತಿ, ಮತ್ತೊಂದು ಕಡೆ ಲೇಖನಿ ಪುಸ್ತಕ ಹೀಗೆ ಸಾಂಸ್ಕೃತಿಕ ಕಲೆ ಸಾಹಿತ್ಯ, ಹೀಗೆ ಹತ್ತು ಹಲವಾರನ್ನು ಬಿಂಬಿಸುವ ನಮ್ಮ ಸಂಸ್ಥೆಗೆ ಸೂಕ್ತವಾದ ಲಾಂಛನವನ್ನು ಬಿಡಿಸಿಕೊಟ್ಟು ನನ್ನ ಸಂಸ್ಥೆಯನ್ನು ಮತ್ತೂ ಸುಂದರವಾಗಿಸಿದ್ದಾರೆ. ಹಾಗೆ ಬೆಳೆದ ಯುವಕ ಪ್ರಥಮವಾಗಿ ಅಡಿ ಇಟ್ಟಿದ್ದು ಮಲೇಷಿಯಾ ದೇಶಕ್ಕೆ. ಅಲ್ಲಿ ಯಶಸ್ವಿಯಾಗಿ ಕನ್ನಡದ ಕಂಪು ಪ್ರಥಮ ಕಾರ್ಯಕ್ರಮವನ್ನು ನಡೆಸಿದ ನಂತರ ದುಬೈಗೆ ಹಾರಿ ಅಲ್ಲಿ ಕನ್ನಡದ ಕಂಪು ಸರಣಿ ಎರಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೋ ನಿಜವಾದರೂ ಅಲ್ಲಿ ಕೆಲವೊಂದು ತೊಡಕಿನಿಂದಾಗಿ, ವೀಸಾ ಸಮಯಕ್ಕೆ ನಮ್ಮ ಕೈಗೆ ಬಾರದೆ ಬೇರೊಂದು ವೀಸಾವನ್ನು ಮಾಡಿಸಬೇಕಾದ ಪರಿಸ್ಥಿತಿ ಬಂದು ನಾವು ತುಂಬಾ ನಷ್ಟವನ್ನು ಎದುರಿಸಬೇಕಾಯ್ತು. ಆ ನಷ್ಟಕ್ಕೆ ಹೆದರಿ ಕೈ ಕಟ್ಟಿ ಕುಳಿತು ಬಿಟ್ಟಿದ್ದರೆ ಒಬ್ಬ ಸುಂದರ ಯುವಕನ ಅಕಾಲಿಕ ಮರಣಕ್ಕೆ ನಾನು ಮೂಕ ಪ್ರೇಕ್ಷಕನಾಗಿರುತ್ತಿದ್ದೆ. ಆದರೆ ನಾನು ಯಾವುದಕ್ಕೂ ಹೆದರದೆ ಧೈರ್ಯವಾಗಿ ಮುಂದೆ ಆ ನಷ್ಟವನ್ನು ಹೇಗಾದರೂ ಭರಿಸುವ ಶಕ್ತಿ ಸಿಗುತ್ತದೆ ಎಂದು ಮುನ್ನುಗ್ಗಿದೆ. ಆದರೆ ನನಗೆ ಆಗ ಧೈರ್ಯವಾಗಿ ಮುನ್ನುಗ್ಗದೆ ಬೇರೆ ದಾರಿಯೇ ಇರಲಿಲ್ಲ. ಒಂದು ವೇಳೆ ನಾನು ಆ ಧೈರ್ಯವನ್ನು ಭರಿಸದೆ ಹೋಗಿದ್ದರೆ ಸಂಸ್ಥೆಯ ಅವಸಾನ ಮಾತ್ರವಲ್ಲ ನನ್ನ ಅವಸಾನವೂ ಆಗುತ್ತಿತ್ತು. ಆದರೆ ‘ಕಥಾಬಿಂದು ಪ್ರಕಾಶನ’ ಎನ್ನವ ಯುವಕನಲ್ಲಿ ಶಕ್ತಿ ಇಲ್ಲದಿದ್ದರೂ ಯುಕ್ತಿ ಮಾತ್ರ ಯಥೇಚ್ಛವಾಗಿ ಇದ್ದಿದ್ದರಿಂದಾಗಿ, ದುಬೈಯಿಂದ ಮರಳಿ ಬಂದ ಒಂದೇ ತಿಂಗಳಲ್ಲಿ ಮುಂಬೈ ಮಹಾನಗರದಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ, ನಂತರ ಕೇವಲ ಹದಿನೈದೇ ದಿನಗಳಲ್ಲಿ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಮತ್ತೊಂದು ಯಶಸ್ವೀ ಕಾರ್ಯಕ್ರಮವನ್ನು ನಡೆಸಿ, ನಂತರ ಮತ್ತೆ ಒಂದು ತಿಂಗಳಲ್ಲಿ ಚಿತ್ರದುರ್ಗ, ಭದ್ರಾವತಿ, ಮತ್ತೆ ಚಿತ್ರದುರ್ಗ, ಮತ್ತೆ ಮಂಗಳೂರು, ಮತ್ತೆ ಉಡುಪಿ, ಹೀಗೆ ಪಟ್ಟಿ ಬೆಳೆಯುತ್ತಾ ಒಂದೇ ವರ್ಷದಲ್ಲಿ ಅಂದರೆ ದುಬೈಯಿಂದ ಮರಳಿ ಬಂದ ಕೇವಲ ಏಳೆಂಟು ತಿಂಗಳಲ್ಲಿ ಎಂಟು ಯಶಸ್ವೀ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದೆ ಎಂದರೆ ಅದರ ಬೆಳವಣಿಗೆಯನ್ನು ಕಂಡು ನನಗೆ ಸಂತೋಷವಾದರೆ ಬೆರಗಾಗಿ ನೋಡಿದವರು ಹಲವರು.

ಆದರೆ ಪ್ರಾರಂಭದಲ್ಲಿ ವರ್ಷಕ್ಕೆ ಒಂದು ಕಾರ್ಯಕ್ರಮವನ್ನು ನಡೆಸಲು ತುಂಬಾ ಕಷ್ಟ ಪಡುತ್ತಿದ್ದ ಕಥಾಬಿಂದು ಪ್ರಕಾಶನ ಇಂದು ವರ್ಷಕ್ಕೆ ಹತ್ತು ಹನ್ನೆರಡು ಕಾರ್ಯಕ್ರಮಗಳನ್ನು ನಡೆಸುವಷ್ಟು ಬೆಳೆದಿದೆ ಎಂದರೆ ಜನರು ನಮ್ಮ ಸಂಸ್ಥೆಯ ಮೇಲಿಟ್ಟಿರುವ ಪ್ರೀತಿ ಗೌರವ ವಿಶ್ವಾಸ. ಈ ವಿಶ್ವಾಸ ಬರಲು ನಾನು ಹಗಲಿರುಳು ಶ್ರಮಿಸಿದ್ದೇನೆ. ಕಾಲಿಗೆ ಧರಿಸಿದ ಚಪ್ಪಲಿಗಳನ್ನು ಎಷ್ಟೋ ಸವೆಸಿದ್ದೇನೆ. ಇನ್ನೆಷ್ಟೋ ಅವಮಾನವನ್ನು ಭರಿಸಿ ನುಂಗಿದ್ದೇನೆ. ಎಷ್ಟೋ ದುಃಖಕರ ಸನ್ನಿವೇಶವನ್ನು ಎದುರಿಸಿದ್ದೇನೆ. ಅದು ನನಗೆ ಮಾತ್ರ ಗೊತ್ತು. ಆದರೆ ಈ ಸಂಸ್ಥೆಯನ್ನು ಮುನ್ನಡೆಸಿದ್ದು ಮಾತ್ರ ನಾನೊಬ್ಬನೇ ಆದರೂ ಇದರಲ್ಲಿ ನನ್ನ ಮಡದಿ ಮಕ್ಕಳ ಸಹಕಾರ ತುಂಬಾ ಇದೆ. ಅದು ಬೆಲೆ ಕಟ್ಟಲಾಗದು. ನನಗೆ ನಾನೇ ಸೈನಿಕ. ಶತ್ರುಗಳು ಎದುರಲ್ಲಿಯೇ ಇರುತ್ತಾರೆ ಅವರನ್ನು ಗುರುತಿಸುವುದು ತುಂಬಾ ಕಷ್ಟದ ಕೆಲಸ. ಆದರೆ ನಾನು ಈ ಹಾದಿಯನ್ನು ಸವೆಸಿ ಬರುವಾಗ ಬರೀ ಕಲ್ಲು ಮುಳ್ಳಿನ ಹಾದಿಯಾಗಿತ್ತು. ಬರೀ ಕಲ್ಲು ಮುಳ್ಳಿನ ಹಾದಿಯಾದರೆ ಹೇಗೋ ಸವೆಸಿ ಬಂದು ಬಿಡಬಹುದು. ಆದರೆ ಆ ದಾರಿಯಲ್ಲಿ ನಡೆದು ಬರುವಾಗ ದುಷ್ಟ ಮೃಗಗಳು ಬಂದರೆ... ದಾರಿಯನ್ನು ಸವೆಸುವುದಾದರೂ ಹೇಗೆ? ಅದು ತುಂಬಾ ದುರ್ಗಮವಾದ ದಾರಿಯಾಗುವುದಿಲ್ಲವೆ..? ಆದರೂ ನಾನು ಎದೆಗುಂದದೆ ಆ ದಾರಿಯನ್ನು ಸವೆಸಿದ್ದೇನೆ. ದುಷ್ಟ ಮೃಗಗಳು ನಾನು ಸವೆಸಿ ಬರುತ್ತಿರುವ ವೇಗವನ್ನು ಕಂಡು ಆ ಪ್ರಾಣಿಗಳೆ ಮೌನವಾಗಿ ದಾರಿಯನ್ನು ಬಿಟ್ಟು ಕೊಟ್ಟಿವೆ. ಇಂದು ನನಗೆ ಕಾರ್ಯಕ್ರಮ ಮಾಡಬೇಕೆಂದರೆ ಕಷ್ಟವೇ ಆಗುವುದಿಲ್ಲ ಈ ಕಾದಂಬರಿ ಬರೆಯುವುದಕ್ಕಿಂತಲೂ ಸುಲಭವಾಗಿ ಹೋಗಿದೆ. ಅದೇ ಪ್ರಾರಂಭದಲ್ಲಿ ಈ ಕಾರ್ಯಕ್ರಮಗಳು ಯಾರಿಗೆ ಬೇಕು ಎನ್ನುವಷ್ಟು ನನಗೆ ಬೇಸರವಾಗಿದ್ದಿದೆ.

ಈಗಲೂ ನನಗಿರುವ ಒಂದೇ ಆಸೆಯೆಂದರೆ ವರ್ಷಕ್ಕೆ ಒಂದು ಕಾರ್ಯಕ್ರಮ ಅದು ಸಾಹಿತ್ಯೋತ್ಸವ ಎನ್ನುವ ಹೆಸರಿನಲ್ಲಿ ‘ಚೈತನ್ಯ ಶ್ರೀ’ ಪ್ರಶಸ್ತಿಯನ್ನು ನಿತ್ಯ ನಿರಂತರವಾಗಿ ಕೊಡುತ್ತಿರಬೇಕು ಅನ್ನುವ ಆಸೆ. ಆ ಕಾರಣಕ್ಕಾದರೂ ನಾನು ಈ ‘ಕಥಾಬಿಂದು ಲಿಟ್ರೇಚರ್ ಆ್ಯಂಡ್ ಕಲ್ಚರಲ್ ಫೌಂಡೇಷನ್ (ಟ್ರಸ್ಟ್)’ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಬದಲಾಯಿಸಿ ವಿದೇಶಿ ಸಾಧಕರು ದೇಶದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಇನ್ನು ಮುಂದೆ ನಿತ್ಯ ನಿರಂತರವಾಗಿ ಕಾರ್ಯಕ್ರಮ ನಡೆಯುವಂತೆ ಮಾಡಬೇಕು ಈ ಕಾರ್ಯಕ್ಕೆ ತುಂಬಾ ಶಕ್ತಿ ಬೇಕು. ಆ ಶಕ್ತಿ ನಿಮ್ಮ ಈ ಓದಿನಿಂದ ಬರಬೇಕು ಓದುಗರಾದ ನೀವೆ ನನಗೆ ಶ್ರೀರಕ್ಷೆ. ನೀವು ಕೊಂಡು ಓದುವ ಒಂದು ಪುಸ್ತಕದ ಬೆಲೆಯಲ್ಲಿ ೨೫% ಈ ಟ್ರಸ್ಟ್ ಸ್ಥಾಪನೆಗೆ ವಿನಿಯೋಗವಾದರೆ ಇನ್ನು ಉಳಿದ ೨೫% ಭಾಗ ನನ್ನ ಜೀವನೋಪಾಯಕ್ಕೆ ವಿನಿಯೋಗವಾಗಿ ಉಳಿದ ೨೫% ಭಾಗದಲ್ಲಿ ಮುದ್ರಣದ ಖರ್ಚು, ಕಛೇರಿಯ ನಿರ್ವಹಣೆ, ಕೆಲಸಗಾರರ ಸಂಬಳ ಇನ್ನು ಉಳಿದ ೨೫% ವಾರ್ಷಿಕೋತ್ಸವ ಕಾರ್ಯಕ್ರಮ ಈ ಎಲ್ಲ ಖರ್ಚುವೆಚ್ಚಗಳು ಇದರಲ್ಲಿಯೇ ನಡೆಯುವಂತೆ ಒಂದು ಯೋಜನೆಯನ್ನು ರೂಪಿಸಿದ್ದೇನೆ. ಒಮ್ಮೆ ಯೋಚಿಸಿ. ಕಥಾಬಿಂದು ಎನ್ನುವ ಕನ್ನಡದ ಹೆಸರೇ ದೇಶವಿದೇಶಗಳಲ್ಲಿ ಬಳಕೆಯಾದರೆ ನಮ್ಮ ಕನ್ನಡದ ಕಂಪು ಹೇಗೆ ರಾಷ್ಟ್ರವ್ಯಾಪಿ ಪಸರಿಸಿದೆ ಎಂದು ಊಹಿಸಿ. ಈ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ನಿಮ್ಮ ಸಹಕಾರ ಮುಖ್ಯ. ಈ ಟ್ರಸ್ಟ್ನಿಂದ ಏನು ಉಪಯೋಗವೆಂದು ನೀವು ಕೇಳಿದರೆ ನಾನು ನಿಮಗೆ ಆ ವಿಷಯವನ್ನು ಹೇಳುತ್ತೇನೆ. ಅದೇನೆಂದರೆ, ಇದುವರೆಗೂ ಯಾವುದೇ ಪ್ರಶಸ್ತಿ ಬೇಕೆಂದರೂ ಅದಕ್ಕೊಂದು ಅರ್ಜಿಯನ್ನು ಹಾಕಿ ಕೇಳಬೇಕು. ಒಬ್ಬ ನಿಜವಾದ ಸಾಧಕನಿಗೆ ಈ ರೀತಿ ಅರ್ಜಿ ಹಾಕಿ ಪ್ರಶಸ್ತಿಯನ್ನು ಬೇಡಿ ಪಡೆದುಕೊಳ್ಳುವುದು ಹಿಂಸೆಯ ಕೆಲಸ ಹಾಗಾಗಿ ನನ್ನ ಸಂಸ್ಥೆ ಮುಂದೆ ಕೊಡುವ ಪ್ರಶಸ್ತಿಗೆ ಯಾರೂ ಯಾವುದೇ ಕಾರಣಕ್ಕೂ ಅರ್ಜಿಯನ್ನು ಹಾಕುವಂತಿಲ್ಲ. ಅದು ಯಾವುದೇ ಕ್ಷೇತ್ರವಾಗಿರ ಬಹುದು. ಆದರೆ ಅದರಲ್ಲಿ ಮೊದಲ ಆದ್ಯತೆ ಸಾಹಿತ್ಯ ಕ್ಷೇತ್ರಕ್ಕೆ ಎಂದು ಬೇಕಾದರೆ ಹೇಳಬಲ್ಲೆ. ಅಂಥವರನ್ನು ನಮ್ಮ ಸಂಸ್ಥೆಯೇ ಗುರುತಿಸಿ ಅವರಿಗೊಂದು ಕರೆ ಮಾಡಿ ‘ಚೈತನ್ಯ ಶ್ರೀ’ ಪ್ರಶಸ್ತಿಯನ್ನು ಕೊಡುವುದಲ್ಲದೆ ಅವರಿಗೊಂದಿಷ್ಟು ಹಣವನ್ನು ಕೊಟ್ಟು ಸಂತೋಷದಿಂದ ಕಳುಹಿಸಿ ಕೊಡಬೇಕು ಎನ್ನುವ ಆಸೆ ಇದೆ.

ಇದು ನೀವು ಕೊಟ್ಟು ಕೊಂಡುಕೊಳ್ಳುವ ಈ ನೂರು ರೂಪಾಯಿಯ ಪುಸ್ತಕದಿಂದ ನೆರವೇರುತ್ತದೆ. ಇದೇ ನೀವು ಮಾಡುವ ಸಹಕಾರ. ಇರಲಿ ನಿಮ್ಮ ಸಹಕಾರಕ್ಕೆ ನಾನು ಋಣಿ. ಈಗ ನೇಪಾಳಕ್ಕೆ ಹಾರುವ ಮೂಲಕ ತನಗೆ ಬಿದ್ದ ಭಾರಿ ನಷ್ಟವನ್ನು ಹೇಗೋ ನಿಭಾಯಿಸಿ ಬಿಟ್ಟಿದೆ. ಹಾಗೆ ನಷ್ಟ ನಿಭಾಯಿಸಿದ್ದರಿಂದ ‘ಕಥಾಬಿಂದು ಪ್ರಕಾಶನ’ ಎನ್ನುವ ಯುವಕ ಅಕಾಲಿಕ ಮರಣಕ್ಕೆ ಗುರಿಯಾಗದೆ ಧೈರ್ಯವಾಗಿ ಶಕ್ತಿ ಇಲ್ಲದಿದ್ದರೂ ಯುಕ್ತಿಯಿಂದ ಹೋರಾಡಿ ಒಂದು ಹಂತದಲ್ಲಿ ಗೆದ್ದು ಬಿಟ್ಟಿದ್ದಾನೆ ನಿಜ. ಆದರೆ ಈ ಗೆಲುವಿನಲ್ಲಿ ಹಲವಾರು ಜನ ಕೈ ಜೋಡಿಸಿದ್ದಾರೆ. ಅದರಲ್ಲಿ ಭದ್ರಾವತಿಯ ಪದ್ಮಾವತಿ ಸಚಿತಾನಂದ ಗುಪ್ತ, ವೀರಶೈವ ಮಹಾಸಂಸ್ಥಾನದ ಶ್ರೀ ಷ|| ಬ್ರ|| ರಾಚೋಟೇಶ್ವರ ಶಿವಾಚಾರ್ಯರು, ಉಡುಪಿ ಮಠದ ಶ್ರೀ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದರು, ಹಾಗೂ ನನ್ನ ಪ್ರತಿಯೊಂದು ಕೆಲಸಕ್ಕೆ ಸಹಾಯಕರಾಗಿರುವ ಶ್ರೀ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಮತ್ತು ಹಿರಿಯ ಕಿರಿಯ ಕವಿಗಳು. ಇದೆಲ್ಲದರ ಜೊತೆಗೆ ಕೇವಲ ಕಥಾಬಿಂದು ಪ್ರಕಾಶನ ಎಂದು ಹೆಸರಿಗೆ ಮಾತ್ರವಲ್ಲದೆ ತನ್ನ ಹೆಸರಿನಂತೆ ಪುಸ್ತಕ ಪ್ರಕಾಶನಕ್ಕೂ ಕೈ ಹಾಕಿ ಇದುವರೆಗೂ ಸುಮಾರು ನೂರಿಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಅದರಲ್ಲಿ ಪ್ರಮುಖವಾದದ್ದು ಮರಣಶಾಸನ, ಕಾಣದ ನೆರಳು, ಮತ್ತೊಂದು ಅಭೇದ್ಯ, ಆ ಒಂದು ದಿನ, ಪಿ. ವಿ. ಪ್ರದೀಪ್ ಕುಮಾರ್ ಸಮಗ್ರ ಸಾಹಿತ್ಯ, ಚಂಡಮಾರುತ, ಸಂಚಿನ ಸುಳಿ ಭಾಗ ೧, ಭಾಗ-೨ ಒಳಸುಳಿ, ಪಾತ್ರಿ, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಏನೂ ಇಲ್ಲದ ನಾನು ಇಂದು ಒಂದು ಸುಂದರವಾದ ಮನೆ, ಓಡಾಡಲು ಗಾಡಿ, ಮಾತ್ರವಲ್ಲದೆ ದೇಶ ವಿದೇಶಗಳನ್ನು ಸುತ್ತಿ ಬಂದದ್ದಲ್ಲದೆ, ಈಗ ಕಥಾಬಿಂದು ಪ್ರಕಾಶನ ಎನ್ನುವ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ವರ್ಷಕ್ಕೆ ಒಂದು ಲಕ್ಷದವರೆಗೆ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ಇದರ ಜೊತೆಗೆ ತನ್ನದೆ ಆದ ಒಂದು ಸ್ವಂತ ಕಛೇರಿಯನ್ನು ಹೊಂದುವ ಆಸೆಯನ್ನು ಪಡುತ್ತಿದೆ ಕಥಾಬಿಂದು ಪ್ರಕಾಶನ. ನಾನು ಮೊದಲೇ ಹೇಳಿದಂತೆ ಕನಸು ಕಾಣಲು ಸುಂಕ ಕೊಡಬೇಕಾಗಿಲ್ಲ. ಸುಂಕವಿಲ್ಲದ ಮನರಂಜನೆಯನ್ನು ಪಡೆಯುವುದೆಂದರೆ ಅದು ಕನಸು ಕಾಣುವುದು. ಅಂತೆಯೇ ಈಗ ಕಛೇರಿಯ ಕನಸು ಸಾಕಾರಗೊಳ್ಳುವುದರಲ್ಲಿದೆ. ಮುಂದೆ ಹೇಗೂ ದೇಶ ವಿದೇಶಗಳನ್ನು ಸುತ್ತುವುದು ಇದೆಯಲ್ಲ ಅದು ಇದ್ದೇ ಇರುತ್ತದೆ. ಇದರ ಜೊತೆಗೆ ಹೇಗೂ ನನ್ನದೇ ಆದ ಕನ್ನಡ ಸಾಹಿತ್ಯಕ್ಕಾಗಿಯೇ ‘ಕಥಾಬಿಂದು’ ಯೂಟ್ಯೂಬ್ ಚಾನಲ್' ಪ್ರಾರಂಭಿಸಿದ್ದೇನೆ ಈಗಾಗಲೇ ಹಲವಾರು ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದೇನೆ. ಎಲೆಮರೆಯ ಸಾಧಕರನ್ನು ಗುರುತಿಸಿ ಅವರ ಬಗ್ಗೆ ಕಥಾಬಿಂದು ಸಾಧಕರ ಸರಣಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೇನೆ... ನೀವು ನೋಡಿ  ಸಬ್ ಸ್ಕ್ರೈಬ್ ಆಗಿ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಿ.

ಈಗ ನಾನು ಸಂಪೂರ್ಣವಾಗಿ ಸಾಹಿತ್ಯದಲ್ಲಿಯೇ ತೊಡಗಿ ಕೊಂಡಿದ್ದೇನೆ. ಈಗ ನನ್ನ ಪ್ರತಿಯೊಂದು ಕೆಲಸವು ಈ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸವೇ ಆಗಿದೆ. ಸಾಹಿತ್ಯ ಸಾಂಸ್ಕೃತಿಕ ಕೆಲಸವಲ್ಲದೆ ಮತ್ತೊಂದು ಕೆಲಸವಿಲ್ಲ. ಅದಕ್ಕೆ ಸಮಯವೂ ಇಲ್ಲ. ಈ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ಜೊತೆಗೆ ವರ್ಷಕ್ಕೊಂದು ಕಾದಂಬರಿಯನ್ನು ನಾನು ನಿಮ್ಮ ಕೈಗೆ ಇಡುತ್ತೇನೆ. ಮೊದಲಾಗಿದ್ದರೆ ಪತ್ರಿಕೆಯವರಿಗೆ ಕಳುಹಿಸಿ ನಿಮ್ಮ ಬಳಿಗೆ ಆ ಪುಸ್ತಕ ಬರುವಷ್ಟರಲ್ಲಿ ಕಡಿಮೆ ಎಂದರೂ ಒಂದು ವರ್ಷವಾಗುತ್ತಿತ್ತು. ಈಗ ಹಾಗಲ್ಲ ಕಾದಂಬರಿ ಬರೆದು ಸಿದ್ಧವಾಗುತ್ತಿರುವಂತೆ ಪುಸ್ತಕ ರೂಪವನ್ನು ಪಡೆದು ನಿಮ್ಮ ಕೈಗಿಡುತ್ತಿದ್ದೇನೆ. ಪುಸ್ತಕ ಪ್ರಕಟಿಸುವುದರ ಜೊತೆಗೆ ಸಾಹಿತ್ಯ ಕಾರ್ಯಕ್ರಮ ಕೂಡಾ ನಡೆಯುತ್ತಿರುತ್ತದೆ. ಇದೆಲ್ಲ ಸಾಧ್ಯವಾಗಿದ್ದು ನಿಮ್ಮಿಂದ. ನಿಮಗೆ ಮತ್ತೊಮ್ಮೆ ಧನ್ಯವಾದಗಳು. ನನ್ನ ಹಸ್ತ ಪ್ರತಿಯನ್ನು ತಿದ್ದುತ್ತಿರುವ ಮಡದಿ ಸುನೀತಳಿಗೆ, ಮಕ್ಕಳಾದ ಹರ್ಷ, ಅಮೋಘರಿಗೆ, ಪ್ರತಿಯೊಂದು ಕಾದಂಬರಿಯು ಹೊರ ಬರುತ್ತಿರುವಂತೆ ನನ್ನ ಪುಸ್ತಕವನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿರುವ ಓದುಗ ದೊರೆಗಳನ್ನು ನಾನು ಹೇಗೆ ತಾನೆ ಮರೆಯಲು ಸಾಧ್ಯ? ಅವರಿಗೂ ಧನ್ಯವಾದಗಳು.

-  ಪಿ.ವಿ. ಪ್ರದೀಪ್ ಕುಮಾರ್
 ಕಥಾಬಿಂದು ಪ್ರಕಾಶನ, ಮಂಗಳೂರು.